ಈ ಸಲ ವಿಶ್ವಕಪ್ ನಮ್ದೆ: ಟೀಮ್ ಇಂಡಿಯಾ ಅಭಿಮಾನಿಗಳ ಹೀಗೊಂದು ಲೆಕ್ಕಾಚಾರ
ODI Word Cup 2023: ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ಏಕದಿನ ಕ್ರಿಕೆಟ್ನಲ್ಲಿ ನಂಬರ್ 1 ತಂಡ ಎನಿಸಿಕೊಂಡಿದೆ. ಇದೀಗ ನಂಬರ್ 1 ಪಟ್ಟದೊಂದಿಗೆ ಭಾರತ ತಂಡವು ಏಕದಿನ ವಿಶ್ವಕಪ್ನಲ್ಲೂ ಕಣಕ್ಕಿಳಿಯಲಿದೆ. ಟೀಮ್ ಇಂಡಿಯಾ ಅಗ್ರಸ್ಥಾನದೊಂದಿಗೆ ವರ್ಲ್ಡ್ಕಪ್ನಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗುತ್ತಿದ್ದಂತೆ ಇತ್ತ ಮತ್ತೊಂದು ಲೆಕ್ಕಾಚಾರ ಶುರುವಾಗಿದೆ. ಈ ಲೆಕ್ಕಾಚಾರದ ಪ್ರಕಾರ ಈ ಸಲ ಕಪ್ ನಮ್ದೆ.
ಹೌದು, 2015 ರಲ್ಲಿ ಆಸ್ಟ್ರೇಲಿಯಾ ತಂಡವು ಏಕದಿನ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ಮೂಲಕ ವಿಶ್ವಕಪ್ಗೆ ಎಂಟ್ರಿಕೊಟ್ಟಿತ್ತು. ಅಲ್ಲದೆ ಆ ವರ್ಷ ಚಾಂಪಿಯನ್ ಪಟ್ಟವನ್ನು ಸಹ ಅಲಂಕರಿಸಿತ್ತು. ಇನ್ನು 2019 ರಲ್ಲಿ ಇಂಗ್ಲೆಂಡ್ ಏಕದಿನ ಕ್ರಿಕೆಟ್ನಲ್ಲಿ ನಂಬರ್ 1 ತಂಡವಾಗಿ ಗುರುತಿಸಿಕೊಂಡಿತ್ತು. ಅಂದು ಅಗ್ರಸ್ಥಾನದೊಂದಿಗೆ ವಿಶ್ವಕಪ್ನಲ್ಲಿ ಕಾಣಿಸಿಕೊಂಡ ಇಂಗ್ಲೆಂಡ್ ತಂಡವು ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಂಡಿತು.
ಇದೀಗ 2023 ರಲ್ಲಿ ಟೀಮ್ ಇಂಡಿಯಾ ಏಕದಿನ ಕ್ರಿಕೆಟ್ನ ನಂಬರ್ 1 ತಂಡವಾಗಿ ಹೊರಹೊಮ್ಮಿದೆ. ಇದೇ ಸ್ಥಾನದೊಂದಿಗೆ ಏಕದಿನ ವಿಶ್ವಕಪ್ನಲ್ಲೂ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಈ ಬಾರಿ ಕೂಡ ಇತಿಹಾಸ ಪುನರಾವರ್ತನೆಯಾಗುವ ನಿರೀಕ್ಷೆಯಲ್ಲಿದ್ದಾರೆ ಟೀಮ್ ಇಂಡಿಯಾ ಅಭಿಮಾನಿಗಳು.
ಅದರಲ್ಲೂ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಟೀಮ್ ಇಂಡಿಯಾ ಗುರುತಿಸಿಕೊಂಡಿದೆ. ಇದರ ನಡುವೆ ಇದೀಗ ಏಕದಿನ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡವು ಅಗ್ರಸ್ಥಾನಕ್ಕೇರಿರುವುದು ಈ ನಿರೀಕ್ಷೆಯನ್ನು ದುಪ್ಟಟ್ಟುಗೊಳಿಸಿದೆ.
ವಿಶ್ವಕಪ್ನಲ್ಲಿ ನಂಬರ್ 1 ತಂಡಗಳದ್ದೇ ದರ್ಬಾರು:
ಕಳೆದ 9 ವಿಶ್ವಕಪ್ಗಳ ಅಂಕಿ ಅಂಶಗಳನ್ನು ತೆಗೆದುಕೊಂಡರೆ ಏಕದಿನ ತಂಡಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ತಂಡಗಳು 6 ಬಾರಿ ಫೈನಲ್ ಆಡಿದೆ. ಇದರಲ್ಲಿ 4 ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಹೀಗಾಗಿ ಈ ಬಾರಿ ಭಾರತ ತಂಡವನ್ನು ಫೈನಲ್ನಲ್ಲಿ ನಿರೀಕ್ಷಿಸಬಹುದು.
ಇದಲ್ಲದೆ ಕಳೆದ ಎರಡು ವಿಶ್ವಕಪ್ಗಳಲ್ಲಿ ತವರಿನ ತಂಡಗಳೇ ಚಾಂಪಿಯನ್ ಪಟ್ಟ ಅಲಂಕರಿಸಿರುವುದು ವಿಶೇಷ. ಅಂದರೆ 2015 ರಲ್ಲಿ ಆಸ್ಟ್ರೇಲಿಯಾ-ನ್ಯೂಝಿಲೆಂಡ್ ಏಕದಿನ ವಿಶ್ವಕಪ್ ಆಯೋಜಿಸಿತ್ತು. ಈ ವೇಳೆ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಪಟ್ಟಕ್ಕೇರಿದ್ದರು.
ಇನ್ನು 2019 ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಏಕದಿನ ವಿಶ್ವಕಪ್ ಅನ್ನು ಗೆದ್ದುಕೊಂಡಿದ್ದು ಇಯಾನ್ ಮೋರ್ಗನ್ ನಾಯಕತ್ವದ ಆಂಗ್ಲರ ಪಡೆ. ಇದಕ್ಕೂ ಮುನ್ನ 2011 ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಅನ್ನು ಟೀಮ್ ಇಂಡಿಯಾ ಗೆದ್ದುಕೊಂಡಿತ್ತು. ಈ ಎಲ್ಲಾ ಲೆಕ್ಕಾಚಾರಗಳೊಂದಿಗೆ ಈ ಸಲ ಕಪ್ ನಮ್ದೆ ಎನ್ನುವ ವಿಶ್ವಾಸದಲ್ಲಿದ್ದಾರೆ ಟೀಮ್ ಇಂಡಿಯಾ.
ಇದನ್ನೂ ಓದಿ: ಧೋನಿ ದಾಖಲೆ ಮುರಿದ ಇಮ್ರಾನ್ ತಾಹಿರ್
ವಿಶ್ವಕಪ್ನಲ್ಲಿ ನಂಬರ್ 1 ಏಕದಿನ ತಂಡಗಳ ಪ್ರದರ್ಶನ:
- 1987 – ಇಂಗ್ಲೆಂಡ್ (ರನ್ನರ್ಸ್)
- 1992 – ಆಸ್ಟ್ರೇಲಿಯಾ (ಗ್ರೂಪ್ ಸ್ಟೇಜ್)
- 1996 – ಆಸ್ಟ್ರೇಲಿಯಾ (ರನ್ನರ್ಸ್)
- 1999 – ಸೌತ್ ಆಫ್ರಿಕಾ (ಸೆಮಿ ಫೈನಲ್)
- 2003 – ಆಸ್ಟ್ರೇಲಿಯಾ 🏆
- 2007 – ಆಸ್ಟ್ರೇಲಿಯಾ 🏆
- 2011 – ಆಸ್ಟ್ರೇಲಿಯಾ (ಕ್ವಾರ್ಟರ್ ಫೈನಲ್)
- 2015 – ಆಸ್ಟ್ರೇಲಿಯಾ 🏆
- 2019 – ಆಸ್ಟ್ರೇಲಿಯಾ 🏆
- 2023 – ಭಾರತ (???)
ಏಕದಿನ ವಿಶ್ವಕಪ್ ಯಾವಾಗ ಶುರು?
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈ ವಿಶ್ವಕಪ್ನ ಸಂಪೂರ್ಣ ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.