ವಿಶ್ವಕಪ್ (ICC World Cup 2023) ಸಮರದಲ್ಲಿ ಇಂದು ಎರಡು ಪಂದ್ಯಗಳು ನಡೆಯಲ್ಲಿವೆ. ಅಂದರೆ ಇಂದು ಡಬಲ್ ಹೆಡರ್ ದಿನವಾಗಿದೆ. ದಿನದ ಮೊದಲ ಪಂದ್ಯ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ (Australia vs New Zealand) ನಡುವೆ ನಡೆಯುತ್ತಿದೆ. ಸತತ ಎರಡು ಪಂದ್ಯಗಳಲ್ಲಿ ಸೋತ ಆಸ್ಟ್ರೇಲಿಯಾ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಅದರಲ್ಲೂ ನೆದರ್ಲ್ಯಾಂಡ್ಸ್ ವಿರುದ್ಧದ ದಾಖಲೆಯ ಗೆಲುವು ತಂಡದ ಆತ್ಮಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಮತ್ತೊಂದೆಡೆ, ಆರಂಭದಿಂದಲೂ ಅದ್ಭುತ ಕ್ರಿಕೆಟ್ ಆಡುತ್ತಿರುವ ನ್ಯೂಜಿಲೆಂಡ್ ಭಾರತದ ವಿರುದ್ಧ ಸೋತು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಧರ್ಮಶಾಲಾದಲ್ಲಿ ನಡೆಯಲ್ಲಿರುವ ಈ ಪಂದ್ಯದಲ್ಲಿ ಕಿವೀಸ್ ಗೆದ್ದರೆ ಪಾಯಿಂಟ್ ಪಟ್ಟಿಯಲ್ಲಿ ಮೇಲೊಗುವುದರ ಜೊತೆಗೆ ತಮ್ಮ ಸೆಮಿಫೈನಲ್ ಹಾದಿಯನ್ನು ಇನ್ನಷ್ಟು ಸುಗಮಗೊಳಿಸಲಿದ್ದಾರೆ. ಇತ್ತ ಆಸ್ಟ್ರೇಲಿಯಾ ಗೆದ್ದರೆ, ಅವರ ಟಾಪ್ 4 ಸ್ಥಾನ ಇನ್ನಷ್ಟು ಬಿಗಿಯಾಗಲಿದೆ. ಹೀಗಾಗಿ ಉಭಯ ತಂಡಗಳ ನಡುವೆ ಹೈವೋಲ್ಟೇಜ್ ಕದನವನ್ನು ನಿರೀಕ್ಷಿಸಬಹುದಾಗಿದೆ.
ವಿಶ್ವಕಪ್‌ನ ವೇದಿಕೆಯಲ್ಲಿ ಆಸ್ಟ್ರೇಲಿಯಾದ ಎದುರು ಕಿವೀಸ್ ಆಟ ಹೆಚ್ಚಾಗಿ ನಡೆದಿಲ್ಲ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿಯಾಗಿ 2015 ರಲ್ಲಿ ವಿಶ್ವಕಪ್ ಆಯೋಜಿಸಿದ್ದವು. ಆ ಬಾರಿಯೂ ಆಸ್ಟ್ರೇಲಿಯಾ ತವರಿನಲ್ಲಿ ಕಿವೀ ಬ್ರಿಗೇಡ್ ತಂಡವನ್ನು ಸೋಲಿಸಿತ್ತು. ಅಷ್ಟೇ ಅಲ್ಲದೆ ಕೇನ್ ವಿಲಿಯಮ್ಸನ್ ಬಳಗವೂ ಆಸೀಸ್ ವಿರುದ್ಧ ಫೈನಲ್ನಲ್ಲಿ 7 ವಿಕೆಟ್ಗಳಿಂದ ಸೋತಿತ್ತು. ಹೀಗಾಗಿ ಕಿವೀಸ್ ಪಡೆ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಇನ್ನೊಂದೆಡೆ ಆಸ್ಟ್ರೇಲಿಯಾ ತಂಡ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸಲು ನೋಡುತ್ತಿದೆ.
ಈ ಟೂರ್ನಿಯಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದರೂ, ನ್ಯೂಜಿಲೆಂಡ್ ಭಾರತದ ವಿರುದ್ಧ ಸೋತಿದ್ದು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಆರಂಭಿಕ ಆಘಾತದಿಂದ ಹೊರಬಂದು ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಯಾಟ್ ಕಮ್ಮಿನ್ಸ್ ತಂಡ ಸೆಮಿಫೈನಲ್‌ನ ರೇಸ್ ಅನ್ನು ಜೀವಂತವಾಗಿರಿಸಿಕೊಂಡಿದೆ.
ಇನ್ನು ಧರ್ಮಶಾಲಾದ ಪಿಚ್ ಬಗ್ಗೆ ಹೇಳಬೇಕೆಂದರೆ, ಈ ಹಿಂದೆ ನಡೆದ ಪಂದ್ಯಗಳನ್ನು ಗಮನಿಸುವುದಾದರೆ ಪಿಚ್, ಆರಂಭದಲ್ಲಿ ವೇಗಿಗಳಿಗೆ ಹೆಚ್ಚು ನೆರವಾಗುತ್ತಿತ್ತು. ಪಂದ್ಯ ಮುಂದುವರೆದಂತೆ, ಬ್ಯಾಟಿಂಗ್ಗೆ ಸಹಕಾರಿಯಾಗುತ್ತಿತ್ತು. ಆದರೆ, ಈ ಬಾರಿಯ ವಿಶ್ವಕಪ್‌ನಲ್ಲಿ ಇದಕ್ಕೆ ವ್ಯತಿರಿಕ್ತ ಪ್ರದರ್ಶನ ಕಂಡು ಬಂದಿದೆ. ಅಲ್ಲದೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಬೆಳಗ್ಗೆ ನಡೆಯುವುದರಿಂದ ಸ್ಪಿನ್ನರ್‌ಗಳಿಗೆ ಮಿಂಚುವ ಅವಕಾಶ ಸಿಗಲಿದೆ. ಹೀಗಿರುವಾಗ ಪ್ಯಾಟ್ ಕಮ್ಮಿನ್ಸ್ ಒತ್ತಡಕ್ಕೆ ಒಳಗಾಗಬೇಕಾಗಬಹುದು. ಏಕೆಂದರೆ ಆಡಮ್ ಝಂಪಾ ತಂಡದಲ್ಲಿರುವ ಏಕೈಕ ಸ್ಪಿನ್ನರ್. ಇಲ್ಲಿ ನ್ಯೂಜಿಲೆಂಡ್ ಆಸೀಸ್ಗಿಂತ ಮುಂದಿದೆ ಎಂತಲೇ ಹೇಳಬಹುದು. ಏಕೆಂದರೆ ತಂಡದಲ್ಲಿ ಮಿಚೆಲ್ ಸ್ಯಾಂಟ್ನರ್ ಮತ್ತು ರಚಿನ್ ರವೀಂದ್ರ ಅವರಂತಹ ಸ್ಪಿನ್ನರ್ಗಳಿದ್ದಾರೆ.
ಇನ್ನು ಆಸೀಸ್ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆ ಇದ್ದು, ಗಾಯದಿಂದ ಚೇತರಿಸಿಕೊಂಡ ನಂತರ ಟ್ರಾವಿಸ್ ಹೆಡ್ ತಂಡವನ್ನು ಸೇರಿಕೊಂಡಿದ್ದಾರೆ. ಅವರು ಕಿವೀಸ್ ವಿರುದ್ಧ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಮತ್ತೊಂದೆಡೆ, ಪಾಕಿಸ್ತಾನ ವಿರುದ್ಧ ಶತಕ ಸಿಡಿಸಿದ್ದ ಮಿಚೆಲ್ ಮಾರ್ಷ್, ಡಚ್ ವಿರುದ್ಧ ವಿಫಲರಾಗಿದ್ದರು. ಹೀಗಾಗಿ ಮಾರ್ಷ್ ಈ ಪಂದ್ಯದಲ್ಲಿ ಮತ್ತೊಮ್ಮೆ ತಮ್ಮ ಫಾರ್ಮ್ ಕಂಡುಕೊಳ್ಳಲು ಪ್ರಯತ್ನಿಸಲಿದ್ದಾರೆ. ಆದರೆ ಒಂದು ವೇಳೆ ಹೆಡ್ ತಂಡದಲ್ಲಿ ಸ್ಥಾನ ಪಡೆದರೆ, ಮಾರ್ಷ್ ಆರಂಭಿಕ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ.
ಆಸೀಸ್ ಸಂಭಾವ್ಯ ತಂಡ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋನಿಸ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಆಡಮ್ ಝಂಪಾ
ನ್ಯೂಜಿಲೆಂಡ್ ಸಂಭಾವ್ಯ ತಂಡ: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲೇಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಲಾಕಿ ಫರ್ಗುಸನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ