ನಂಬರ್ 1 ಪಟ್ಟಕ್ಕಾಗಿ ಏಕದಿನ ವಿಶ್ವಕಪ್​ನಲ್ಲಿ ಬಾಬರ್-ಶುಭ್​ಮನ್ ನಡುವೆ ಪೈಪೋಟಿ

| Updated By: ಝಾಹಿರ್ ಯೂಸುಫ್

Updated on: Sep 26, 2023 | 4:14 PM

Babar Azam vs Shubman Gill: ಬಾಬರ್-ಶುಭ್​ಮನ್ ಗಿಲ್ ನಡುವೆ ಯಾರು ನಂಬರ್ 1 ಎಂಬುದರ ಸ್ಪಷ್ಟ ಚಿತ್ರಣ ಭಾರತ-ಪಾಕಿಸ್ತಾನ್ ನಡುವಿನ ಪಂದ್ಯದ ಬಳಿಕ ದೊರೆಯಲಿದೆ. ಏಕೆಂದರೆ ಪಾಕಿಸ್ತಾನ್ ತಂಡವು ಅಕ್ಟೋಬರ್ 6 ರಂದು ನೆದರ್​ಲೆಂಡ್ಸ್​ ವಿರುದ್ದ ತನ್ನ ಮೊದಲ ಪಂದ್ಯವನ್ನಾಡಲಿದೆ.

ನಂಬರ್ 1 ಪಟ್ಟಕ್ಕಾಗಿ ಏಕದಿನ ವಿಶ್ವಕಪ್​ನಲ್ಲಿ ಬಾಬರ್-ಶುಭ್​ಮನ್ ನಡುವೆ ಪೈಪೋಟಿ
Babar Azam - Shubman Gill
Follow us on

ಈ ಬಾರಿಯ ಏಕದಿನ ವಿಶ್ವಕಪ್​ನಲ್ಲಿ ಬಾಬರ್ ಆಝಂ ಹಾಗೂ ಶುಭ್​ಮನ್ ಗಿಲ್ ನಡುವೆ ನಂಬರ್ 1 ಪಟ್ಟಕ್ಕಾಗಿ ಭರ್ಜರಿ ಪೈಪೋಟಿ ಕಂಡು ಬರಲಿದೆ. ಏಕೆಂದರೆ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಪಾಕ್ ತಂಡದ ನಾಯಕ ಬಾಬರ್ ಅಗ್ರಸ್ಥಾನದಲ್ಲಿದ್ದರೆ, ಟೀಮ್ ಇಂಡಿಯಾ ಆರಂಭಿಕ ಶುಭ್​ಮನ್ ಗಿಲ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಆದರೆ ಮೊದಲೆರಡು ಸ್ಥಾನಗಳ ನಡುವಣ ರೇಟಿಂಗ್ ಪಾಯಿಂಟ್ಸ್​ ವ್ಯತ್ಯಾಸ ಕೇವಲ 43 ಅಂಕಗಳು ಮಾತ್ರ.

ಪ್ರಸ್ತುತ ಏಕದಿನ ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ 857 ರೇಟಿಂಗ್​ನೊಂದಿಗೆ ಬಾಬರ್ ಆಝಂ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ದ್ವಿತೀಯ ಸ್ಥಾನದಲ್ಲಿರುವ ಶುಭ್​ಮನ್ ಗಿಲ್ 814 ರೇಟಿಂಗ್ ಹೊಂದಿದ್ದಾರೆ. ಅತ್ತ ಏಕದಿನ ವಿಶ್ವಕಪ್​ನ ಮೊದಲ ಸುತ್ತಿನಲ್ಲಿ ಪ್ರತಿ ತಂಡಗಳು ಒಟ್ಟು 9 ಪಂದ್ಯಗಳನ್ನಾಡಲಿದೆ. ಹೀಗಾಗಿ ಏಕದಿನ ವಿಶ್ವಕಪ್ ಮುಕ್ತಾಯದ ವೇಳೆಗೆ ಯಾರು ನಂಬರ್ 1 ಎಂಬುದು ಕೂಡ ನಿರ್ಧಾರವಾಗಲಿದೆ.

ಶುಭ್​ಮನ್​ಗೆ ಉತ್ತಮ ಅವಕಾಶ:

ಏಕದಿನ ವಿಶ್ವಕಪ್​ ಮೂಲಕ ಏಕದಿನ ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಶುಭ್​ಮನ್ ಗಿಲ್​ಗೆ ಅತ್ಯುತ್ತಮ ಅವಕಾಶವಿದೆ. ಏಕೆಂದರೆ ಈ ಬಾರಿಯ ವಿಶ್ವಕಪ್ ನಡೆಯುತ್ತಿರುವುದು ಭಾರತದಲ್ಲಿ. ಅದರಲ್ಲೂ ತವರು ಮೈದಾನದಲ್ಲಿ ಅಬ್ಬರಿಸುವ ಗಿಲ್ ಮೊದಲ ಪಂದ್ಯದಲ್ಲೇ 22+ ಸ್ಕೋರ್​ಗಳಿಸಿದರೆ​ ಬಾಬರ್ ಆಝಂ ದ್ವಿತೀಯ ಸ್ಥಾನಕ್ಕಿಳಿಯಬಹುದು.

ಇದಾಗ್ಯೂ ಏಕದಿನ ವಿಶ್ವಕಪ್​ ಮೊದಲೆರಡು ಪಂದ್ಯಗಳು ಶುಭ್​ಮನ್ ಗಿಲ್ ಪಾಲಿಗೆ ನಿರ್ಣಾಯಕ. ಏಕೆಂದರೆ ಅತ್ತ ಬಾಬರ್ ಆಝಂ ಮೊದಲ ಎರಡು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೆ ಅಗ್ರಸ್ಥಾನ ಕಾಯ್ದುಕೊಳ್ಳಬಹುದು.

ಅಕ್ಟೋಬರ್ 14 ರ ಬಳಿಕ ಸ್ಪಷ್ಟ ಚಿತ್ರಣ:

ಶುಭ್​ಮನ್ ಗಿಲ್ ಮೊದಲ ಪಂದ್ಯದಲ್ಲೇ 22 ಕ್ಕಿಂತ ಹೆಚ್ಚು ರನ್ ಕಲೆಹಾಕಿದರೆ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದ್ದಾರೆ. ಆದರೆ ಇದು ಖಾಯಂ ಆಗಿರುವ ಸಾಧ್ಯತೆಯಿದೆ. ಹೀಗಾಗಿ ಇಬ್ಬರ ನಡುವೆ ಯಾರು ನಂಬರ್ 1 ಎಂಬುದರ ಸ್ಪಷ್ಟ ಚಿತ್ರಣ ಭಾರತ-ಪಾಕಿಸ್ತಾನ್ ನಡುವಿನ ಪಂದ್ಯದ ಬಳಿಕ ದೊರೆಯಲಿದೆ. ಏಕೆಂದರೆ ಪಾಕಿಸ್ತಾನ್ ತಂಡವು ಅಕ್ಟೋಬರ್ 6 ರಂದು ನೆದರ್​ಲೆಂಡ್ಸ್​ ವಿರುದ್ದ ತನ್ನ ಮೊದಲ ಪಂದ್ಯವನ್ನಾಡಲಿದೆ.

ಇತ್ತ ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಏಕದಿನ ವಿಶ್ವಕಪ್​ ಅಭಿಯಾನ ಆರಂಭಿಸಲಿದೆ. ಇನ್ನು ಪಾಕ್ ತಂಡ ತನ್ನ 2ನೇ ಪಂದ್ಯವನ್ನು ಅಕ್ಟೋಬರ್ 10 ರಂದು ಶ್ರೀಲಂಕಾ ವಿರುದ್ಧ ಆಡಲಿದೆ. ಇನ್ನು ಭಾರತ ತಂಡವು ಅಕ್ಟೋಬರ್ 11 ರಂದು ಅಫ್ಘಾನಿಸ್ತಾನ್ ವಿರುದ್ಧ ತನ್ನ 2ನೇ ಪಂದ್ಯವನ್ನಾಡಲಿದೆ.

ಅಂದರೆ ಈ ಎರಡು ಪಂದ್ಯಗಳ ಮೂಲಕ ಬಾಬರ್ ಆಝಂ ಅಗ್ರಸ್ಥಾನವನ್ನು ಕಾಯ್ದುಕೊಳ್ಳಬಹುದು. ಅತ್ತ ಭಾರತ ತಂಡದ ಮೊದಲೆರಡು ಪಂದ್ಯಗಳಲ್ಲಿ ಮಿಂಚುವ ಮೂಲಕ ಶುಭ್​ಮನ್ ಗಿಲ್​ಗೂ ಅಗ್ರಸ್ಥಾನಕ್ಕೇರುವ ಅವಕಾಶವಿದೆ.

ಒಂದು ವೇಳೆ ಇಬ್ಬರು ಆಟಗಾರರು ತಮ್ಮ ಮೊದಲೆರಡು ಪಂದ್ಯಗಳಲ್ಲಿ ಮಿಂಚಿದರೆ ಶ್ರೇಯಾಂಕ ಪಟ್ಟಿ ಯಥಾಸ್ಥಿತಿಯಲ್ಲೇ ಮುಂದುವರೆಯಲಿದೆ. ಇದಾಗ್ಯೂ ಅಕ್ಟೋಬರ್ 14 ರಂದು ಮೂರನೇ ಪಂದ್ಯದಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ.

ಈ ಪಂದ್ಯದಲ್ಲಿ ಮಿಂಚುವ ಆಟಗಾರ ಏಕದಿನ ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದು ಬಹುತೇಕ ಖಚಿತ ಎನ್ನಬಹುದು. ಏಕೆಂದರೆ ಪ್ರತಿ ಬುಧವಾರ ಐಸಿಸಿ ಶ್ರೇಯಾಂಕ ಪಟ್ಟಿಗಳನ್ನು ಅಪ್​ಡೇಟ್ ಮಾಡುತ್ತದೆ. ಭಾರತ ಮತ್ತು ಪಾಕಿಸ್ತಾನದ ಪಂದ್ಯದ ಬಳಿಕ ಅಕ್ಟೋಬರ್ 18 ರಂದು ಶ್ರೇಯಾಂಕ ಪಟ್ಟಿ ಅಪ್​ಡೇಟ್ ಆಗಲಿದೆ. ಇದರ ನಡುವೆ ಭಾರತ ಹಾಗೂ ಪಾಕಿಸ್ತಾನ್ ತಂಡಗಳಿಗೆ ಯಾವುದೇ ಪಂದ್ಯವಿಲ್ಲ.

ಇದನ್ನೂ ಓದಿ: ODI World Cup 2023 Schedule: ಏಕದಿನ ವಿಶ್ವಕಪ್​ನ​ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಹೀಗಾಗಿ ಅಕ್ಟೋಬರ್ 14 ರಂದು ನಡೆಯಲಿರುವ ಇಂಡೊ-ಪಾಕ್ ಕ್ರಿಕೆಟ್ ಕದನದ ಬಳಿಕ ಏಕದಿನ ಕ್ರಿಕೆಟ್​ನ ನಂಬರ್ 1 ಬ್ಯಾಟರ್​ ಯಾರು ಎಂಬುದರ ಸ್ಪಷ್ಟ ಚಿತ್ರಣವಂತು ಸಿಗಲಿದೆ. ಇದಾಗ್ಯೂ ಈ ಟೂರ್ನಿಯುದ್ದಕ್ಕೂ ಬಾಬರ್ ಹಾಗೂ ಶುಭ್​ಮನ್ ಗಿಲ್ ನಡುವೆ ಅಗ್ರಸ್ಥಾನಕ್ಕಾಗಿ ಪೈಪೋಟಿ ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.

 

 

Published On - 3:59 pm, Tue, 26 September 23