ಏಷ್ಯಾಕಪ್‌ನಲ್ಲಿ (Asia Cup 2023) ಹೀನಾಯ ಸೋಲಿನ ನಂತರ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ (Pakistan cricket team) ಅಲ್ಲೋಲ ಕಲ್ಲೋಲ ಉಂಟಾಗಿದೆ. ನಾಯಕ ಬಾಬರ್ ಆಝಂ (Babar Azam) ಮೇಲೆ ನಿರಂತರವಾಗಿ ಪ್ರಶ್ನೆಗಳು ಎದ್ದಿರುವಾಗಲೇ ಇದೀಗ ತಂಡದಲ್ಲಿನ ಒಡಕಿನ ವಿಚಾರವೂ ಬೆಳಕಿಗೆ ಬಂದಿದೆ. ಕಾಂಟಿನೆಂಟಲ್ ಈವೆಂಟ್ನಲ್ಲಿ ಆಟಗಾರರ ಕಳಪೆ ಪ್ರದರ್ಶನದಿಂದ ಅಸಮಾಧಾನಗೊಂಡಿರುವ ನಾಯಕ ಬಾಬರ್ ಆಝಂ, ಡ್ರೆಸ್ಸಿಂಗ್ ಕೋಣೆಯಲ್ಲಿ ತನ್ನ ಸಹ ಆಟಗಾರರ ವಿರುದ್ಧ ಹರಿಹಾಯ್ದು, ಸ್ಟಾರ್ ಆಟಗಾರ ಶಾಹೀನ್ ಶಾ ಅಫ್ರಿದಿ (Shaheen Afridi) ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ, ಆಟಗಾರರ ಜೊತೆ ವಾಕ್ಸಮರ ನಡೆಸಿದ ಪಾಕ್ ನಾಯಕ ಬಾಬರ್ ಶ್ರೀಲಂಕಾ ಬಿಟ್ಟು ಯಾರಿಗೂ ಮಾಹಿತಿ ನೀಡದೆ ಏಕಾಂಗಿಯಾಗಿ ಪಾಕಿಸ್ತಾನಕ್ಕೆ ವಾಪಸ್ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ವಾಸ್ತವವಾಗಿ ಈ ಏಷ್ಯಾಕಪ್ಗೆ ಪಾಕಿಸ್ತಾನ ತಂಡ ಆತಿಥೇಯ ದೇಶವಾಗಿತ್ತು. ಆದರೆ ಸೂಪರ್-4 ಸುತ್ತಿನಲ್ಲಿ ಕಳಪೆ ಪ್ರದರ್ಶನ ನೀಡಿದ ಬಾಬರ್ ಪಡೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿ ಟೂರ್ನಿಯಿಂದ ಹೊರಬಿದ್ದಿತು. ಭಾರತದ ವಿರುದ್ಧ ಹೀನಾಯವಾಗಿ ಸೋಲನುಭವಿಸಿದ್ದ ಪಾಕ್, ಆ ಬಳಿಕ ಶ್ರೀಲಂಕಾ ವಿರುದ್ಧವೂ ಸೋತು ಏಷ್ಯಾಕಪ್ ಪ್ರಯಾಣವನ್ನು ಅಂತ್ಯಗೊಳಿಸಿತ್ತು. ಇದು ಪಾಕ್ ನಾಯಕ ಬಾಬರ್ ಅವರ ನಿದ್ದೆಗೆಡಿಸಿತ್ತು. ಹೀಗಾಗಿ ಶ್ರೀಲಂಕಾ ವಿರುದ್ಧದ ಪಂದ್ಯ ಮುಗಿದ ಬಳಿಕ ಪಾಕ್ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಕೋಲಾಹಲ ಉಂಟಾಗಿದ್ದು, ನಾಯಕ ಬಾಬರ್ ಮತ್ತು ಶಾಹೀನ್ ಶಾ ಆಫ್ರಿದಿ ನಡುವೆ ತೀವ್ರ ವಾಗ್ವಾದ ನಡೆದಿದೆ ಎಂದು ವರದಿಯಾಗಿದೆ. ಅಲ್ಲದೆ ಈ ವಾಕ್ಸಮರವನ್ನು ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಮಧ್ಯಪ್ರವೇಶಿಸಿ ತಿಳಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ತನ್ನದೇ ತಂಡದ ಆಟಗಾರನಿಗೆ ಬೈದಾ ಬಾಬರ್ ಅಜಮ್: ಕಣ್ಣೀರಿಟ್ಟ ಪಾಕ್ ಆಟಗಾರರು
ಬೋಲ್ ನ್ಯೂಸ್ ಪ್ರಕಾರ, ಶ್ರೀಲಂಕಾ ವಿರುದ್ಧದ ಸೋಲಿನ ನಂತರ, ಬಾಬರ್ ಅಜಮ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಆಟಗಾರರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ಶ್ರೀಲಂಕಾ ವಿರುದ್ಧ ನಮ್ಮ ತಂಡ ನಂಬರ್ 1 ತಂಡದ ರೀತಿಯಲ್ಲಿ ಪ್ರದರ್ಶನ ನೀಡಲಿಲ್ಲ. ನಿಮ್ಮನ್ನು ನೀವು ಸೂಪರ್‌ಸ್ಟಾರ್‌ಗಳು ಎಂದುಕೊಳ್ಳುವುದನ್ನು ನಿಲ್ಲಿಸಿ. ನೀವು ವಿಶ್ವಕಪ್‌ನಲ್ಲಿ ಸೋತರೆ ಯಾರೂ ನಿಮ್ಮನ್ನು ಸೂಪರ್‌ಸ್ಟಾರ್ ಎಂದು ಪರಿಗಣಿಸುವುದಿಲ್ಲ’ ಎಂದು ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ವೇಳೆ ಬಾಬರ್ ಮಾತಿಗೆ ಅಡ್ಡಬಂದ ಶಾಹೀನ್ ಅಫ್ರಿದಿ ಅವರು ಆಟಗಾರರನ್ನು ತೆಗಳುವ ಬದಲು ಅವರ ಪ್ರದರ್ಶನವನ್ನು ಶ್ಲಾಘಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಬಾಬರ್, ಅಫ್ರಿದಿ ಮಾತಿಗೆ ಕಿವಿಗೊಡದೆ ವಿಶ್ವಕಪ್‌ನಲ್ಲಿ ತಮ್ಮ ಪ್ರದರ್ಶನದತ್ತ ಗಮನ ಹರಿಸುವಂತೆ ಆಟಗಾರರನ್ನು ಒತ್ತಾಯಿಸಿದ್ದಾರೆ. ನಂತರ ಎಲ್ಲಾ ಆಟಗಾರರು ಹೋಟೆಲ್‌ಗೆ ತೆರಳಿದ್ದಾರೆ. ಆದರೆ ಬಾಬರ್ ಮಾತ್ರ ಯಾರೊಂದಿಗೂ ಮಾತನಾಡದೆ, ಯಾರಿಗೂ ತಿಳಿಸದೆ ಶ್ರೀಲಂಕಾದಿಂದ ಮನೆಗೆ ವಾಪಸ್ಸಾಗಿದ್ದಾರೆ ಎಂದು ವರದಿಯಾಗಿದೆ.
ಬಾಬರ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಈ ಪಂದ್ಯಾವಳಿಯಲ್ಲಿ ಪಾಕಿಸ್ತಾನವು, ಬಾಂಗ್ಲಾದೇಶ ಮತ್ತು ನೇಪಾಳ ವಿರುದ್ಧ ಗೆಲುವು ಸಾಧಿಸಿದರೆ, ಭಾರತ ಮತ್ತು ಶ್ರೀಲಂಕಾ ವಿರುದ್ಧ ಮುಗ್ಗರಿಸಿತ್ತು. ಆದ್ದರಿಂದ ತಂಡವು ಸೂಪರ್ -4 ಸುತ್ತಿನ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿಯಬೇಕಾಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:27 am, Sun, 17 September 23