ಐದು ಬಾರಿಯ ಏಕದಿನ ವಿಶ್ವಕಪ್ ಚಾಂಪಿಯನ್ (ICC World Cup) ಆಸ್ಟ್ರೇಲಿಯಾಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಫೋಟಕ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ (Travis Head) ಪಂದ್ಯಾವಳಿಯ ಮೊದಲಾರ್ಧದಿಂದ ಹೊರಗುಳಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ (South Africa vs Australia) ಐದು ಪಂದ್ಯಗಳ ಸರಣಿಯ ನಾಲ್ಕನೇ ಏಕದಿನ ಪಂದ್ಯದ ವೇಳೆ ಟಾರ್ವಿಸ್ ಹೆಡ್ ಎಡಗೈ ಇಂಜುರಿಗೆ ತುತ್ತಾಗಿದ್ದರು. ಹೀಗಾಗಿ ಅವರನ್ನು ಸರಣಿಯ ಕೊನೆಯ ಪಂದ್ಯದಿಂದ ಹೊರಗಿಡಲಾಗಿತ್ತು. ಆ ಬಳಿಕ ಟೀಂ ಇಂಡಿಯಾ (Team India) ವಿರುದ್ಧ ನಡೆಯಲ್ಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಹೆಡ್‌ಗೆ ತಂಡದಲ್ಲಿ ಅವಕಾಶ ನೀಡಿರಲಿಲ್ಲ. ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಈ ಸ್ಫೋಟಕ ಬ್ಯಾಟರ್ ಇಂಜುರಿಯಿಂದ ಚೇತರಿಸಿಕೊಳ್ಳಲು ಸಮಯ ಹಿಡಿಯಲ್ಲಿದ್ದು, ಅವರ ಬದಲಿಗೆ ಮಾರ್ನಸ್ ಲಬುಶೇನ್ (Marnus Labuschagne) ಅವರನ್ನು ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಇನ್ನು ಟ್ರಾವಿಸ್ ಹೆಡ್ ಇಂಜುರಿಯ ಬಗ್ಗೆ ಮಾಹಿತಿ ನೀಡಿರುವ ತಂಡದ ತರಬೇತುದಾರ ಆಂಡ್ರ್ಯೂ ಮೆಕ್‌ಡೊನಾಲ್ಡ್, ಹೆಡ್‌ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂಬುದನ್ನು ದೃಢಪಡಿಸಿದ್ದಾರೆ. ಆದರೆ ಅವರ ಚೇತರಿಗೆ ಸಮಯ ಹಿಡಿಯಲ್ಲಿದ್ದು, ವಿಶ್ವಕಪ್ ಪಂದ್ಯಾವಳಿಯ ಮೊದಲಾರ್ಧದಿಂದ ಅವರನ್ನು ಹೊರಗಿಡಲಾಗಿದೆ. ಹೀಗಾಗಿ ವಿಶ್ವಕಪ್ಗೆ ಆಯ್ಕೆಯಾಗಬೇಕಾದ 15 ಸದಸ್ಯರ ತಂಡದಲ್ಲಿ ಹೆಡ್ ಬದಲಿಗೆ ಬೇರೆಯವವರನ್ನು ಆಯ್ಕೆ ಮಾಡಬೇಕಾಗಿದೆ ಎಂದಿದ್ದಾರೆ.
IND vs AUS: ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ
ಟ್ರಾವಿಸ್ ಹೆಡ್ ಇಂಜುರಿಗೊಂಡಿರುವುದರಿಂದ ಮಾರ್ನಸ್ ಲಬುಶೇನ್ಗೆ ಭಾಗ್ಯದ ಬಾಗಿಲು ತೆರೆದಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ಆರಂಭದಲ್ಲಿ ಲಬುಶೇನ್ಗೆ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ ಆಟಗಾರರ ಇಂಜುರಿಯಿಂದಾಗಿ ತಂಡ ಸೇರಿಕೊಂಡಿದ್ದ ಲಬುಶೇನ್ ಶತಕ ಸೇರಿದಂತೆ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರಿಗೆ ಭಾರತದ ವಿರುದ್ಧದ ಸರಣಿಗೂ ತಂಡದಲ್ಲಿ ಅವಕಾಶ ನೀಡಲಾಗಿದೆ.
ಇನ್ನು ಆಸ್ಟ್ರೇಲಿಯಾ ತಂಡ ಆಗಸ್ಟ್ 7 ರಂದು ವಿಶ್ವಕಪ್‌ಗಾಗಿ ತಾತ್ಕಾಲಿಕ 15ಆಟಗಾರರ ತಂಡವನ್ನು ಹೆಸರಿಸಿತ್ತು. ಆ ತಂಡದಲ್ಲಿ ಟ್ರಾವಿಸ್ ಹೆಡ್‌ಗೆ ಅವಕಾಶ ನೀಡಿದ್ದರೆ, ಲಬುಶೇನ್ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಇದೀಗ ಆಟಗಾರರ ಇಂಜುರಿಯಿಂದಾಗಿ ತಂಡದಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಅಲ್ಲದೆ ವಿಶ್ವಕಪ್ಗೆ ತಂಡಗಳನ್ನು ಬದಲಿಸಲು ಸೆಪ್ಟೆಂಬರ್ 28 ರವರೆಗೆ ಅವಕಾಶ ನೀಡಿರುವುದರಿಂದ ಆಸೀಸ್ ಕ್ರಿಕೆಟ್ ಮಂಡಳಿ ತಂಡದಲ್ಲಿ ಯಾರನ್ನು ಆಡಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
ಆಸ್ಟ್ರೇಲಿಯಾ ವಿಶ್ವಕಪ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಆಷ್ಟನ್ ಅಗರ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್ (ಮಾರ್ನಸ್ ಲಬುಶೇನ್ ಆಡುವ ಸಾಧ್ಯತೆ ಹೆಚ್ಚು), ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ, ಮಿಚೆಲ್ ಸ್ಟಾರ್ಕ್.