PAK vs SA: ಪಾಕಿಸ್ತಾನಕ್ಕೆ ಸತತ 4ನೇ ಸೋಲು; ಬಾಬರ್ ಪಡೆಗೆ ಸೆಮೀಸ್ ಹಾದಿ ಇನ್ನಷ್ಟು ಕಠಿಣ..!
PAK vs SA, World Cup 2023: ಇದು 2023ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ 5ನೇ ಗೆಲುವು. ಈ ಐದು ಗೆಲುವುಗಳೊಂದಿಗೆ ದಕ್ಷಿಣ ಆಫ್ರಿಕಾ ತಂಡ 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ತಲುಪಿದೆ. ಇತ್ತ 6 ಪಂದ್ಯಗಳಲ್ಲಿ 4 ರಲ್ಲಿ ಸೋತಿರುವ ಪಾಕಿಸ್ತಾನ ತಂಡ ಪ್ರಸ್ತುತ ಆರನೇ ಸ್ಥಾನದಲ್ಲಿದೆ.
2023ರ ವಿಶ್ವಕಪ್‌ನಲ್ಲಿ (ICC World Cup 2023) ದಕ್ಷಿಣ ಆಫ್ರಿಕಾ ತಂಡ ತನ್ನ ಐದನೇ ಗೆಲುವು ದಾಖಲಿಸಿದೆ. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನವನ್ನು (Pakistan vs South Africa) ಕೇವಲ 1 ವಿಕೆಟ್‌ನಿಂದ ರೋಚಕವಾಗಿ ಸೋಲಿಸಿತು. ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ ಇದು ಸತತ ನಾಲ್ಕನೇ ಸೋಲಾಗಿದ್ದು, ಈ ಸೋಲಿನೊಂದಿಗೆ ಪಾಕ್ ತಂಡದ ವಿಶ್ವಕಪ್ ಪ್ರಯಾಣವೂ ಬಹುತೇಕ ಅಂತ್ಯಗೊಂಡಂತ್ತಾಗಿದೆ. ಇಲ್ಲಿಂದ ಪಾಕ್ ತಂಡ ಸೆಮಿಫೈನಲ್ಗೇರಬೇಕೆಂದರೆ ಪವಾಡವೇ ನಡೆಯಬೇಕಿದೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 270 ರನ್ ಗಳಿಸಲಷ್ಟೇ ಶಕ್ತವಾಯಿತು. ದಕ್ಷಿಣ ಆಫ್ರಿಕಾ ಪರ ತಬ್ರೇಜ್ ಶಮ್ಸಿ 4 ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ ಆಫ್ರಿಕಾ ಪರ ಏಡೆನ್ ಮಾರ್ಕ್ರಾಮ್ (Aiden Markram) 91 ರನ್ಗಳ ಅಮೋಘ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರಾದರೂ, ಕೊನೆಯ ಹಂತದಲ್ಲಿ ಪಾಕಿಸ್ತಾನವು ಬಲವಾದ ಪುನರಾಗಮನವನ್ನು ಮಾಡಿತು. ಹೀಗಾಗಿ ಪಂದ್ಯ ರೋಚಕ ಘಟ್ಟ ತಲುಪಿತು. ಆದರೆ ಅಂತಿಮವಾಗಿ ಕೇಶವ ಮಹಾರಾಜ್ 21 ಎಸೆತಗಳಲ್ಲಿ 7 ರನ್ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟರು.
ಪ್ರಸ್ತುತ ಆರನೇ ಸ್ಥಾನ
ಇನ್ನು ಮೇಲೆ ಹೇಳಿದಂತೆ ಇದು 2023ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ 5ನೇ ಗೆಲುವು. ಈ ಐದು ಗೆಲುವುಗಳೊಂದಿಗೆ ದಕ್ಷಿಣ ಆಫ್ರಿಕಾ ತಂಡ 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ತಲುಪಿದೆ. ಇತ್ತ 6 ಪಂದ್ಯಗಳಲ್ಲಿ 4 ರಲ್ಲಿ ಸೋತಿರುವ ಪಾಕಿಸ್ತಾನ ತಂಡ ಪ್ರಸ್ತುತ ಆರನೇ ಸ್ಥಾನದಲ್ಲಿದೆ. ಸೆಮಿಫೈನಲ್ ರೇಸ್‌ನಲ್ಲಿ ಉಳಿಯಲು ಪಾಕಿಸ್ತಾನ ತಂಡ ಮುಂಬರುವ ಎಲ್ಲಾ ಪಂದ್ಯಗಳನ್ನು ಉತ್ತಮ ಅಂತರದಿಂದ ಗೆಲ್ಲಬೇಕಾಗಿದೆ.
PAK vs SA Highlights: ಗೆದ್ದ ಆಫ್ರಿಕಾ; ಪಾಕ್ ತಂಡದ ವಿಶ್ವಕಪ್ ಪ್ರಯಾಣ ಭಾಗಶಃ ಅಂತ್ಯ
ಪಾಕಿಸ್ತಾನ ಇನ್ನಿಂಗ್ಸ್
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನಕ್ಕೆ ಉತ್ತಮವಾಗಿ ಆರಂಭ ಸಿಗಲಿಲ್ಲ. ಆರಂಭಿಕರಾದ ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್-ಉಲ್-ಹಕ್ ಬೇಗನೇ ಪೆವಲಿಯನ್ ಸೇರಿಕೊಡರು. ಆ ಬಳಿಕ ಒಂದಾದ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ ತಂಡದ ಇನ್ನಿಂಗ್ಸ್ ಉಳಿಸಿದರು. ಬಾಬರ್ 65 ಎಸೆತಗಳಲ್ಲಿ 50 ರನ್ ಗಳಿಸಿದರೆ, ರಿಜ್ವಾನ್ಗೆ ಯಾವುದೇ ಪರಿಣಾಮಕಾರಿ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಆ ನಂತರ ಬಂದ ಸೌದ್ ಶಕೀಲ್ ಮತ್ತು ಶಾದಾಬ್ ಖಾನ್ ಉತ್ತಮ ಬ್ಯಾಟಿಂಗ್ ನಡೆಸಿದರು. ಈ ವೇಳೆ ಸೌದ್ ಶಕೀಲ್ 52 ಎಸೆತಗಳಲ್ಲಿ 52 ರನ್, ಶಾದಾಬ್ ಖಾನ್ 36 ಎಸೆತಗಳಲ್ಲಿ 43 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ತಬ್ರೇಜ್ ಶಮ್ಸಿ 4, ಮಾರ್ಕೊ ಜಾನ್ಸೆನ್ 3, ಜೆರಾಲ್ಡ್ ಕೊಯೆಟ್ಜಿ 2, ಲುಂಗಿ ಎನ್ಗಿಡಿ 1 ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್
271 ರನ್ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಕ್ಕೆ 34 ರನ್ಗಳಿದಾಗ ಮೊದಲ ಹೊಡೆತ ಬಿದ್ದಿತು. ಕ್ವಿಂಟನ್ ಡಿ ಕಾಕ್ 24 ರನ್ ಗಳಿಸಿ ಔಟಾದರು. ನಂತರ ಟೆಂಬಾ ಬವುಮಾ 28 ರನ್ಗಳಿಸಿ ಟೆಂಟ್‌ಗೆ ಮರಳಿದರು. ರಾಸ್ಸಿ ವ್ಯಾನ್ ಡೆರ್ ಡ್ಯೂಸೆನ್ ಕೂಡ ವಿಶೇಷವಾದದ್ದನ್ನು ಮಾಡಲು ಸಾಧ್ಯವಾಗಲಿಲ್ಲ. ಅವರು 21 ರನ್ ಗಳಿಸಿ ಔಟಾದರು. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಏಡೆನ್ ಮಾರ್ಕ್ರಾಮ್ 93 ಎಸೆತಗಳಲ್ಲಿ 91 ರನ್ ಗಳಿಸಿ 9 ರನ್ಗಳಿಂದ ಶತಕ ವಂಚಿತರಾದರು. ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು. ಡೇವಿಡ್ ಮಿಲ್ಲರ್ ಕೂಡ ಮಾರ್ಕ್ರಾಮ್ ಜೊತೆ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಆದರೆ ಈ ಇಬ್ಬರ ವಿಕೆಟ್ ಪತನದ ಬಳಿಕ ಆಫ್ರಿಕಾ ಸೋಲಿನ ಸುಳಿಗೆ ಸಿಲುಕಿತು. ಆಫ್ರಿಕಾದ ಬಾಲಂಗೋಚಿಗಳನ್ನು ಕಟ್ಟಿಹಾಕುವಲ್ಲಿ ಪಾಕ್ ಬೌಲರ್ಗಳು ಯಶಸ್ವಿಯಾದರು. ಆದರೆ ಅಂತಿಮ ಹಂತದಲ್ಲಿ ಕೇಶವ್ ಮಹರಾಜ್ ಬೌಂಡರಿ ಬಾರಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:05 am, Sat, 28 October 23