AUS vs WI: ಆಸ್ಟ್ರೇಲಿಯಾ ವಿರುದ್ಧ ಕೊನೆಗೂ ಗೆದ್ದ ವೆಸ್ಟ್ ಇಂಡೀಸ್
AUS vs WI: ಪರ್ತ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಆತಿಥೇಯರನ್ನು ಮಣಿಸುವಲ್ಲಿ ಕೊನೆಗೂ ಯಶಸ್ವಿಯಾಗಿದೆ. ಉಭಯ ತಂಡಗಳ ನಡುವೆ ನಡೆದ ಈ ಪಂದ್ಯವನ್ನು ಕೆರಿಬಿಯನ್ ತಂಡ 37 ರನ್ಗಳಿಂದ ಗೆದ್ದುಕೊಂಡಿದೆ.
ಪರ್ತ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ (Australia vs West Indies) ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಆತಿಥೇಯರನ್ನು ಮಣಿಸುವಲ್ಲಿ ಕೊನೆಗೂ ಯಶಸ್ವಿಯಾಗಿದೆ. ಉಭಯ ತಂಡಗಳ ನಡುವೆ ನಡೆದ ಈ ಪಂದ್ಯವನ್ನು ಕೆರಿಬಿಯನ್ ತಂಡ 37 ರನ್ಗಳಿಂದ ಗೆದ್ದುಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 220 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಪೂರ್ಣ 20 ಓವರ್ ಬ್ಯಾಟಿಂಗ್ ಮಾಡಿ 5 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ವಿಂಡೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆಲ್ರೌಂಡರ್ ಆಂಡ್ರೆ ರಸೆಲ್ (Andre Russell) ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಅಬ್ಬರಿಸಿದ ಆಂಡ್ರೆ ರಸೆಲ್
ವೆಸ್ಟ್ ಇಂಡೀಸ್ ಗೆಲುವಿನ ಹೀರೋಗಳೆಂದರೆ ಅದು ಆಂಡ್ರೆ ರಸೆಲ್ (29 ಎಸೆತ, 4 ಬೌಂಡರಿ, 7 ಸಿಕ್ಸರ್ ಮತ್ತು 71 ರನ್) ಮತ್ತು ರೊಮಾರಿಯೊ ಶೆಫರ್ಡ್ (2 ವಿಕೆಟ್). ಆದರೆ ಆಸ್ಟ್ರೇಲಿಯಾ ಗೆಲುವಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಮಾಡಿದ ನಿಧಾನಗತಿಯ ಬ್ಯಾಟಿಂಗ್ ಅಡ್ಡಿಯಾಯಿತು. ಬಿರುಸಿನ ಆರಂಭದ ಹೊರತಾಗಿಯೂ, ಕಳೆದ ಪಂದ್ಯದಲ್ಲಿ ತನ್ನ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ 5 ನೇ ಶತಕ ಸಿಡಿಸಿದ್ದ ಮ್ಯಾಕ್ಸಿ, 14 ಎಸೆತಗಳಲ್ಲಿ ಕೇವಲ 12 ರನ್ ಗಳಿಸಲಷ್ಟೇ ಶಕ್ತರಾದರು. ಆಸೀಸ್ ಪರವಾಗಿ ಡೇವಿಡ್ ವಾರ್ನರ್ 49 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 81 ರನ್ ಗಳಿಸಿದರೆ ಟಿಮ್ ಡೇವಿಡ್ 19 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ಅಜೇಯ 41 ರನ್ ಗಳಿಸಿದರು. ಈ ಪಂದ್ಯದ ಸೋಲಿನ ಹೊರತಾಗಿಯೂ ಆಸ್ಟ್ರೇಲಿಯಾ 2-1 ಅಂತರದಲ್ಲಿ ಸರಣಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್‌ನ ಆರಂಭ ಕೆಟ್ಟದಾಗಿತ್ತು. ತಂಡ ಕೇವಲ 17 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇಲ್ಲಿಂದ ರೋಸ್ಟನ್ ಚೇಸ್ (20 ಎಸೆತಗಳಲ್ಲಿ 37 ರನ್) ಮತ್ತು ರೋವ್‌ಮನ್ ಪೊವೆಲ್ (21 ರನ್) ತಂಡದ ಇನ್ನಿಂಗ್ಸ್ ನಿಭಾಯಿಸಿ ತಂಡವನ್ನು 72 ರನ್‌ಗಳಿಗೆ ಕೊಂಡೊಯ್ದರು. ಆದರೆ ಒಬ್ಬರ ಹಿಂದೆ ಒಬ್ಬರಂತೆ ಈ ಇಬ್ಬರು ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.
140 ರನ್‌ಗಳ ದಾಖಲೆಯ ಜೊತೆಯಾಟ
ನಂತರ ಜೊತೆಯಾದ ರುದರ್‌ಫೋರ್ಡ್ ಮತ್ತು ಆಂಡ್ರೆ ರಸೆಲ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಶೆರ್ಫೇನ್ ರುದರ್‌ಫೋರ್ಡ್ (40 ಎಸೆತ, 5 ಬೌಂಡರಿ, 5 ಸಿಕ್ಸರ್, ಔಟಾಗದೆ 67 ರನ್) ಮತ್ತು ಮಸಲ್ ಬಾಯ್ ಆಂಡ್ರೆ ರಸೆಲ್ (29 ಎಸೆತ, 4 ಬೌಂಡರಿ, 7 ಸಿಕ್ಸರ್ ಹಾಗೂ 71 ರನ್) ಆರನೇ ವಿಕೆಟ್‌ಗೆ 140 ರನ್‌ಗಳ ದಾಖಲೆಯ ಜೊತೆಯಾಟ ನಡೆಸಿ ತಂಡವನ್ನು 200 ರ ಗಡಿ ದಾಟಿಸಿದರು. ಅಲ್ಲದೆ ಇಬ್ಬರೂ ಆರನೇ ಕ್ರಮಾಂಕ ಮತ್ತು ಏಳನೇ ಕ್ರಮಾಂಕದಲ್ಲಿ ತಲಾ ಅರ್ಧ ಶತಕ ಬಾರಿಸಿ ಅದ್ಭುತ ದಾಖಲೆ ನಿರ್ಮಿಸಿದರು.
ವಾರ್ನರ್ ಅರ್ಧಶತಕ
ಬೃಹತ ಗುರಿ ಬೆನ್ನಟ್ಟಿದ ಕಾಂಗರೂ ತಂಡ 68 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ನಾಯಕ ಮಿಚೆಲ್ ಮಾರ್ಷ್ 17 ರನ್ ಗಳಿಸಿ ಔಟಾದರು. ಆದರೆ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದ ಡೇವಿಡ್ ವಾರ್ನರ್ 49 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 81 ರನ್ ಗಳಿಸಿದ ನಂತರ ರೋಸ್ಟನ್ ಚೇಸ್‌ಗೆ ಬಲಿಯಾದರು. ಇದಾದ ಬಳಿಕ ಆರನ್ ಹಾರ್ಡಿ 17 ರನ್ ಹಾಗೂ ಜೋಶ್ ಇಂಗ್ಲಿಸ್ ಕೂಡ ಕೇವಲ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದು ಕಾಂಗರೂ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿತು.
ಈ ವಿಕೆಟ್ಗಳ ನಂತರ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ ಮೇಲೆ ಭಾರಿ ನಿರೀಕ್ಷೆಗಳಿದ್ದವು. ಆದರೆ ರೊಮಾರಿಯೊ ಶೆಫರ್ಡ್ ಅವರ ಅತ್ಯಂತ ಅಪಾಯಕಾರಿ ಯಾರ್ಕರ್‌ನಲ್ಲಿ ಮ್ಯಾಕ್ಸಿ ಕ್ಲೀನ್ ಬೌಲ್ಡ್ ಆದರು. ಟಿಮ್ ಡೇವಿಡ್ 19 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 41 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು, ಆದರೆ ಅವರಿಗೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ವೆಸ್ಟ್ ಇಂಡೀಸ್ ಪರ ರೊಮಾರಿಯೊ ಮತ್ತು ರೋಸ್ಟನ್ ತಲಾ 2 ವಿಕೆಟ್ ಕಬಳಿಸಿದರೆ, ಅಕಿಲ್ ಹುಸೇನ್ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:30 pm, Tue, 13 February 24