ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಿಂದ ಸ್ಪಿನ್ ಬೌಲಿಂಗ್ ಕೋಚ್ ಶ್ರೀಧರನ್ ಶ್ರೀರಾಮ್ ಹಿಂದೆ ಸರಿದಿದ್ದಾರೆ. ಇದರೊಂದಿಗೆ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡ ಸ್ಪಿನ್ ಕೋಚ್ ಇಲ್ಲದೆಯೇ ಉಪಖಂಡಕ್ಕೆ ಟೆಸ್ಟ್ ಸರಣಿ ಆಡಲು ತೆರಳಲಿದೆ. ಶ್ರೀಧರನ್ ಶ್ರೀರಾಮ್ ಕಳೆದ 6 ವರ್ಷಗಳಿಂದ ಆಸ್ಟ್ರೇಲಿಯಾ ತಂಡದ ಸ್ಪಿನ್ ಕೋಚ್ ಆಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಆಸ್ಟ್ರೇಲಿಯಾ ಈಗ ಪಾಕಿಸ್ತಾನ ಪ್ರವಾಸಕ್ಕಾಗಿ ಸ್ಪಿನ್ ಬೌಲಿಂಗ್ ಕೋಚ್ ಅನ್ನು ಹುಡುಕುತ್ತಿದ್ದು, ನ್ಯೂಜಿಲೆಂಡ್‌ನ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಹೆಸರು ಮುಂಚೂಣಿಯಲ್ಲಿದೆ.
ಏತನ್ಮಧ್ಯೆ, ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ವಕ್ತಾರರು ಡೇನಿಯಲ್ ವೆಟ್ಟೋರಿ ಅವರೊಂದಿಗೆ ಮಾತುಕತೆ ನಡೆಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಪಾಕಿಸ್ತಾನ ಪ್ರವಾಸದಲ್ಲಿ ಹೆಚ್ಚು ಸಮಯ ಉಳಿದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವೆಟ್ಟೋರಿ ಜತೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ. ಸ್ಪಿನ್ ಬೌಲಿಂಗ್ ತರಬೇತುದಾರನ ಪಾತ್ರವನ್ನು ವಹಿಸಿಕೊಳ್ಳುವ ಬಗ್ಗೆ ಆಸ್ಟ್ರೇಲಿಯಾ ವೆಟ್ಟೋರಿ ಅವರೊಂದಿಗೆ ಮಾತನಾಡಿರುವುದು ಇದೇ ಮೊದಲಲ್ಲ.
2017 ರಲ್ಲಿ ಭಾರತಕ್ಕೆ ಬರುವ ಮೊದಲು, ಆಸ್ಟ್ರೇಲಿಯಾದ ಸ್ಪಿನ್ ಬೌಲರ್‌ಗಳು ವೆಟ್ಟೋರಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ವೆಟ್ಟೋರಿ 2019 ರಿಂದ 2021 ರವರೆಗೆ ಬಾಂಗ್ಲಾದೇಶದ ಸ್ಪಿನ್ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. 2013ರಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯನ್ ತಂಡವು ಸ್ಪಿನ್ ಬೌಲಿಂಗ್ ತರಬೇತುದಾರರಿಲ್ಲದೆ ಉಪಖಂಡಕ್ಕೆ ಪ್ರವಾಸ ಕೈಗೊಂಡಿತ್ತು. ಈ ವೇಳೆ ಭಾರತದಲ್ಲಿ ಆಸ್ಟ್ರೇಲಿಯಾ ಅತ್ಯಂತ ಕೆಟ್ಟ ಸೋಲನ್ನು ಎದುರಿಸಬೇಕಾಯಿತು.
ಆಸ್ಟ್ರೇಲಿಯಾ ತಂಡದೊಂದಿಗೆ 6 ವರ್ಷಗಳ ಕಾಲ ಭಾರತಕ್ಕಾಗಿ ಸೇವೆ ಸಲ್ಲಿಸಿರುವ ಶ್ರೀಧರನ್ ಶ್ರೀರಾಮ್ ಪಾಕ್ ಪ್ರವಾಸದಿಂದ ಹಿಂದೆ ಸರಿದಿರುವುದು ಇದೀಗ ಆಸ್ಟ್ರೇಲಿಯಾ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಶ್ರೀಧರನ್ ಶ್ರೀರಾಮ್ ಅವರ ಮೇಲ್ವಿಚಾರಣೆಯಲ್ಲಿ ಅಗರ್-ನಾಥನ್ ಅವರ ಬೌಲಿಂಗ್ ಸುಧಾರಿಸಿತು. ಆಸ್ಟ್ರೇಲಿಯಾದ ಗೆಲುವಿನಲ್ಲಿ ಶ್ರೀರಾಮ್ ಅವರ ಕೊಡುಗೆ ಮಹತ್ವದ್ದು.
ಅದರಲ್ಲೂ 2017 ರಲ್ಲಿ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ದ ಪುಣೆ ಟೆಸ್ಟ್ ಅನ್ನು ಗೆದ್ದುಕೊಂಡಿತು. ಈ ವೇಳೆ ಎಡಗೈ ಸ್ಪಿನ್ನರ್ ಸ್ಟೀವ್ ಓಕೀಫ್ ಪಂದ್ಯದಲ್ಲಿ 70 ರನ್ಗಳಿಗೆ 12 ವಿಕೆಟ್ಗಳನ್ನು ಪಡೆದಿದ್ದರು. ಈ ವೇಳೆ ಓಕೀಫ್ ತಮ್ಮ ಯಶಸ್ಸಿಗೆ ಶ್ರೀರಾಮ್ ಕಾರಣ, ಅವರು ಅದ್ಭುತ ಸ್ಪಿನ್ ಬೌಲಿಂಗ್ ಕೋಚ್ ಎಂದು ಬಣ್ಣಿಸಿದರು. ಇನ್ನು ಶ್ರೀರಾಮ್ ಅವರ ಮೇಲ್ವಿಚಾರಣೆಯಲ್ಲಿ, ನಾಥನ್ ಲಿಯಾನ್, ಆಡಮ್ ಝಂಪಾ ಅವರ ಬೌಲಿಂಗ್ ಕೂಡ ವಿಭಿನ್ನ ಸುಧಾರಣೆ ಕಂಡಿತು. ಇದೀಗ ಸ್ಪಿನ್ ಕೋಚ್ ಇಲ್ಲದೆ ಪಾಕ್ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ಉಪಖಂಡದ ಪಿಚ್ನಲ್ಲಿ ಹೇಗೆ ಯಶಸ್ವಿಯಾಗಲಿದೆ ಎಂಬುದೇ ಈಗ ಕುತೂಹಲ.
ಆಸ್ಟ್ರೇಲಿಯಾ ತಂಡ ಮಾರ್ಚ್ 4 ರಿಂದ ಪಾಕಿಸ್ತಾನ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ. ಮೂರು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳ ಹೊರತಾಗಿ ಉಭಯ ದೇಶಗಳ ನಡುವೆ ಟಿ20 ಪಂದ್ಯವೂ ನಡೆಯಲಿದೆ. ಆಸ್ಟ್ರೇಲಿಯಾ ತಂಡ 24 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತಿರುವುದು ವಿಶೇಷ.
ಯಾರು ಈ ಶ್ರೀಧರನ್ ಶ್ರೀರಾಮ್?
ತಮಿಳುನಾಡು ಮೂಲದ ಶ್ರೀಧರನ್ ಶ್ರೀರಾಮ್ ಮಾಜಿ ಟೀಮ್ ಇಂಡಿಯಾ ಕ್ರಿಕೆಟಿಗ. ಭಾರತ ಪರ ಶ್ರೀಧರನ್ 8 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 9 ವಿಕೆಟ್ಗಳನ್ನು ಕಬಳಿಸಿದ್ದರು. 2004 ರ ಬಳಿಕ ಟೀಮ್ ಇಂಡಿಯಾದಿಂದ ಹೊರಬಿದ್ದ ಶ್ರೀಧರನ್ ದೇಶೀಯ ಅಂಗಳದಲ್ಲಿ ಕ್ರಿಕೆಟ್ ಮುಂದುವರೆಸಿದ್ದರು. ಅಷ್ಟೇ ಅಲ್ಲದೆ ಕಳೆದ 6 ವರ್ಷಗಳಿಂದ ಆಸ್ಟ್ರೇಲಿಯಾ ತಂಡದ ಸ್ಪಿನ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?
ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ
ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್