ಏಕದಿನ ವಿಶ್ವಕಪ್ಗೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಕ್ರಿಕೆಟ್ ಮಹಾಸಮರದ ಕುರಿತಾದ ಚರ್ಚೆಗಳು ಜೋರಾಗಿದೆ. ಅದರಲ್ಲೂ ಈ ಬಾರಿ ಭಾರತದಲ್ಲಿ ಟೂರ್ನಿ ನಡೆಯುತ್ತಿರುವುದರಿಂದ ಟೀಮ್ ಇಂಡಿಯಾ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.
ಅತ್ತ ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಕೂಡ ಈ ಸಲ ಭಾರತ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಈ ಬಾರಿ ಸೆಮಿಫೈನಲ್ ಆಡಲಿರುವ 4 ತಂಡಗಳನ್ನೂ ಸಹ ಹೆಸರಿಸಿದ್ದಾರೆ.
ಇರ್ಫಾನ್ ಪಠಾಣ್ ಪ್ರಕಾರ, ಈ ಬಾರಿ ಟೀಮ್ ಇಂಡಿಯಾ ಸೆಮಿಫೈನಲ್ ಹಂತಕ್ಕೇರುವುದು ಖಚಿತ. ಏಕಂದರೆ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಟೀಮ್ ಇಂಡಿಯಾದಿಂದ ತವರಿನಲ್ಲಿ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು. ಹೀಗಾಗಿ ನಾಕೌಟ್ ಹಂತಕ್ಕೇರುವುದರಲ್ಲಿ ಅನುಮಾನ ಬೇಡ ಎಂದಿದ್ದಾರೆ ಪಠಾಣ್.
ಇನ್ನು ಅತ್ಯುತ್ತಮ ಆಟಗಾರರನ್ನು ಒಳಗೊಂಡಿರುವ ಸೌತ್ ಆಫ್ರಿಕಾ ತಂಡದಿಂದ ಕೂಡ ಈ ಬಾರಿ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದು. ಹೀಗಾಗಿ ದಕ್ಷಿಣ ಆಫ್ರಿಕಾ ಕೂಡ ಸೆಮೀಸ್ನಲ್ಲಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು ಎಂದಿದ್ದಾರೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್ ಕೂಡ ಅತ್ಯುತ್ತಮ ಬಳಗವನ್ನು ಹೊಂದಿದ್ದು, ಹೀಗಾಗಿ ಜೋಸ್ ಬಟ್ಲರ್ ಪಡೆಯಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು. ಅಲ್ಲದೆ ಇಂಗ್ಲೆಂಡ್ ತಂಡ ಸೆಮಿಫೈನಲ್ಗೆ ಪ್ರವೇಶಿಸಲಿದೆ ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
ಹಾಗೆಯೇ ಆಸ್ಟ್ರೇಲಿಯಾ ತಂಡ ಕೂಡ ಸೆಮಿಫೈನಲ್ಗೆ ಪ್ರವೇಶಿಸಲಿದೆ. ಏಕೆಂದರೆ ಐಸಿಸಿ ಟೂರ್ನಿಗಳಲ್ಲಿ ಆಸೀಸ್ ಪಡೆ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಹೀಗಾಗಿ ಆಸ್ಟ್ರೇಲಿಯಾ ಕೂಡ ಟಾಪ್-4 ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
Published On - 10:56 pm, Mon, 25 September 23