T20 World Cup 2026: ಟಿ20 ವಿಶ್ವಕಪ್​ಗೆ ಕೊನೆಗೂ ಅರ್ಹತೆ ಪಡೆದ ಬಾಂಗ್ಲಾದೇಶ

T20 World Cup 2026: ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡವು 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿದೆ. ಥೈಲ್ಯಾಂಡ್ ವಿರುದ್ಧದ ಸೂಪರ್-ಸಿಕ್ಸ್ ಪಂದ್ಯದಲ್ಲಿ 39 ರನ್‌ಗಳ ಜಯ ಸಾಧಿಸುವ ಮೂಲಕ, ಬಾಂಗ್ಲಾದೇಶ ಒಂದೂ ಪಂದ್ಯ ಸೋಲದೆ ವಿಶ್ವಕಪ್‌ಗೆ ಸ್ಥಾನ ಭದ್ರಪಡಿಸಿದೆ. ಮುಲ್ಪಾನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಶೋಭನಾ ಮೊಸ್ತಾರಿ ಮತ್ತು ಜುವೈರಿಯಾ ಫರ್ಡೌಸ್ ಅವರ ಅದ್ಭುತ ಬ್ಯಾಟಿಂಗ್ ಮತ್ತು ಮರೂಫಾ ಅಖ್ತರ್ ಅವರ ಉತ್ತಮ ಬೌಲಿಂಗ್ ತಂಡದ ಗೆಲುವಿಗೆ ಕಾರಣವಾಯಿತು.

T20 World Cup 2026: ಟಿ20 ವಿಶ್ವಕಪ್​ಗೆ ಕೊನೆಗೂ ಅರ್ಹತೆ ಪಡೆದ ಬಾಂಗ್ಲಾದೇಶ
Bangladesh Team

Updated on: Jan 28, 2026 | 5:44 PM

ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡವು (Bangladesh Women’s Cricket) 2026 ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ (T20 World Cup 2026) ಅರ್ಹತೆ ಪಡೆದಿದೆ. ನೇಪಾಳದ ಮುಲ್ಪಾನಿ ​​ಕ್ರಿಕೆಟ್ ಮೈದಾನದಲ್ಲಿ ನಡೆದ ಸೂಪರ್-ಸಿಕ್ಸ್ ಹಂತದ ಪಂದ್ಯದಲ್ಲಿ ಥೈಲ್ಯಾಂಡ್ ಮಹಿಳಾ ತಂಡವನ್ನು 39 ರನ್‌ಗಳಿಂದ ಸೋಲಿಸುವ ಮೂಲಕ ಬಾಂಗ್ಲಾದೇಶ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಬಾಂಗ್ಲಾದೇಶ ಮಹಿಳಾ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಒಂದೇ ಒಂದು ಪಂದ್ಯವನ್ನು ಸೋಲದೆ 2026 ರ ಟಿ20 ವಿಶ್ವಕಪ್‌ಗೆ ಸ್ಥಾನ ಪಡೆದುಕೊಂಡಿದೆ. ಗುಂಪು ಹಂತದಲ್ಲಿ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದಿದ್ದ ಬಾಂಗ್ಲಾದೇಶ, ಆ ನಂತರ ಸೂಪರ್-ಸಿಕ್ಸ್ ಸುತ್ತಿನಲ್ಲಿ ಸತತ ಮೂರು ಗೆಲುವುಗಳನ್ನು ಸಾಧಿಸಿ ಟಿ20 ವಿಶ್ವಕಪ್​ಗೆ ಟಿಕೆಟ್ ಪಡೆದುಕೊಂಡಿದೆ.

ಬಾಂಗ್ಲಾದೇಶಕ್ಕೆ ಸುಲಭ ಗೆಲುವು

ಈ ಪಂದ್ಯದಲ್ಲಿ, ಥೈಲ್ಯಾಂಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 165 ರನ್ ಕಲೆಹಾಕಿತು. ತಂಡದ ಸೋಭಾನಾ ಮೊಸ್ತಾರಿ ಅದ್ಭುತ ಇನ್ನಿಂಗ್ಸ್ ಆಡಿ 42 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 59 ರನ್‌ ಗಳಿಸಿದರು. ಜುವೈರಿಯಾ ಫರ್ಡೌಸ್ ಕೂಡ 45 ಎಸೆತಗಳಲ್ಲಿ 56 ರನ್ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇನ್ನಿಂಗ್ಸ್ ಅಂತ್ಯದಲ್ಲಿ, ರಿತು ಮೋನಿ 6 ಎಸೆತಗಳಲ್ಲಿ 15 ರನ್ ಗಳಿಸಿ ತಂಡವನ್ನು ಈ ಸ್ಕೋರ್​ಗೆ ತಲುಪಿಸಿದರು. ಮತ್ತೊಂದೆಡೆ, ತಿಪಾಚಾ ಪುಟ್ಟವಾಂಗ್ ಥೈಲ್ಯಾಂಡ್ ಪರ ಅದ್ಭುತ ಬೌಲಿಂಗ್ ಮಾಡಿ, 4 ಓವರ್‌ಗಳಲ್ಲಿ 22 ರನ್‌ಗಳಿಗೆ 3 ವಿಕೆಟ್ ಪಡೆದರು. ಉಳಿದಂತೆ ಒನ್ನಿಚಾ ಕಮ್ಚೊಂಫು 2 ವಿಕೆಟ್ ಪಡೆದರೆ, ಫನ್ನಿತಾ ಮಾಯಾ ಕೂಡ 1 ವಿಕೆಟ್ ಪಡೆದರು.

ತತ್ತರಿಸಿದ ಥೈಲ್ಯಾಂಡ್

166 ರನ್‌ಗಳ ಗುರಿ ಬೆನ್ನಟ್ಟಿದ ಥೈಲ್ಯಾಂಡ್​ಗೆ ಬಾಂಗ್ಲಾ ಬೌಲರ್​ಗಳು ಆಘಾತ ನೀಡಿದರು. ಮಾರೂಫಾ ಅಖ್ತರ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದರು. ಆದಾಗ್ಯೂ, ನಥಕನ್ ಚಾಂಥಮ್ 46, ನನ್ನಪತ್ ಕೊಂಚರೋಯೆಂಕೈ 29 ಮತ್ತು ನರುಯೆಮೋಲ್ ಚೈವೈ 30 ರನ್ ಬಾರಿಸಿ ಗೆಲುವಿಗಾಗಿ ಹೋರಾಟ ನೀಡಿದರು. ಆದಾಗ್ಯೂ, ಉಳಿದ ಬ್ಯಾಟರ್​ಗಳಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರದ ಕಾರಣ ಥೈಲ್ಯಾಂಡ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 126 ರನ್ ಗಳಿಸಲಷ್ಟೇ ಶಕ್ತವಾಯಿತು.

U19 World Cup 2026: ಭಾರತದ ಕೈಯಲ್ಲಿದೆ ಪಾಕಿಸ್ತಾನದ ಸೆಮಿಫೈನಲ್ ಭವಿಷ್ಯ

ಬಾಂಗ್ಲಾದೇಶ ಪರ ಮರುಫಾ ಅಖ್ತರ್ 3 ವಿಕೆಟ್‌ ಪಡೆದರೆ, ರಿತು ಮೋನಿ ಮತ್ತು ಶೋರ್ನಾ ಅಖ್ತರ್ ತಲಾ 2 ವಿಕೆಟ್ ಪಡೆದರು. ಫಹಿಮಾ ಖಾತುನ್ ಕೂಡ 1 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿಗೆ ಗಮನಾರ್ಹ ಕೊಡುಗೆ ನೀಡಿದರು. ಬಾಂಗ್ಲಾದೇಶಕ್ಕೆ ಸೂಪರ್ 6 ಸುತ್ತಿನಲ್ಲಿ ಇನ್ನೂ 2 ಪಂದ್ಯಗಳು ಉಳಿದಿವೆಯಾದರೂ ಈಗಾಗಲೇ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ