AUS v NZ: ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಸೀಸ್;​ ನಾಯಕ ಫಿಂಚ್​ಗೆ ಗೆಲುವಿನ ಬೀಳ್ಕೊಡುಗೆ

| Updated By: ಪೃಥ್ವಿಶಂಕರ

Updated on: Sep 11, 2022 | 7:51 PM

AUS v NZ: ಮೊದಲು ಬ್ಯಾಟ್ ಮಾಡಿದ ಆಸೀಸ್ ತಂಡ 5 ವಿಕೆಟ್ ಕಳೆದುಕೊಂಡು 267 ರನ್ ಗಳಿಸಿತು. ಗುರಿ ಬೆನ್ನತ್ತಿದ ಕಿವೀಸ್ ಬಳಗ 242 ರನ್​ಗಳಿಗೆ ಆಲೌಟ್​ ಆಗಿ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸೋಲನ್ನು ಅನುಭವಿಸಿತು.

AUS v NZ: ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಸೀಸ್;​ ನಾಯಕ ಫಿಂಚ್​ಗೆ ಗೆಲುವಿನ ಬೀಳ್ಕೊಡುಗೆ
Follow us on

ಆಸೀಸ್ ನಾಯಕ ಆರನ್ ಫಿಂಚ್ (Aaron Finch) ಇಂದು ತನ್ನ ವೃತ್ತಿಜೀವನದ ಕೊನೆಯ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದರು. ಆದರೆ ಎಂದಿನಂತೆ ಫಿಂಚ್ ಬ್ಯಾಟ್ ಅಬ್ಬರಿಸಲಿಲ್ಲ. ಟಿಮ್ ಸೌಥಿ ಇನ್ಸ್ವಿಂಗ್ ಎಸೆತದಲ್ಲಿ ಫಿಂಚ್ ವಿಕೆಟ್ ಉರುಳಿತು. ಆದರೆ ಜವಬ್ದಾರಿಯುತ ಬ್ಯಾಟಿಂಗ್ ಮಾಡಿದ ಮಾಜಿ ನಾಯಕ ಸ್ಟೀವ್ ಸ್ಮಿತ್ ಶತಕದ ಇನ್ನಿಂಗ್ಸ್ ಆಡಿದರು. ಅವರ ಆಟದ ನೆರವಿನಿಂದಾಗಿ ಮೊದಲು ಬ್ಯಾಟ್ ಮಾಡಿದ ಆಸೀಸ್ ತಂಡ 5 ವಿಕೆಟ್ ಕಳೆದುಕೊಂಡು 267 ರನ್ ಗಳಿಸಿತು. ಗುರಿ ಬೆನ್ನತ್ತಿದ ಕಿವೀಸ್ ಬಳಗ 242 ರನ್​ಗಳಿಗೆ ಆಲೌಟ್​ ಆಗಿ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸೋಲನ್ನು ಅನುಭವಿಸಿತು. ಈ ಮೂಲಕ ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡಿದ ನಾಯಕ ಫಿಂಚ್​ಗೆ ಆಸೀಸ್​ ತಂಡ ಗೆಲುವಿನ ಬೀಳ್ಕೊಡುಗೆ ನೀಡಿದೆ.

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಐದನೇ ಓವರ್‌ನಲ್ಲಿ ಜೋಶ್ ಇಂಗ್ಲಿಷ್ ವಿಕೆಟ್ ಪಡೆಯುವ ಮೂಲಕ ಆಸೀಸ್​ಗೆ ಮೊದಲ ಹೊಡೆತ ನೀಡಿದರು. ಬಳಿಕ ಟಿಮ್ ಸೌಥಿ ಆರನೇ ಓವರ್‌ನಲ್ಲಿ ಆರೋನ್ ಫಿಂಚ್ ಅವರನ್ನು ಬೌಲ್ಡ್ ಮಾಡಿದರು. ಫಿಂಚ್ 12 ಎಸೆತಗಳಲ್ಲಿ 5 ರನ್ ಗಳಿಸಿ ಕೊನೆಯ ಏಕದಿನ ಪಂದ್ಯದ ಇನ್ನಿಂಗ್ಸ್‌ ಮುಗಿಸಿದರು. ಮೊದಲ 10 ಓವರ್‌ಗಳಲ್ಲಿ ಆಸ್ಟ್ರೇಲಿಯಾದ ಸ್ಕೋರ್ 19 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಆದರೆ ಜವಬ್ದಾರಿಯುತ ಬ್ಯಾಟಿಂಗ್ ಮಾಡಿದ ಸ್ಟೀವ್ ಸ್ಮಿತ್ ತಂಡದ ಇನ್ನಿಂಗ್ಸ್ ಮುನ್ನಡೆಸಿದರು. ಸ್ಟೀವ್ ಸ್ಮಿತ್-ಮಾರ್ನಸ್ ಲಬುಚೆನ್ ಜೋಡಿ ತಂಡಕ್ಕೆ ದೊಡ್ಡ ರನ್ ಗಳಿಸಲು ನೆರವಾಯಿತು. ಈ ಜೋಡಿ ಒಟ್ಟಾರಿಯಾಗಿ 118 ರನ್ ಕಲೆಹಾಕಿತು.

ಆ ಬಳಿಕ ಸ್ಮಿತ್ ಅಲೆಕ್ಸ್ ಕ್ಯಾರಿ ಜತೆಗೂಡಿ 69 ರನ್‌ಗಳ ಜತೆಯಾಟವಾಡಿದರು. ಲಬುಸ್ಚೆನ್ನೆ (52) ಅರ್ಧಶತಕದೊಂದಿಗೆ ಇನ್ನಿಂಗ್ಸ್ ಮುಗಿಸಿದರೆ, ಸ್ಟೀವ್ ಸ್ಮಿತ್ 127 ಎಸೆತಗಳನ್ನು ಎದುರಿಸಿ ತಮ್ಮ ODI ವೃತ್ತಿಜೀವನದ ಹನ್ನೆರಡನೇ ಶತಕ ಬಾರಿಸಿದರು. ನಿಧಾನಗತಿಯ ಅರ್ಧ ಶತಕದ ನಂತರ ಗೇರ್ ಬದಲಾಯಿಸಿದ ಸ್ಮಿತ್ ಮುಂದಿನ 50 ರನ್ ಗಳಿಸಲು ಕೇವಲ 46 ಎಸೆತಗಳನ್ನು ತೆಗೆದುಕೊಂಡರು. ಸ್ಮಿತೆಕ್ ಅವರ 105 ರನ್‌ಗಳ ಇನ್ನಿಂಗ್ಸ್‌ನಿಂದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 267 ರನ್ ಗಳಿಸಿತು.

ಬಳಿಕ ಫಿಂಚ್​ಗೆ ಗೆಲುವಿನ ಉಡುಗೂರೆ ನೀಡಲು ಮುಂದಾದ ಆಸೀಸ್ ತಂಡ ಕಿವೀಸ್ ಮಣಿಸಿ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿತು. ಆದರೆ ಗ್ಲೆನ್ ಫಿಲಿಪ್ಸ್ ಕ್ರೀಸ್‌ನಲ್ಲಿ ಇರುವವರೆಗೂ, ನ್ಯೂಜಿಲೆಂಡ್ ಈ ಪಂದ್ಯವನ್ನು ಗೆಲ್ಲುವ ಎಲ್ಲಾ ಸಾಧ್ಯತೆಗಳು ತೋರುತ್ತಿತ್ತು. ಆದರೆ ಫಿಲಿಪ್ಸ್ 53 ಎಸೆತಗಳಲ್ಲಿ 47 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಜಿಮ್ಮಿ ನೀಶಮ್ ಮತ್ತು ಮಿಚೆಲ್ ಸ್ಯಾಂಟ್ನರ್ ಕ್ರಮವಾಗಿ 36 ಮತ್ತು 30 ರನ್ ಗಳಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ 1 ಎಸೆತ ಬಾಕಿಯಿರುವಂತೆಯೇ 242 ರನ್‌ಗಳಿಗೆ ಆಲೌಟ್ ಆಯಿತು. ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದರು ಆದರೆ ಸಾಕಷ್ಟು ರನ್ ನೀಡಿದರು. ಕ್ಯಾಮರೂನ್ ಗ್ರೀನ್ ಮತ್ತು ಶಾನ್ ಅಬಾಟ್ ಮಾತ್ರ ಅತ್ಯುತ್ತಮ ಬೌಲಿಂಗ್ ಮಾಡಿ ತಲಾ ಎರಡು ವಿಕೆಟ್ ಪಡೆದರು.

Published On - 7:51 pm, Sun, 11 September 22