‘ಅತಿದೊಡ್ಡ ಗೆಲುವು’; ಆಸ್ಟ್ರೇಲಿಯಾವನ್ನು ಮಣಿಸಿದ ಬಳಿಕ ಬಾಂಗ್ಲಾ ನಾಯಕ ಹೇಳಿದ್ದಿದು

Bangladesh Stuns Australia: ಬಾಂಗ್ಲಾದೇಶ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಗೆಲುವು ಸಾಧಿಸಿದೆ. ನಾಯಕ ಶಾಂಟೊ ಸಂತಸ ವ್ಯಕ್ತಪಡಿಸಿದ್ದು, ಇದು ಬಾಂಗ್ಲಾದೇಶದ ಅತಿದೊಡ್ಡ ಜಯ ಎಂದಿದ್ದಾರೆ. ವೇಗದ ಬೌಲರ್‌ಗಳ ಅಭಿವೃದ್ಧಿ ಮತ್ತು ತಂಡದ ಒಟ್ಟಾರೆ ಪ್ರಯತ್ನದ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ. ತಂಜಿದ್ ಹಸನ್ ತಮೀಮ್ ಅವರ ಶತಕವನ್ನು ಶ್ಲಾಘಿಸಿದ್ದಾರೆ. ಮುಂಬರುವ ಎರಡನೇ ಟೆಸ್ಟ್ ಸರಣಿ ಗೆಲ್ಲಲು ಸತತ ಉತ್ತಮ ಪ್ರದರ್ಶನದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಭವಿಷ್ಯದಲ್ಲಿ ವಿಶೇಷವಾದುದನ್ನು ಸಾಧಿಸುವ ಗುರಿ ಹೊಂದಿದ್ದಾರೆ.

‘ಅತಿದೊಡ್ಡ ಗೆಲುವು; ಆಸ್ಟ್ರೇಲಿಯಾವನ್ನು ಮಣಿಸಿದ ಬಳಿಕ ಬಾಂಗ್ಲಾ ನಾಯಕ ಹೇಳಿದ್ದಿದು
Najmul Hossain Shanto

Updated on: Aug 16, 2026 | 7:52 PM

ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಬಾಂಗ್ಲಾದೇಶ (Australia vs Bangladesh) ಇತಿಹಾಸ ನಿರ್ಮಿಸಿದೆ. ಡಾರ್ವಿನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ, ಆಸ್ಟ್ರೇಲಿಯಾವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿತು. ಬಾಂಗ್ಲಾದೇಶದ ಈ ಟೆಸ್ಟ್ ಗೆಲುವು ಐತಿಹಾಸಿಕವಾಗಿದೆ. ಏಕೆಂದರೆ ಆಸ್ಟ್ರೇಲಿಯಾವನ್ನು ಅವರ ತವರು ನೆಲದಲ್ಲಿ ಮೊದಲ ಬಾರಿಗೆ ಸೋಲಿಸಿದ ಸಾಧನೆ ಮಾಡಿದೆ. ಗಮನಾರ್ಹ ವಿಷಯವೆಂದರೆ ಬಾಂಗ್ಲಾದೇಶ, ಆಸ್ಟ್ರೇಲಿಯಾ ತಂಡವನ್ನು ಆಸ್ಟ್ರೇಲಿಯಾದಲ್ಲಿ ಸೋಲಿಸಲು ಕೇವಲ ನಾಲ್ಕು ದಿನಗಳನ್ನು ತೆಗೆದುಕೊಂಡಿತು. ಇದರರ್ಥ ಐದು ದಿನಗಳ ಟೆಸ್ಟ್ ಪಂದ್ಯವು ನಾಲ್ಕನೇ ದಿನದಂದು ಕೊನೆಗೊಂಡಿತು. ಗೆಲುವಿನ ಬಳಿಕ ಮಾತನಾಡಿದ ಬಾಂಗ್ಲಾದೇಶ ನಾಯಕ ನಜ್ಮುಲ್ ಹೊಸೈನ್ ಶಾಂಟೊ (Najmul Hossain Shanto) ಈ ಗೆಲುವನ್ನು ಯಾವುದೇ ಸ್ವರೂಪದಲ್ಲಿ ಬಾಂಗ್ಲಾದೇಶದ ಅತಿದೊಡ್ಡ ಗೆಲುವು ಎಂದು ಬಣ್ಣಿಸಿದ್ದಾರೆ.

ನಾವು ತುಂಬಾ ಶ್ರಮಿಸಿದ್ದೇವೆ

ಗೆಲುವಿನ ನಂತರ ಪ್ರಸಾರಕರೊಂದಿಗೆ ಮಾತನಾಡಿದ ನಾಯಕ ಶಾಂಟೊ, ‘ನನಗೆ ತುಂಬಾ ಸಂತೋಷವಾಗಿದೆ, ನನ್ನ ಬಗ್ಗೆ ಮತ್ತು ಆಟಗಾರರ ಬಗ್ಗೆ ನನಗೆ ಹೆಮ್ಮೆ ಇದೆ. ನಾವು ತುಂಬಾ ಶ್ರಮಿಸಿದ್ದೇವೆ. ಯಾವುದೇ ಸ್ವರೂಪದಲ್ಲಿ ಬಾಂಗ್ಲಾದೇಶಕ್ಕೆ ಇದುವರೆಗಿನ ಅತಿದೊಡ್ಡ ಗೆಲುವು ಇದಾಗಿದೆ. ಭವಿಷ್ಯದಲ್ಲಿ ನಾವು ಏನಾದರೂ ವಿಶೇಷವಾದದ್ದನ್ನು ಮಾಡಲು ಬಯಸುತ್ತೇವೆ ಎಂದಿದ್ದಾರೆ.

ಟೆಸ್ಟ್ ಸ್ವರೂಪಕ್ಕೆ ಪ್ರಾಮುಖ್ಯತೆ

ಇನ್ನು ವೇಗದ ಬೌಲರ್‌ಗಳನ್ನು ಸಜ್ಜುಗೊಳಿಸುವ ಮತ್ತು ಸ್ಪಿನ್ ಅನ್ನು ಅವಲಂಬಿಸದಿರುವ ಬಗ್ಗೆ ಮಾತನಾಡಿದ ಶಾಂಟೊ, ‘ಟೆಸ್ಟ್ ಸ್ವರೂಪದಲ್ಲಿ ಬಾಂಗ್ಲಾದೇಶಕ್ಕೆ ಇದು ದೊಡ್ಡ ಬದಲಾವಣೆಯಾಗಿದೆ. ಐದು ವರ್ಷಗಳ ಹಿಂದೆ, ವೇಗದ ಬೌಲರ್‌ಗಳು ಟೆಸ್ಟ್ ಆಡಲು ಬಯಸುತ್ತಿರಲಿಲ್ಲ. ಆದಾಗ್ಯೂ, ಈಗ ನಾವು ಬಹಳಷ್ಟು ಟೆಸ್ಟ್ ಕ್ರಿಕೆಟ್ ಆಡುತ್ತಿದ್ದೇವೆ ಮತ್ತು ಅವರು ಟೆಸ್ಟ್ ಸ್ವರೂಪಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮುಷ್ಫಿಕರ್ ಮತ್ತು ಮೊಮಿನುಲ್‌ರಂತಹ ಹಿರಿಯ ಆಟಗಾರರು ಬೌಲರ್​ಗಳು ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಲು ಪ್ರೋತ್ಸಾಹಿಸಿದ್ದಾರೆ ಎಂದಿದ್ದಾರೆ.

ಇದರ ಜತೆಗೆ ಸ್ಮರಣೀಯ ಶತಕ ಬಾರಿಸಿದ ತಂಜಿದ್ ಹಸನ್ ತಮೀಮ್ ಅವರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಂಟೊ, ‘ತಂಜಿದ್ ಹಸನ್ ತಮೀಮ್ ಸೀಮಿತ ಓವರ್​ಗಳ ಕ್ರಿಕೆಟ್ ಅನ್ನು ಆಕ್ರಮಣಕಾರಿಯಾಗಿ ಆಡುತ್ತಾರೆ. ಆದರೆ ಈ ಟೆಸ್ಟ್‌ನಲ್ಲಿ, ಅವರು ಶಾಂತವಾಗಿದ್ದರು ಮತ್ತು ಚೆಂಡಿನ ಅರ್ಹತೆಗೆ ಅನುಗುಣವಾಗಿ ತಮ್ಮ ಹೊಡೆತಗಳನ್ನು ಆಡಿದರು. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ, ಅವರು ಪರಿಣಾಮಕಾರಿಯಾಗಿರಬೇಕೆಂದು ನಾವು ಬಯಸಿದ್ದೇವು. ಅವರು ಅದನ್ನು ಮಾಡಿದರು” ಎಂದಿದ್ದಾರೆ.

IND vs SL: ಟೆಸ್ಟ್‌ ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿ ಟೀಂ ಇಂಡಿಯಾ

ಸರಣಿ ಗೆಲ್ಲುವ ಗುರಿ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲಲು ಬಾಂಗ್ಲಾದೇಶಕ್ಕೆ ಈಗ ಒಂದು ಸುವರ್ಣಾವಕಾಶ ಸಿಕ್ಕಿದೆ. ಸರಣಿಯ ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 22 ರಂದು ನಡೆಯಲಿದೆ. ಬಾಂಗ್ಲಾ ಟೆಸ್ಟ್ ಸರಣಿಯನ್ನು ಗೆಲ್ಲಬೇಕೆಂದರೆ ಮೊದಲ ಟೆಸ್ಟ್​ನಂತೆ ಎಲ್ಲಾ ರಂಗಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಈ ಬಗ್ಗೆ ಮಾತನಾಡಿರುವ ಶಾಂಟೊ, ‘ಎರಡನೇ ಟೆಸ್ಟ್ ಗೆಲ್ಲಲು, ತಂಡವು ಸತತ ಐದು ದಿನಗಳ ಕಾಲ ಉತ್ತಮವಾಗಿ ಆಡಬೇಕಾಗುತ್ತದೆ. ಅಲ್ಲದೆ ಪ್ರತಿ ಸೆಷನ್​ನಲ್ಲೂ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:50 pm, Sun, 16 August 26

Loading...
Unable to load recommendations.
Follow Us