ಸೋಲಿನ ಬೆನ್ನಲ್ಲೇ ಎಚ್ಚೆತ್ತ ಆಸ್ಟ್ರೇಲಿಯಾ: ತಂಡದಿಂದ ಆರಂಭಿಕ ದಾಂಡಿಗ ಔಟ್!

ಆಸ್ಟ್ರೇಲಿಯಾ ಟೆಸ್ಟ್ ತಂಡದ ಆರಂಭಿಕ ದಾಂಡಿಗ ಜೇಕ್ ವೆದರಾಲ್ಡ್ ಕಳೆದ ಆ್ಯಶಸ್ ಸರಣಿಯಿಂದಲೂ ಸ್ಥಿರ ಪ್ರದರ್ಶನ ನೀಡಲು ಪರದಾಡುತ್ತಿದ್ದಾರೆ. ಈವರೆಗೆ ಆಡಿರುವ 6 ಟೆಸ್ಟ್ ಪಂದ್ಯಗಳ 12 ಇನ್ನಿಂಗ್ಸ್‌ಗಳಲ್ಲಿ ಕೇವಲ 20.36ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಹೀಗಾಗಿಯೇ ಇದೀಗ ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಿಂದ ಅವರನ್ನು ಕೈ ಬಿಡಲಾಗಿದೆ.

ಸೋಲಿನ ಬೆನ್ನಲ್ಲೇ ಎಚ್ಚೆತ್ತ ಆಸ್ಟ್ರೇಲಿಯಾ: ತಂಡದಿಂದ ಆರಂಭಿಕ ದಾಂಡಿಗ ಔಟ್!
Australia
Image Credit source: GettyImages

Updated on: Aug 18, 2026 | 2:10 PM

ಡಾರ್ವಿನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ 9 ವಿಕೆಟ್‌ಗಳ ಆಘಾತಕಾರಿ ಸೋಲು ಅನುಭವಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಎಚ್ಚೆತ್ತುಕೊಂಡಿದೆ. ಆಗಸ್ಟ್ 22 ರಿಂದ ಮಕೈಯ ‘ಗ್ರೇಟ್ ಬ್ಯಾರಿಯರ್ ರೀಫ್ ಅರೆನಾ’ ಮೈದಾನದಲ್ಲಿ ಆರಂಭವಾಗಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ 13 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಸರಣಿ ಕೈತಪ್ಪದಂತೆ ನೋಡಿಕೊಳ್ಳಲು ಆಸ್ಟ್ರೇಲಿಯಾ ತಂಡದ ಆಯ್ಕೆಗಾರರು ಈ ಬಾರಿ ಪ್ರಮುಖ ಬದಲಾವಣೆಯೊಂದನ್ನು ಮಾಡಿದ್ದಾರೆ.

ಜೇಕ್ ವೆದರಾಲ್ಡ್​ಗೆ ಕೊಕ್!

ಮೊದಲ ಪಂದ್ಯದಲ್ಲಿ ಸತತ ವೈಫಲ್ಯ ಅನುಭವಿಸಿದ ಆರಂಭಿಕ ಆಟಗಾರ ಜೇಕ್ ವೆದರಾಲ್ಡ್​ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅವರ ಸ್ಥಾನಕ್ಕೆ ಎಡಗೈ ಬ್ಯಾಟರ್ ಮ್ಯಾಥ್ಯೂ ರೆನ್​ಶಾ ಅವರನ್ನು ಆಯ್ಕೆ ಮಾಡಲಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ದೃಷ್ಟಿಯಿಂದ ಈ ಪಂದ್ಯ ಆಸ್ಟ್ರೇಲಿಯಾ ತಂಡಕ್ಕೆ ಅತ್ಯಂತ ನಿರ್ಣಾಯಕವಾಗಿದ್ದು, ರೆನ್​ಶಾ ಅವರ ಅನುಭವ ತಂಡಕ್ಕೆ ನೆರವಾಗಲಿದೆ ಎಂಬ ನಿರೀಕ್ಷೆ ಆಯ್ಕೆಗಾರರದ್ದಾಗಿದೆ.

ಪ್ಯಾಟ್ ಕಮಿನ್ಸ್ ನಾಯಕತ್ವದ ಈ ತಂಡದಲ್ಲಿ ಉಳಿದಂತೆ ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಾಬುಶೇನ್ ಅವರಂತಹ ಅನುಭವಿ ದಾಂಡಿಗರಿದ್ದು, ಈ ಬ್ಯಾಟರ್​ಗಳೊಂದಿಗೆ ಮ್ಯಾಥ್ಯೂ ರೆನ್​ಶಾ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಬಲಿಷ್ಠ ಬೌಲಿಂಗ್ ವಿಭಾಗ!

ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ನಾಯಕ ಪ್ಯಾಟ್ ಕಮಿನ್ಸ್ ಅವರೊಂದಿಗೆ ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್ ಮತ್ತು ಸ್ಕಾಟ್ ಬೋಲ್ಯಾಂಡ್ ವೇಗದ ವಿಭಾಗ ಮುನ್ನಡೆಸಲಿದ್ದಾರೆ. ಪ್ರಮುಖ ಸ್ಪಿನ್ನರ್ ಆಗಿ ನಾಥನ್ ಲಿಯಾನ್ ತಂಡದಲ್ಲಿದ್ದಾರೆ. ವಿಕೆಟ್ ಕೀಪರ್​ಗಳಾಗಿ ಅಲೆಕ್ಸ್ ಕ್ಯಾರಿ ಮತ್ತು ಜೋಶ್ ಇಂಗ್ಲಿಸ್ ತಂಡದಲ್ಲಿ ಮುಂದುವರೆದಿದ್ದಾರೆ.

ಸರಣಿ ಸಮಬಲದ ಪ್ಲ್ಯಾನ್:

ಎರಡು ಮ್ಯಾಚ್​ಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಬಾಂಗ್ಲಾದೇಶ್ ತಂಡ ಸೋಲುಣಿಸಿದೆ. ಇದೀಗ ಸರಣಿ ಸೋಲನ್ನು ತಪ್ಪಿಸಿಕೊಳ್ಳಬೇಕಿದ್ದರೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಜಯಗಳಿಸಲೇಬೇಕು. ಅತ್ತ ಬಾಂಗ್ಲಾದೇಶ್ ತಂಡ 2ನೇ ಟೆಸ್ಟ್ ಪಂದ್ಯದಲ್ಲಿ ಡ್ರಾ ಸಾಧಿಸಿದರೆ ಸರಣಿ ವಶಪಡಿಸಿಕೊಳ್ಳಬಹುದು. ಹೀಗಾಗಿ ಮೊದಲ ಪಂದ್ಯದ ಸೋಲಿನ ಸೇಡು ತೀರಿಸಿಕೊಂಡು ಸರಣಿಯನ್ನು 1-1 ರಲ್ಲಿ ಸಮಬಲ ಮಾಡಿಕೊಳ್ಳುವ ತವಕದಲ್ಲಿದೆ ಆಸೀಸ್ ಪಡೆ.

ಇದನ್ನೂ ಓದಿ: ಔಟ್ ಆಗುವುದನ್ನು ತಪ್ಪಿಸಿದ ಪಡಿಕ್ಕಲ್​ಗೆ ರಾಹುಲ್ ಅಪ್ಪುಗೆ!

ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಾರ್ನಸ್ ಲಾಬುಶೇನ್, ಮ್ಯಾಥ್ಯೂ ರೆನ್​ಶಾ, ಕ್ಯಾಮರೋನ್ ಗ್ರೀನ್, ಬ್ಯೂ ವೆಬ್‌ಸ್ಟರ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್, ನಾಥನ್ ಲಿಯಾನ್ ಮತ್ತು ಸ್ಕಾಟ್ ಬೋಲ್ಯಾಂಡ್.

 

Loading...
Unable to load recommendations.
Follow Us