ಭಾರತದ ಸ್ಟಾರ್ ಆಲ್ ರೌಂಡರ್ ಅಕ್ಷರ್ ಪಟೇಲ್ (Axar Patel) ಅವರು ಏಷ್ಯಾಕಪ್ 2023 ಟೂರ್ನಿಯಲ್ಲಿ ಇಂಜುರಿಗೆ ತುತ್ತಾಗಿ ಸದ್ಯ ಸಾಗುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ತಪ್ಪಿಸಿಕೊಂಡಿದ್ದಾರೆ. ಏಷ್ಯಾಕಪ್ನ ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಬ್ಯಾಟಿಂಗ್ ಮಾಡುವ ವೇಳೆ ಅಕ್ಷರ್ ಗಾಯಗೊಂಡಿದ್ದರು. ಇದರಿಂದಾಗಿ ಫೈನಲ್ ಪಂದ್ಯದಿಂದ ಹೊರಬಿದ್ದಿದ್ದರು. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ ಆಯ್ಕೆಯಾಗಿದ್ದರೂ, ಇವರಿಗೆ ಆಡಲು ಸಾಧ್ಯವಾಗುತ್ತಿಲ್ಲ.
ಅಕ್ಟೋಬರ್ 5 ರಿಂದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಶುರುವಾಗಲಿದೆ. ಭಾರತದ 15 ಸದಸ್ಯರ ಭಾಗವಾಗಿರುವ 29 ವರ್ಷದ ಅಕ್ಷರ್ ಗಾಯದಿಂದ ಇನ್ನೂ ಸಾಕಷ್ಟು ಚೇತರಿಸಿಕೊಳ್ಳದ ಕಾರಣ ವಿಶ್ವಕಪ್ಗೆ ಇವರ ಲಭ್ಯತೆ ಅನುಮಾನ ಮೂಡಿದೆ. ಆದರೆ ಬಿಸಿಸಿಐ ಮೂಲಗಳ ಪ್ರಕಾರ, ಅಕ್ಷರ್ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿಗೆ ಒಳಗಾಗಿದ್ದಾರೆ. ಅಕ್ಟೋಬರ್ 8 ರಂದು ಚೆನ್ನೈನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಹೊತ್ತಿಗೆ ಅವರು ಫಿಟ್ ಆಗಲಿದ್ದಾರಂತೆ.
ಧೋನಿ ದಾಖಲೆ ಮುರಿದ ಇಮ್ರಾನ್ ತಾಹಿರ್
ಇನ್ನು ಕ್ರಿಕ್‌ಬಜ್ ವರದಿಯ ಪ್ರಕಾರ, ಅಕ್ಷರ್, ವಿಶ್ವಕಪ್ ಆರಂಭವಾಗುವ ಹೊತ್ತಿಗೆ ಭಾರತ ತಂಡಕ್ಕೆ ಮರಳಲಿದ್ದಾರೆ. ಗುಜರಾತ್ ಮೂಲದ ಆಲ್ ರೌಂಡರ್ ವಿಶ್ವಕಪ್ ಅಭ್ಯಾಸ ಪಂದ್ಯಗಳಿಗೆ ಸಿದ್ಧರಾಗುತ್ತಾರೆ ಎಂದು ವರದಿ ಮಾಡಿದೆ. ಶನಿವಾರ (ಸೆಪ್ಟೆಂಬರ್ 30) ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಎದುರಿಸಲಿದೆ. ತಿರುವನಂತಪುರಂನಲ್ಲಿರುವ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾರತದ ಎರಡನೇ ಅಭ್ಯಾಸ ಪಂದ್ಯ ನಡೆಯಲಿದ್ದು, ನೆದರ್ಲೆಂಡ್ಸ್ ವಿರುದ್ಧ ಕಣಕ್ಕಿಳಿಯಲಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಂತಿಮ ಮೂರನೇ ಏಕದಿನ ಪಂದ್ಯ ಸೆಪ್ಟೆಂಬರ್ 27 ರಂದು ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಸೋಮವಾರ ಸಂಜೆ ರಾಜ್ಕೋಟ್ಗೆ ತಲುಪಿದ್ದಾರೆ. ವಿಶ್ರಾಂತಿಯಲ್ಲಿದ್ದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಬುಮ್ರಾ ತಂಡ ಸೇರಿಕೊಂಡಿದ್ದಾರೆ. ಭಾರತದ ಇಬ್ಬರು ಆಟಗಾರರನ್ನು ಹೊರತು ಪಡಿಸಿ ಉಳಿದೆಲ್ಲ ಪ್ಲೇಯರ್ಸ್ ರಾಜ್ಕೋಟ್ಗೆ ಬಂದಿದ್ದಾರೆ. ಶುಭ್ಮನ್ ಗಿಲ್ ಹಾಗೂ ಶಾರ್ದೂಲ್ ಠಾಕೂರ್ಗೆ ವಿಶ್ರಾಂತಿ ನೀಡಲಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ