ಪಾಕಿಸ್ತಾನ ಕ್ರಿಕೆಟ್ ತಂಡ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಉಭಯ ತಂಡಗಳು ಏಕದಿನ ಹಾಗೂ ಟಿ20 ಸರಣಿಯನ್ನು ಆಡುತ್ತಿವೆ. ಮೊದಲು ನಡೆದ ಏಕದಿನ ಸರಣಿಯನ್ನು ಪಾಕಿಸ್ತಾನ ಗೆದ್ದುಕೊಂಡರೆ, ಇದೀಗ ನಡೆಯುತ್ತಿರುವ ಟಿ20 ಸರಣಿಯನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಯಿಂದ ಮುನ್ನಡೆ ಕಾಯ್ದುಕೊಂಡಿರುವ ಆಸ್ಟ್ರೇಲಿಯಾ ತಂಡ, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿದೆ. ಸಿಡ್ನಿಯಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 19.4 ಓವರ್‌ಗಳಲ್ಲಿ 134 ರನ್‌ಗಳಿಗೆ ಆಲೌಟ್ ಆಯಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ನಾಯಕನ ಈ ನಿರ್ಧಾರ ಸರಿ ಎಂದು ಆರಂಭಿಕರೂ ಸಾಬೀತು ಮಾಡಿದರು. ಮೊದಲ 19 ಎಸೆತಗಳಲ್ಲಿ ಮ್ಯಾಥ್ಯೂ ಶಾರ್ಟ್ ಮತ್ತು ಜೇಕ್ ಫ್ರೇಸರ್-ಮೆಕ್‌ಗುರ್ಕ್ 50 ರನ್ ಕಲೆಹಾಕುವ ಮೂಲಕ ಉತ್ತಮ ಆರಂಭ ನೀಡಿದರು. ಆದರೆ ಇದರ ನಂತರ ಪಾಕಿಸ್ತಾನದ ಬೌಲರ್‌ಗಳ ದಾಳಿಗೆ ನಲುಗಿದ ಆಸ್ಟ್ರೇಲಿಯಾ ಪೆವಿಲಿಯನ್ ಪರೇಡ್ ಆರಂಭಿಸಿತು. ಹೀಗಾಗಿ ಆಸೀಸ್ ಪರ ಮ್ಯಾಥ್ಯೂ ಶಾರ್ಟ್ ಅತ್ಯಧಿಕ 32 ರನ್ ಗಳಿಸಿದರೆ, ಆರನ್ ಹಾರ್ಡಿ 28 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 21 ರನ್ ಮತ್ತು ಜೇಕ್ ಫ್ರೇಸರ್-ಮೆಕ್‌ಗುರ್ಕ್ 20 ರನ್ ಕೊಡುಗೆ ನೀಡಿದರು. ಪಾಕಿಸ್ತಾನ ಪರ ಹ್ಯಾರಿಸ್ ರೌಫ್ ಗರಿಷ್ಠ 4 ವಿಕೆಟ್ ಪಡೆದರೆ, ಅಬ್ಬಾಸ್ ಅಫ್ರಿದಿ 3 ಮತ್ತು ಸುಫಿಯಾನ್ ಮುಖೀಮ್ 2 ವಿಕೆಟ್ ಪಡೆದರು.
Australia win the series after a final-over thriller! #AUSvPAK pic.twitter.com/LA7zqpG7N0
— cricket.com.au (@cricketcomau) November 16, 2024
148 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಕೆಟ್ಟ ಆರಂಭ ಸಿಕ್ಕಿತು. ಆರಂಭಿಕರಾದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಆಝಂ ಬೇಗನೇ ವಿಕೆಟ್ ಒಪ್ಪಿಸಿದರು. ಬಾಬರ್ 3 ಎಸೆತಗಳಲ್ಲಿ 3 ರನ್ ಗಳಿಸಿ ಔಟಾದರೆ, ರಿಜ್ವಾನ್ 26 ಎಸೆತಗಳಲ್ಲಿ 16 ರನ್ ಗಳಿಸಲಷ್ಟೇ ಶಕ್ತರಾದರು. ಅಚ್ಚರಿಯ ವಿಷಯವೆಂದರೆ ಪವರ್‌ಪ್ಲೇಯ ಮೊದಲ 6 ಓವರ್‌ಗಳಲ್ಲಿ ಪಾಕಿಸ್ತಾನ ಬ್ಯಾಟ್‌ನಿಂದ ಒಂದೇ ಒಂದು ಬೌಂಡರಿ ಬರಲಿಲ್ಲ. ಆದರೆ ಪಾಕ್ ಪರ ಏಕಾಂಗಿ ಹೋರಾಟ ನಡೆಸಿದ ಉಸ್ಮಾನ್ ಖಾನ್ ಅರ್ಧಶತಕ ಬಾರಿಸಿದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಪಾಕಿಸ್ತಾನ ಪರ ಉಸ್ಮಾನ್ ಖಾನ್ ಗರಿಷ್ಠ 52 ರನ್ ಗಳಿಸಿದರೆ, ಇರ್ಫಾನ್ ಖಾನ್ 37 ರನ್ ಗಳಿಸಿ ಅಜೇಯರಾಗಿ ಉಳಿದರು, ಆದರೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಇವರನ್ನು ಬಿಟ್ಟರೆ ಎಲ್ಲಾ ಬ್ಯಾಟ್ಸ್ಮನ್ಗಳು ಸಂಪೂರ್ಣವಾಗಿ ಪ್ಲಾಪ್ ಆದರು. ಆಸ್ಟ್ರೇಲಿಯಾ ಪರ ಅದ್ಭುತ ಬೌಲಿಂಗ್ ಮಾಡಿದ ಸ್ಪೆನ್ಸರ್ ಜಾನ್ಸನ್, ಒಟ್ಟು 5 ವಿಕೆಟ್ಗಳನ್ನು ಪಡೆದರು. ಇವರಲ್ಲದೆ ಆಡಮ್ ಝಂಪಾ 2 ವಿಕೆಟ್ ಹಾಗೂ ಕ್ಸೇವಿಯರ್ ಬಾರ್ಟ್ಲೆಟ್ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:21 pm, Sat, 16 November 24