ಮೊದಲ ಇನಿಂಗ್ಸ್​ನಲ್ಲಿ ಹಿನ್ನಡೆ, ಆದರೂ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ

West Indies vs Australia, 1st Test: ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವು ಸೋಲನುಭವಿಸಿದೆ. ಬಾರ್ಬಡೋಸ್​ನಲ್ಲಿ ನಡೆದ ಈ ಪಂದ್ಯದಲ್ಲಿ 159 ರನ್​ಗಳ ಅಮೋಘ ಗೆಲುವು ದಾಖಲಿಸುವ ಮೂಲಕ ಆಸೀಸ್ ಪಡೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯಲ್ಲಿ ಶುಭಾರಂಭ ಮಾಡಿದೆ.

ಮೊದಲ ಇನಿಂಗ್ಸ್​ನಲ್ಲಿ ಹಿನ್ನಡೆ, ಆದರೂ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ
Australia

Updated on: Jun 28, 2025 | 7:28 AM

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 22 ಆಗುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂವರು ಪೆವಿಲಿಯನ್ ಗೆ ಮರಳಿದ್ದರು.

ಇದರ ನಡುವೆ ಕ್ರೀಸ್ ಕಚ್ಚಿ ಆಡಿದ ಟ್ರಾವಿಸ್ ಹೆಡ್ 59 ರನ್ ಗಳ ಕೊಡುಗೆ ನೀಡಿದರು. ಇದಾಗ್ಯೂ ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್ ನಲ್ಲಿ 180 ರನ್ ಗಳಿಸಿ ಆಲೌಟ್ ಆಯಿತು. ವೆಸ್ಟ್ ಇಂಡೀಸ್ ಪರ ಜೇಡನ್ ಸೀಲ್ಸ್ 60 ರನ್ ಗೆ 5 ವಿಕೆಟ್ ಪಡೆದರೆ, ಶಮರ್ ಜೋಸೆಫ್ 46 ರನ್ ಗೆ 4 ವಿಕೆಟ್ ಕಬಳಿಸಿದರು.

ಇನ್ನು ಮೊದಲ ಇನಿಂಗ್ಸ್ ಆಡಿದ ವೆಸ್ಟ್‌ ಇಂಡೀಸ್‌ ತಂಡವು ಆಸೀಸ್ ವೇಗಿಗಳ ಮಾರಕ ದಾಳಿಗೆ ತತ್ತರಿಸಿತು. ಪರಿಣಾಮ ಕೇವಲ 190 ರನ್ ಗಳಿಗೆ ಸರ್ವಪತನ ಕಂಡಿತು.

ದ್ವಿತೀಯ ಇನಿಂಗ್ಸ್:

ಮೊದಲ ಇನಿಂಗ್ಸ್ ನಲ್ಲಿ 10 ರನ್ ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ (61), ಬ್ಯೂ ವೆಬ್ ಸ್ಟರ್ (63) ಹಾಗೂ ಅಲೆಕ್ಸ್ ಕ್ಯಾರಿ (65) ಅರ್ಧಶತಕ ಬಾರಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್ ನಲ್ಲಿ 310 ರನ್ ಕಲೆಹಾಕಿತು.

ಮೊದಲ ಇನಿಂಗ್ಸ್ ನಲ್ಲಿನ 10 ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ನಲ್ಲಿ 301 ರನ್ ಗಳ ಗುರಿ ಪಡೆದ ವೆಸ್ಟ್ ಇಂಡೀಸ್ ಜೋಶ್ ಹೇಝಲ್​ವುಡ್ ಅವರ ಮಾರಕ ದಾಳಿಗೆ ತತ್ತರಿಸಿತು. ಪರಿಣಾಮ ದ್ವಿತೀಯ ಇನಿಂಗ್ಸ್ ನಲ್ಲಿ ಕೇವಲ 141 ರನ್ ಗಳಿಗೆ ಆಲೌಟ್ ಆಗಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ತಂಡ 159 ರನ್ ಭರ್ಜರಿ ಜಯ ಸಾಧಿಸಿದೆ. ಆಸೀಸ್ ಪರ 12 ಓವರ್‌ಗಳನ್ನು ಎಸೆದು ಕೇವಲ 43 ರನ್ ಗೆ 5 ವಿಕೆಟ್ ಕಬಳಿಸಿದ ಜೋಶ್ ಹೇಝಲ್​ವುಡ್ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕ್ರೇಗ್ ಬ್ರಾಥ್‌ವೈಟ್ , ಜಾನ್ ಕ್ಯಾಂಪ್‌ಬೆಲ್ , ಕೀಸಿ ಕಾರ್ಟಿ , ಬ್ರಾಂಡನ್ ಕಿಂಗ್ , ರೋಸ್ಟನ್ ಚೇಸ್ (ನಾಯಕ) , ಶೈ ಹೋಪ್ (ವಿಕೆಟ್ ಕೀಪರ್) , ಜಸ್ಟಿನ್ ಗ್ರೀವ್ಸ್ , ಜೋಮೆಲ್ ವಾರಿಕನ್ , ಅಲ್ಜಾರಿ ಜೋಸೆಫ್ , ಶಮರ್ ಜೋಸೆಫ್ , ಜೇಡನ್ ಸೀಲ್ಸ್.

ಇದನ್ನೂ ಓದಿ: ಟಿ20 ಕ್ರಿಕೆಟ್‌ನಲ್ಲಿ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಕೀರನ್ ಪೊಲಾರ್ಡ್

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ , ಸ್ಯಾಮ್ ಕೊನ್​ಸ್ಟಾಸ್ , ಕ್ಯಾಮರೋನ್ ಗ್ರೀನ್ , ಜೋಶ್ ಇಂಗ್ಲಿಸ್ , ಟ್ರಾವಿಸ್ ಹೆಡ್ , ಬ್ಯೂ ವೆಬ್‌ಸ್ಟರ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ನಾಥನ್ ಲಿಯಾನ್ , ಜೋಶ್ ಹೇಝಲ್​ವುಡ್.