
ಬಾಂಗ್ಲಾದೇಶ ಕ್ರಿಕೆಟ್ ತಂಡವು 2025 ರ ಏಷ್ಯಾಕಪ್‌ನಲ್ಲಿ (Asia Cup 2025) ತನ್ನ ಪ್ರದರ್ಶನದಿಂದ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಗುಂಪು ಹಂತದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿದ್ದ ಬಾಂಗ್ಲಾದೇಶ, ಸೂಪರ್ -4 ರಲ್ಲಿ ಶ್ರೀಲಂಕಾವನ್ನು ಸೋಲಿಸಿ ಫೈನಲ್ ತಲುಪುವ ಹೊಸ್ತಿಲಿನಲ್ಲಿದೆ. ಆದರೆ ಈ ಎರಡು ಗೆಲುವುಗಳು ಬಾಂಗ್ಲಾದೇಶ ತಂಡದ ತರಬೇತುದಾರರಲ್ಲಿ ಅತಿಯಾದ ಆತ್ಮವಿಶ್ವಾಸವನ್ನು ತುಂಬಿದೆ ಎಂಬುದು ಅವರ ಹೇಳಿಕೆಗಳಿಂದಲೇ ಬಹಿರಂಗವಾಗಿದೆ. ಸತತ 4 ಪಂದ್ಯಗಳನ್ನು ಗೆಲ್ಲುವ ಮೂಲಕ ಈ ಪಂದ್ಯಾವಳಿಯಲ್ಲಿ ಬಲಿಷ್ಠ ತಂಡವೆಂದು ಸಾಬೀತಾಗಿರುವ ಟೀಂ ಇಂಡಿಯಾ ವಿರುದ್ಧದ ಪಂದ್ಯಕ್ಕೂ ಮೊದಲು, ಬಾಂಗ್ಲಾದೇಶದ ತರಬೇತುದಾರ ಫಿಲ್ ಸಿಮ್ಮನ್ಸ್ ಭಾರತೀಯ ತಂಡವನ್ನು ಯಾರಾದರೂ ಸೋಲಿಸಬಹುದು ಎಂದು ಹೇಳಿಕೊಂಡಿದ್ದಾರೆ.
ಸೂಪರ್ ಫೋರ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ತಮ್ಮ ಆರಂಭಿಕ ಪಂದ್ಯಗಳನ್ನು ಗೆದ್ದು ಉತ್ತಮ ಆರಂಭವನ್ನು ಪಡೆದುಕೊಂಡಿವೆ. ಟೀಂ ಇಂಡಿಯಾ ಪಾಕಿಸ್ತಾನವನ್ನು ಸೋಲಿಸಿದರೆ, ಬಾಂಗ್ಲಾದೇಶ ಶ್ರೀಲಂಕಾವನ್ನು ಮಣಿಸಿದೆ. ಈಗ, ಸೆಪ್ಟೆಂಬರ್ 24 ರ ಬುಧವಾರ, ಭಾರತ ಮತ್ತು ಬಾಂಗ್ಲಾದೇಶ ಪರಸ್ಪರ ಮುಖಾಮುಖಿಯಾಗುತ್ತವೆ. ಈ ಪಂದ್ಯವನ್ನು ಯಾವ ತಂಡ ಗೆದ್ದರೂ ಅದು ಫೈನಲ್‌ಗೆ ಅರ್ಹತೆ ಪಡೆಯುವುದು ಖಚಿತ. ಇಲ್ಲಿಯವರೆಗಿನ ತಂಡದ ಪ್ರದರ್ಶನ ಮತ್ತು ಎರಡೂ ತಂಡಗಳ ಟ್ರ್ಯಾಕ್ ರೆಕಾರ್ಡ್ ಆಧರಿಸಿ, ಟೀಂ ಇಂಡಿಯಾ ಗೆಲ್ಲುವ ನೆಚ್ಚಿನ ತಂಡವಾಗಿದೆ, ಆದರೆ ಬಾಂಗ್ಲಾದೇಶದ ಕೋಚ್ ಕೂಡ ಟೀಂ ಇಂಡಿಯಾಗೆ ಕಠಿಣ ಹೋರಾಟ ನೀಡುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶದ ಕೋಚ್ ಸಿಮನ್ಸ್ ತಮ್ಮ ಉದ್ದೇಶಗಳನ್ನು ವ್ಯಕ್ತಪಡಿಸುತ್ತಾ, ‘ಪ್ರತಿಯೊಂದು ತಂಡಕ್ಕೂ ಭಾರತವನ್ನು ಸೋಲಿಸುವ ಸಾಮರ್ಥ್ಯವಿದೆ. ಭಾರತ ಮೊದಲು ಏನು ಮಾಡಿದೆ ಎಂಬುದು ಮುಖ್ಯವಲ್ಲ. ಬುಧವಾರ ಏನಾಗುತ್ತದೆ ಎಂಬುದು ಮುಖ್ಯ. ಆ ಮೂರುವರೆ ಗಂಟೆಗಳಲ್ಲಿ ಏನಾಗುತ್ತದೆ ಎಂಬುದು ನಿರ್ಣಾಯಕ. ನಾವು ನಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಮತ್ತು ಭಾರತದ ದೌರ್ಬಲ್ಯಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತೇವೆ’ ಎಂದಿದ್ದಾರೆ.
Asia Cup 2025: ಸೂಪರ್ 4 ಸುತ್ತಿನಲ್ಲಿ ಭಾರತ- ಬಾಂಗ್ಲಾ ಮುಖಾಮುಖಿ; ಯಾರಿಗೆ ಮೊದಲ ಸೋಲು?
ಕೋಚ್ ಫಿಲ್ ಸಿಮ್ಮನ್ಸ್ ತಮ್ಮ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಲು ದಿಟ್ಟ ಹೇಳಿಕೆಗಳನ್ನು ನೀಡುವುದು ತಪ್ಪಲ್ಲ. ಆದಾಗ್ಯೂ, ಅಂತಹ ಹೇಳಿಕೆಗಳು ಪ್ರಸ್ತುತ ಪರಿಸ್ಥಿತಿಗೆ ಹೊಂದಿಕೆಯಾಗುವುದಿಲ್ಲ. ವಿಶೇಷವಾಗಿ ಬಾಂಗ್ಲಾದೇಶ ತಂಡವು ಕಳೆದ 6 ವರ್ಷಗಳಲ್ಲಿ ಒಂದೇ ಒಂದು ಪಂದ್ಯದಲ್ಲಿ ಭಾರತವನ್ನು ಸೋಲಿಸದಿರುವಾಗ. ಬಾಂಗ್ಲಾದೇಶ ತಂಡ ಬರೋಬ್ಬರಿ 2148 ದಿನಗಳ ಹಿಂದೆ ಅಂದರೆ ನವೆಂಬರ್ 3, 2019 ರಂದು ನಡೆದಿದ್ದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಸೋಲಿಸಿತ್ತು. ಅಂದಿನಿಂದ ಇಂದಿನವರೆಗೆ ಬಾಂಗ್ಲಾದೇಶ ವಿರುದ್ಧ ಭಾರತ ಪಾರುಪತ್ಯ ಮೆರೆದಿದೆ. ಹೀಗಿರುವಾಗ ಬಾಂಗ್ಲಾದೇಶ ಕೋಚ್ ನೀಡಿರುವ ಹೇಳಿಕೆ ಕೊಂಚ ಅತಿರೇಕ ಎನಿಸಿದೆ.
ಈ ಏಷ್ಯಾಕಪ್ ಬಗ್ಗೆ ಹೇಳುವುದಾದರೆ, ಒಂದೇ ಒಂದು ಪಂದ್ಯವನ್ನು ಸೋಲದ ಏಕೈಕ ತಂಡ ಭಾರತ. ಮೊದಲ ಪಂದ್ಯದಲ್ಲಿ ಯುಎಇಯನ್ನು 27 ಎಸೆತಗಳಿರುವಂತೆಯೇ ಸೋಲಿಸಿದ್ದ ಭಾರತ ಆ ನಂತರ ಪಾಕಿಸ್ತಾನವನ್ನು 25 ಎಸೆತಗಳು ಬಾಕಿ ಇರುವಾಗಲೇ ಸೋಲಿಸಿತು. ಹಾಗೆಯೇ ಓಮನ್ ತಂಡವನ್ನು 21 ರನ್‌ಗಳಿಂದ ಮತ್ತು ಸೂಪರ್ ಫೋರ್‌ನಲ್ಲಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ