
ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ್ ತಂಡ ಜಯ ಸಾಧಿಸಿದೆ. ಅದು ಕೂಡ ಬರೋಬ್ಬರಿ 21 ವರ್ಷಗಳ ಬಳಿಕ. ಅಂದರೆ ಕಳೆದ ಎರಡು ದಶಕಗಳಿಂದ ಬಾಂಗ್ಲಾದೇಶ್ ಪಾಲಿಗೆ ಮರೀಚಿಕೆಯಾಗಿದ್ದ ಆಸೀಸ್ ವಿರುದ್ಧದ ಗೆಲುವು ಕೊನೆಗೂ ದಕ್ಕಿದೆ. ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಜೋಶ್ ಇಂಗ್ಲಿಸ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆರಂಭಿಕ ದಾಂಡಿಗ ತಂಝೀದ್ ಹಸನ್ 54 ರನ್ ಬಾರಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಜ್ಮುಲ್ ಹೊಸೇನ್ ಶಾಂತೊ 67 ರನ್ಗಳ ಕೊಡುಗೆ ನೀಡಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಸದ್ದೀಕ್ ಹೊಸೇನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 70 ಎಸೆತಗಳನ್ನು ಎದುರಿಸಿದ ಮೊಸದ್ದೀಕ್ 3 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಅಜೇಯ 86 ರನ್ ಬಾರಿಸಿದರು. ಈ ಮೂಲಕ ಬಾಂಗ್ಲಾದೇಶ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 284 ರನ್ ಕಲೆಹಾಕಿತು.
285 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಎಸೆತದಲ್ಲೇ ಆಘಾತ ನೀಡುವಲ್ಲಿ ಬಾಂಗ್ಲಾದೇಶ್ ಯಶಸ್ವಿಯಾಯಿತು. ತಸ್ಕಿನ್ ಅಹ್ಮದ್ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲೇ ಮ್ಯಾಥ್ಯೂ ಶಾರ್ಟ್ (0) ಕ್ಲೀನ್ ಬೌಲ್ಡ್ ಆಗಿದ್ದರು.
ಈ ಆಘಾತದಿಂದ ಪಾರಾಗುವ ಮುನ್ನವೇ ಮಾರ್ನಸ್ ಲಾಬುಶೇನ್ (1) ವಿಕೆಟ್ ಕಳೆದುಕೊಂಡಿತು. ಇನ್ನು ಜೋಶ್ ಇಂಗ್ಲಿಸ್ 19 ರನ್ಗಳಿಸಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಅಲೆಕ್ಸ್ ಕ್ಯಾರಿ (47) ಹಾಗೂ ಕ್ಯಾಮರೋನ್ ಗ್ರೀನ್ (52*) ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಭರವಸೆ ಮೂಡಿಸಿದ್ದರು.
ಆದರೆ ಬಾಂಗ್ಲಾ ಬೌಲರ್ಗಳ ಸಂಘಟಿತು ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ 42.2 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 191 ರನ್ ಕಲೆಹಾಕಲಷ್ಟೇ ಶಕ್ತರಾದರು. ಈ ಹಂತದಲ್ಲಿ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಇನ್ನು ಪಂದ್ಯದ ಫಲಿತಾಂಶಕ್ಕೆ ಡಕ್ವರ್ತ್ ಲೂಯಿಸ್ ನಿಯಮವನ್ನು ಅನ್ವಯಿಸಲಾಯಿತು. ಅದರಂತೆ ಬಾಂಗ್ಲಾದೇಶ್ ತಂಡವು 86 ರನ್ಗಳ ಭರ್ಜರಿ ಜಯ ಸಾಧಿಸಿದೆ. ವಿಶೇಷ ಎಂದರೆ ಇದು ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ್ ತಂಡದ 2ನೇ ಗೆಲುವು.
ಇದಕ್ಕೂ ಮುನ್ನ ಬಾಂಗ್ಲಾದೇಶ್ ತಂಡ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದ್ದು 2005 ರಲ್ಲಿ. ಇದಾದ ಬಳಿಕ ಒಮ್ಮೆಯೂ ಕಾಂಗರೂ ಪಡೆಯನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ. ಇದೀಗ ಬರೋಬ್ಬರಿ 21 ವರ್ಷಗಳ ಬಳಿಕ ಗೆಲುವಿನ ನಗೆ ಬೀರುವಲ್ಲಿ ಬಾಂಗ್ಲಾದೇಶ್ ತಂಡ ಯಶಸ್ವಿಯಾಗಿದೆ.
ಬಾಂಗ್ಲಾದೇಶ್ ಪ್ಲೇಯಿಂಗ್ 11: ತಂಝೀದ್ ಹಸನ್ ತಮೀಮ್ , ಸೈಫ್ ಹಸನ್ , ನಜ್ಮುಲ್ ಹೊಸೇನ್ ಶಾಂತೊ ,ಲಿಟ್ಟನ್ ದಾಸ್ (ವಿಕೆಟ್ ಕೀಪರ್ ), ತೌಹಿದ್ ಹೃದೋಯ್, ಮೊಸದ್ದೀಕ್ ಹೊಸೇನ್ , ಮೆಹಿದಿ ಹಸನ್ ಮಿರಾಝ್ (ನಾಯಕ) , ತನ್ವೀರ್ ಇಸ್ಲಾಂ , ತಸ್ಕಿನ್ ಅಹ್ಮದ್ , ಮುಸ್ತಫಿಝುರ್ ರೆಹಮಾನ್ , ನಹಿದ್ ರಾಣಾ.
ಇದನ್ನೂ ಓದಿ: ಒಂದೇ ಓವರ್ನಲ್ಲಿ 3 ವಿಕೆಟ್: ಟೀಮ್ ಇಂಡಿಯಾಗೆ ರೋಚಕ ಜಯ
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಮ್ಯಾಥ್ಯೂ ಶಾರ್ಟ್ , ಜೋಶ್ ಇಂಗ್ಲಿಸ್ (ನಾಯಕ) , ಕೂಪರ್ ಕೊನೊಲಿ , ಮಾರ್ನಸ್ ಲಾಬುಶೇನ್ , ಅಲೆಕ್ಸ್ ಕ್ಯಾರಿ , ಕ್ಯಾಮರೋನ್ ಗ್ರೀನ್ , ಮ್ಯಾಟ್ ರೆನ್ಶಾ , ಲಿಯಾಮ್ ಸ್ಕಾಟ್ , ಆ್ಯಡಂ ಝಂಪಾ,
ನಾಥನ್ ಎಲ್ಲಿಸ್ , ಕ್ಸೇವಿಯರ್ ಬಾರ್ಟ್ಲೆಟ್.
Published On - 8:36 am, Wed, 10 June 26