
ಬಿಸಿಸಿಐ (BCCI) ವಿರುದ್ಧ ತನ್ನ ಪಟ್ಟು ಸಡಿಲಿಸದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ತನ್ನ ತಂಡದ ಹೆಸರನ್ನು ಟಿ20 ವಿಶ್ವಕಪ್‌ನಿಂದ (T20 World Cup 2026) ಹಿಂಪಡೆದಿದೆ. ಇದರರ್ಥ ಬಾಂಗ್ಲಾದೇಶ ತಂಡವು ಮುಂಬರುವ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ವಾಸ್ತವವಾಗಿ ಐಸಿಸಿ, ಬಾಂಗ್ಲಾದೇಶಕ್ಕೆ ತನ್ನ ನಿರ್ಧಾರ ತಿಳಿಸಲು 24 ಗಂಟೆಗಳ ಕಾಲಾವಕಾಶ ನೀಡಿತ್ತು. ಆ ಪ್ರಕಾರ ಗುರುವಾರ ಢಾಕಾದಲ್ಲಿ ಬಿಸಿಬಿ ಮತ್ತು ಬಾಂಗ್ಲಾದೇಶ ಸರ್ಕಾರದ ನಡುವೆ ಸಭೆ ನಡೆದಿದ್ದು, ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಟಿ20 ವಿಶ್ವಕಪ್ ಆಡಲು ಭಾರತಕ್ಕೆ ಕಳುಹಿಸದಿರಲು ನಿರ್ಧರಿಸಲಾಗಿದೆ. ಇದೀಗ ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿರುವ ಕಾರಣ ಅದರ ಸ್ಥಾನದಲ್ಲಿ ಸ್ಕಾಟ್ಲೆಂಡ್ ತಂಡಕ್ಕೆ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಗಲಿದೆ.
ಇಂದು ನಡೆದ ಸಭೆಯಲ್ಲಿ ಬಿಸಿಬಿ ಅಧ್ಯಕ್ಷ ಅಮೀನುಲ್, ಸಿಇಒ ನಿಜಾಮುದ್ದೀನ್ ಮತ್ತು ಕೆಲವು ಬಾಂಗ್ಲಾದೇಶ ಆಟಗಾರರು ಭಾಗವಹಿಸಿದ್ದರು. ವರದಿಯ ಪ್ರಕಾರ, ಬಾಂಗ್ಲಾ ತಂಡದ ಆಟಗಾರರಿಗೆ ವಿಶ್ವಕಪ್‌ನಲ್ಲಿ ಭಾಗವಹಿಸುವ ಇರಾದೆಯಿದೆ. ಆದರೆ ಬಿಸಿಬಿ ಮತ್ತು ಬಾಂಗ್ಲಾ ಸರ್ಕಾರಕ್ಕೆ ಮಾತ್ರ ತನ್ನ ತಂಡವನ್ನು ಭಾರತಕ್ಕೆ ಕಳುಹಿಸುವ ಮನಸ್ಸಿಲ್ಲ.
ಹೀಗಾಗಿ ಸಭೆಯ ಬಳಿಕ ಮಾತನಾಡಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ, ‘ಭಾರತದ ಹೊರಗೆ ಪಂದ್ಯಗಳನ್ನು ನಡೆಸಬೇಕೆಂಬ ನಮ್ಮ ಮನವಿಯನ್ನು ಐಸಿಸಿ ತಿರಸ್ಕರಿಸಿದೆ. ಹೀಗಾಗಿ ತಮ್ಮ ತಂಡವು ಕೂಡ ಭಾರತದಲ್ಲಿ ಒಂದೇ ಒಂದು ಪಂದ್ಯವನ್ನು ಆಡುವುದಕ್ಕೆ ಸಿದ್ಧವಿಲ್ಲ. ಇದು ಐಸಿಸಿಯ ವೈಫಲ್ಯ, ಐಸಿಸಿ ನಮ್ಮ ತಂಡದ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸಲಿಲ್ಲ. ನಮಗೆ ವಿಶ್ವ ಕ್ರಿಕೆಟ್ ಬಗ್ಗೆ ತಿಳಿದಿಲ್ಲ, ಆದರೆ ಅದರ ಜನಪ್ರಿಯತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಐಸಿಸಿ 200 ಮಿಲಿಯನ್ ಜನರನ್ನು ನಿರಾಶೆಗೊಳಿಸಿದೆ’.
ಕ್ರಿಕೆಟ್ ಈಗ ಒಲಿಂಪಿಕ್ಸ್‌ಗೆ ಹೋಗುತ್ತಿದೆ, ಆದರೆ ನಮ್ಮಂತಹ ದೇಶವು ಅಲ್ಲಿಗೆ ಹೋಗದಿದ್ದರೆ, ಅದು ಐಸಿಸಿಯ ವೈಫಲ್ಯ. ಐಸಿಸಿ ನಮಗೆ 24 ಗಂಟೆಗಳ ಅಂತಿಮ ಗಡುವನ್ನು ನೀಡಿತ್ತು. ಆದರೆ ಒಂದು ಜಾಗತಿಕ ಸಂಸ್ಥೆ ಎಂದಿಗೂ ಈ ರೀತಿ ಮಾಡುವುದಿಲ್ಲ ಆದಾಗ್ಯೂ ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಐಸಿಸಿ ಸಭೆಯಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಐಸಿಸಿ ಸಭೆಯಲ್ಲಿ ಕೇವಲ ಬಿಸಿಸಿಐನ ಅಭಿಪ್ರಾಯಗಳನ್ನು ಮಾತ್ರ ಪರಿಗಣಿಸಲಾಗಿದೆ’.
ಭಾರತದ ಪರ ನಿಂತ 14 ಮಂಡಳಿಗಳು; ಬಾಂಗ್ಲಾದೇಶಕ್ಕೆ 24 ಗಂಟೆ ಗಡುವು ನೀಡಿದ ಐಸಿಸಿ
‘ಭಾರತದಲ್ಲಿ ನಮ್ಮ ತಂಡಕ್ಕೆ ಅಪಾಯವಿದೆ. ನಾವು ವಿಶ್ವಕಪ್‌ನಲ್ಲಿ ಆಡಲು ಬಯಸುತ್ತೇವೆ, ಆದರೆ ನಮ್ಮ ಆಟಗಾರರಿಗೆ ಭದ್ರತೆಯು ಸಮಸ್ಯೆಯಾಗಿಯೇ ಉಳಿದಿದೆ. ಭದ್ರತೆಯ ವಿಷಯದಲ್ಲಿ ಐಸಿಸಿ ಏನು ಬೇಕಾದರೂ ಹೇಳಬಹುದು, ಆದರೆ ನಮ್ಮ ಆಟಗಾರರಲ್ಲಿ ಒಬ್ಬರನ್ನು ಭದ್ರತಾ ದೃಷ್ಟಿಯಿಂದ ಐಪಿಎಲ್ ಪಂದ್ಯಾವಳಿಯಿಂದ ಹೊರಹಾಕಲಾಗಿದೆ. ಹೀಗಿರುವಾಗ ನಮ್ಮ ಇಡೀ ತಂಡಕ್ಕೆ ಹೇಗೆ ಭದ್ರತೆಯನ್ನು ಒದಗಿಸುತ್ತಾರೆ? ನಾವು ನಮ್ಮ ಆಟಗಾರರನ್ನು ಅಪಾಯಕ್ಕೆ ಸಿಲುಕಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Thu, 22 January 26