ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ 2022 (T20 World Cup) ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂದು ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಪಾಕಿಸ್ತಾನ ಹಾಗೂ ಇಂಗ್ಲೆಂಡ್ (Pakistan vs England) ನಡುವೆ ಫೈನಲ್ ಪಂದ್ಯ ಆಯೋಜಿಸಲಾಗಿದೆ. ಸೆಮಿ ಫೈನಲ್ನಲ್ಲಿ ಪಾಕ್ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಹಾಗೂ ಇಂಗ್ಲೆಂಡ್ ತಂಡ ಭಾರತವನ್ನು (India) ಸೋಲಿಸಿ ಫೈನಲ್ಗೆ ಪ್ರವೇಶ ಪಡೆದಿತ್ತು. ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡೂ ತಂಡಗಳು ಇದುವರೆಗೂ ಒಂದೊಂದು ಬಾರಿ ಚಾಂಪಿಯನ್‌ಗಳಾಗಿವೆ. 2009ರಲ್ಲಿ ಪಾಕಿಸ್ತಾನ ತನ್ನ ಮೊದಲನೇ ಟಿ20 ವಿಶ್ವಕಪ್ ಜಯಿಸಿತ್ತು. ಇಂಗ್ಲೆಂಡ್ 2010ರಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿತ್ತು. ಹೀಗಾಗಿ ಇದೀಗ ಎರಡನೇ ಬಾರಿ ಕಪ್ ಗೆಲ್ಲುವ ತಂಡ ಯಾವುದು ಎಂಬುದು ನೋಡಬೇಕಿದೆ.
ಪಾಕಿಸ್ತಾನ ಹಾಗೂ ಇಂಗ್ಲೆಂಡ್ ಎರಡೂ ತಂಡಗಳು ಬ್ಯಾಟಿಂಗ್ – ಬೌಲಿಂಗ್ನಲ್ಲಿ ಬಲಿಷ್ಠವಾಗಿದೆ. ಪಾಕ್ ಪಾಳಯದಲ್ಲಿ ನಾಯಕ ಬಾಬರ್ ಅಜಮ್ ಸರಿಯಾದ ಸಮಯಕ್ಕೆ ಫಾರ್ಮ್ಗೆ ಬಂದಿರುವುದು ಖುಷಿ ತಂದಿದೆ. ಮೊಹಮ್ಮದ್ ರಿಜ್ವಾನ್ ಕೂಡ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಈ ಓಪನರ್ಗಳೇ ಪಾಕ್ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರ. ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಖರ್ ಅಹ್ಮದ್ ಮಧ್ಯಮ ಕ್ರಮಾಂಕದ ಬಲವಾಗಿದ್ದಾರೆ. ಬೌಲಿಂಗ್ನಲ್ಲಿ ಶಾಹಿನ್ ಅಫ್ರಿದಿ ಘಾತಕ ವೇಗಿಯಾಗಿದ್ದರೆ ನಸೀಂ ಶಾ, ಹ್ಯಾರಿಸ್ ರೌಫ್ ಕೂಡ ಸ್ಟಾರ್ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ.
ಇಂಗ್ಲೆಂಡ್ ತಂಡ ಹೆಚ್ಚಾಗಿ ಬ್ಯಾಟರ್ಗಳ ಮೇಲೆ ಅವಲಂಬಿತವಾಗಿದೆ. 11ನೇ ಕ್ರಮಾಂಕದಲ್ಲಿ ಬರುವ ಆಟಗಾರ ಕೂಡ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಮುಖ್ಯವಾಗಿ ಓಪನರ್ಗಳಾದ ಅಲೆಕ್ಸ್ ಹೇಲ್ಸ್ ಹಾಗೂ ಜೋಸ್ ಬಟ್ಲರ್ ಕಳೆದ ಸೆಮೀಸ್ ಪಂದ್ಯದಲ್ಲಿ ಭಾರತ ವಿರುದ್ಧ ನೀಡಿದ ಪ್ರದರ್ಶನ ಪಾಕ್ ಪಡೆಯಲ್ಲಿ ಭಯ ಹುಟ್ಟಿಸಿರುವುದು ನಿಜ. ಮಧ್ಯಮ ಕ್ರಮಾಂಕದಲ್ಲಿ ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್ಸ್ಟೋನ್, ಮೊಯೀನ್ ಅಲಿ ಅಂತಹ ಟಿ20 ಸ್ಪೆಷಲಿಸ್ಟ್ ತಂಡದಲ್ಲಿದ್ದಾರೆ. ಆದಿಲ್ ರಶೀದ್, ಕ್ರಿಸ್ ಜೋರ್ಡನ್, ಕ್ರಿಸ್ ವೋಕ್ಸ್ ಹಾಗೂ ಸ್ಯಾಮ್ ಕುರ್ರನ್ ಪ್ರಮುಖ ಬೌಲರ್ಗಳಾಗಿದ್ದಾರೆ.
ಪಿಚ್ ಹೇಗಿದೆ?:
ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನ ಪಿಚ್ ತುಂಬಾ ಭಿನ್ನವಾಗಿದೆ. ಇಲ್ಲಿ ಬೌನ್ಸ್ ಹಾಗೂ ಹೆಚ್ಚಿನ ಸ್ವಿಂಗ್ ಇದ್ದು, ವೇಗಿಗಳಿಗೆ ಅನುಕೂಲವಾಗಲಿದೆ. ಈ ಮೈದಾನದಲ್ಲಿ ಒಟ್ಟು 21 ಟಿ20 ಪಂದ್ಯಗಳು ನಡೆದಿದ್ದು 11 ಬಾರಿ ಚೇಸಿಂಗ್ ನಡೆಸಿದ ತಂಡಗಳು ಗೆದ್ದಿದೆ. ಆದ್ದರಿಂದ ಈ ಪಂದ್ಯದಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಒಂದೊಮ್ಮೆ ಪಂದ್ಯಕ್ಕೆ ಆರಂಭದಲ್ಲಿ ಮಳೆ ಅಡ್ಡಿಪಡಿಸಿದರೆ ಆಗ ಮೊದಲು ಬ್ಯಾಟಿಂಗ್ ನಡೆಸಿದ ತಂಡಕ್ಕೆ ವರದಾನವಾಗಲಿದೆ. ಏಕೆಂದರೆ ಮಳೆ ಬಂದ ಬಳಿಕ ಈ ಮೈದಾನದಲ್ಲಿ ಚೆಂಡು ಅಷ್ಟಾಗಿ ವೇಗವಾಗಿ ಸಾಗುವುದಿಲ್ಲ ಇದರಿಂದ ಬ್ಯಾಟರ್ಗಳಿಗೆ ರನ್ ಗಳಿಸುವುದು ಕಷ್ಟವಾಗಲಿದೆ. ಆದ್ದರಿಂದ ಒಂದು ಕಡೆ ಟಾಸ್ ಮತ್ತು ಮಳೆಯೂ ಕೂಡ ತಂಡದ ಕೈ ಹಿಡಿಯಲಿದೆ.
ಹವಾಮಾನ ವರದಿ:
ಮೆಲ್ಬೋರ್ನ್ನಲ್ಲಿ ನಿನ್ನೆಯಿಂದಲೇ ಮೋಡ ಕವಿದ ವಾತಾವರಣ ಹೆಚ್ಚಿದ್ದು, ಪಂದ್ಯದ ದಿನ 95 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಸಹಿತ 25 ಮಿಮೀ ವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಫೈನಲ್ ಪಂದ್ಯ ನಡೆಯುವುದು ಅನುಮಾನ. ಭಾನುವಾರ ಮಳೆಯಾಗಿ ಪಂದ್ಯ ನಡೆಯದಿದ್ದರೆ ಸೋಮವಾರವನ್ನು ಮೀಸಲು ದಿನವನ್ನಾಗಿ ಇರಿಸಲಾಗಿದೆ ಆದರೆ ಆ ದಿನವೂ 5ರಿಂದ 10 ಮಿಲಿಮೀಟರ್ ಮಳೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಜಂಟಿ ಚಾಂಪಿಯನ್ ಆಗುವ ನಿರೀಕ್ಷೆ ಇದೆ. ಐಸಿಸಿ ನಿಯಮದ ಪ್ರಕಾರ ಟಿ20 ವಿಶ್ವಕಪ್‌ನ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ಫಲಿತಾಂಶ ನೀಡಲು ಎರಡೂ ಇನ್ನಿಂಗ್ಸ್ಗಳಲ್ಲಿ ಕನಿಷ್ಠ 10 ಓವರ್ ಆಟ ನಡೆಯಬೇಕು ಎಂದಿದೆ. ಒಂದೊಮ್ಮೆ ಭಾನುವಾರ ಪಂದ್ಯವು ಆರಂಭವಾಗಿ ಮಳೆಯಿಂದ ಅರ್ಧಕ್ಕೆ ನಿಂತರೆ ಮರುದಿವಸ ಉಳಿದ ಭಾಗವನ್ನು ಮುಂದುವರಿಸಲಾಗುವುದು.
ಪಂದ್ಯ ಎಷ್ಟು ಗಂಟೆಗೆ?:
ಪಾಕಿಸ್ತಾನ- ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1:30 ರಿಂದ ಆರಂಭವಾಗಲಿದೆ. ಟಾಸ್ ಅರ್ಧ ಗಂಟೆ ಮೊದಲು ಅಂದರೆ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ನೇರ ಪ್ರಸಾರವನ್ನು ಭಾರತದಲ್ಲಿನ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೋಡಬಹುದು.
Published On - 7:55 am, Sun, 13 November 22