- Kannada News Photo gallery Cricket photos Smriti Mandhana Tops, Brits & Amin Rise: ICC Women's ODI Ranking Update
ODI Rankings: ಏಕದಿನ ಕ್ರಿಕೆಟ್ನಲ್ಲಿ ಪಾರುಪತ್ಯ ಮುಂದುವರೆಸಿದ ಸ್ಮೃತಿ ಮಂಧಾನ
ICC Women's ODI Rankings: 2025ರ ಮಹಿಳಾ ವಿಶ್ವಕಪ್‌ಗೆ ಮುಂಚಿತವಾಗಿ, ಐಸಿಸಿ ಮಹಿಳಾ ಏಕದಿನ ಶ್ರೇಯಾಂಕದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬಂದಿವೆ. ಸ್ಮೃತಿ ಮಂಧಾನ ಅಗ್ರಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ತಾಜ್ಮಿನ್ ಬ್ರಿಟ್ಸ್ ಮತ್ತು ಪಾಕಿಸ್ತಾನದ ಸಿದ್ರಾ ಅಮೀನ್ ಅವರು ಗಮನಾರ್ಹ ಏರಿಕೆಯನ್ನು ಕಂಡಿದ್ದಾರೆ. ಆಸ್ಟ್ರೇಲಿಯಾದ ಬೆತ್ ಮೂನಿ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಬೌಲಿಂಗ್ ಮತ್ತು ಆಲ್‌ರೌಂಡರ್ ಶ್ರೇಯಾಂಕದಲ್ಲೂ ಬದಲಾವಣೆಗಳಾಗಿವೆ.
Updated on: Sep 23, 2025 | 7:27 PM

2025 ರ ಮಹಿಳಾ ವಿಶ್ವಕಪ್‌ಗೆ ಮುಂಚಿತವಾಗಿ ಐಸಿಸಿ ಮಹಿಳಾ ಏಕದಿನ ಶ್ರೇಯಾಂಕದಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಇತ್ತೀಚೆಗೆ ಪಾಕಿಸ್ತಾನ-ದಕ್ಷಿಣ ಆಫ್ರಿಕಾ ಮತ್ತು ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯಲ್ಲಿನ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ್ತಿಯರಿಗೆ ಭರ್ಜರಿ ಮುಂಬಡ್ತಿ ಸಿಕ್ಕಿದೆ. ಟೀಂ ಇಂಡಿಯಾ ಉಪನಾಯಕಿ ಸ್ಮೃತಿ ಮಂಧಾನ ಪಾರುಪತ್ಯ ಮುಂದುವರೆದಿದೆ.

ಆಸ್ಟ್ರೇಲಿಯಾ ವನಿತಾ ತಂಡವ ವಿರುದ್ಧ ನಡೆದಿದ್ದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದ ಸ್ಮೃತಿ ಮಂದಾನ ಸತತ ಎರಡು ಪಂದ್ಯಗಳಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದರು. ಇದೀಗ ಅದರ ಫಲವಾಗಿ ತಮ್ಮ ವೃತ್ತಿಜೀವನದ ಅತ್ಯುತ್ತಮ 818 ರೇಟಿಂಗ್ ಪಾಯಿಂಟ್‌ಗಳನ್ನು ಗಳಿಸುವ ಮೂಲಕ ನಂಬರ್ 1 ಸ್ಥಾನದಲ್ಲಿ ಮುಂದುವರೆದಿದ್ದಾರೆ.

ದಕ್ಷಿಣ ಆಫ್ರಿಕಾದ ಬ್ಯಾಟರ್ ತಾಜ್ಮಿನ್ ಬ್ರಿಟ್ಸ್ ಪಾಕಿಸ್ತಾನ ವಿರುದ್ಧ ಸತತ ಎರಡು ಅಜೇಯ ಶತಕಗಳನ್ನು ಗಳಿಸುವ ಮೂಲಕ ಮಹಿಳಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ 15 ಸ್ಥಾನಗಳನ್ನು ಜಿಗಿದು ಈಗ ಆರನೇ ಸ್ಥಾನಕ್ಕೆ ತಲುಪಿದ್ದಾರೆ. 669 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿರುವ ಅವರು 2025 ರಲ್ಲಿ ಇಲ್ಲಿಯವರೆಗೆ ಏಕದಿನ ಪಂದ್ಯಗಳಲ್ಲಿ 91.85 ಸರಾಸರಿಯಲ್ಲಿ 643 ರನ್ ಗಳಿಸಿದ್ದಾರೆ.

ಪಾಕಿಸ್ತಾನದ ಸಿದ್ರಾ ಅಮೀನ್ 10 ಸ್ಥಾನಗಳ ಏರಿಕೆ ಕಂಡು 13ನೇ ಸ್ಥಾನಕ್ಕೆ ತಲುಪಿದ್ದಾರೆ. ಅಮೀನ್ 636 ರೇಟಿಂಗ್ ಪಾಯಿಂಟ್‌ಗಳೊಂದಿಗೆ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಅಗ್ರ 10 ಸ್ಥಾನಗಳಿಂದ ಕೇವಲ 19 ಅಂಕಗಳ ಹಿಂದಿದ್ದಾರೆ. ಆಸ್ಟ್ರೇಲಿಯಾದ ಬೆತ್ ಮೂನಿ ಕೂಡ ಎರಡು ಸ್ಥಾನಗಳ ಏರಿಕೆ ಕಂಡು ಮೂರನೇ ಸ್ಥಾನಕ್ಕೆ ತಲುಪಿದ್ದಾರೆ.

ಉಳಿದಂತ ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಡ್ ಮತ್ತು ಎಲಿಸ್ ಪೆರ್ರಿ ತಲಾ ಒಂದು ಸ್ಥಾನ ಕುಸಿದಿದ್ದಾರೆ. ಲಾರಾ ವೋಲ್ವಾರ್ಡ್ ನಾಲ್ಕನೇ ಸ್ಥಾನದಲ್ಲಿದ್ದರೆ, ಪೆರ್ರಿ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ಇಂಗ್ಲೆಂಡ್‌ನ ನ್ಯಾಟ್ ಸಿವರ್-ಬ್ರಂಟ್ ಎರಡನೇ ಸ್ಥಾನದಲ್ಲಿದ್ದಾರೆ.

ಆಲ್‌ರೌಂಡರ್ ಶ್ರೇಯಾಂಕದಲ್ಲೂ ಬದಲಾವಣೆ ಕಂಡುಬಂದಿದೆ. ದಕ್ಷಿಣ ಆಫ್ರಿಕಾದ ಮರಿಜಾನ್ನೆ ಕಪ್ಪ್ ಹೇಲಿ ಮ್ಯಾಥ್ಯೂಸ್‌ರನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಬೌಲರ್‌ಗಳ ಶ್ರೇಯಾಂಕದಲ್ಲಿ, ಭಾರತದ ದೀಪ್ತಿ ಶರ್ಮಾ ಎರಡು ಸ್ಥಾನಗಳನ್ನು ಏರಿ ಐದನೇ ಸ್ಥಾನದಲಿದ್ದಾರೆ. ದಕ್ಷಿಣ ಆಫ್ರಿಕಾದ ಅಯಬೊಂಗಾ ಖಾಕಾ ಕೂಡ ಮೂರು ಸ್ಥಾನಗಳನ್ನು ಜಿಗಿದು 15 ನೇ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತದ ಯುವ ಬೌಲರ್ ಕ್ರಾಂತಿ ಗೌಡ್ ಕೂಡ 23 ಸ್ಥಾನಗಳ ಗಮನಾರ್ಹ ಜಿಗಿತವನ್ನು ಸಾಧಿಸಿ 39 ನೇ ಸ್ಥಾನವನ್ನು ತಲುಪಿದ್ದಾರೆ. ಏತನ್ಮಧ್ಯೆ, ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ 795 ರೇಟಿಂಗ್ ಅಂಕಗಳೊಂದಿಗೆ ಏಕದಿನ ಬೌಲರ್‌ನಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ.
