- Kannada News Photo gallery Cricket photos Suryakumar Yadav Soars to 7th in ICC T20 Rankings After Sensational NZ Series Performance
ICC Rankings: ಐವರನ್ನು ಹಿಂದಿಕ್ಕಿ ಭರ್ಜರಿ ಮುಂಬಡ್ತಿ ಪಡೆದ ಸೂರ್ಯಕುಮಾರ್
ICC T20 Ranking: ನ್ಯೂಜಿಲೆಂಡ್ ವಿರುದ್ಧದ ಭರ್ಜರಿ ಪ್ರದರ್ಶನದ ನಂತರ ಸೂರ್ಯಕುಮಾರ್ ಯಾದವ್ ಐಸಿಸಿ ಟಿ20 ಶ್ರೇಯಾಂಕದಲ್ಲಿ 7ನೇ ಸ್ಥಾನಕ್ಕೆ ಏರಿ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಕಳೆದ ವಾರ ಟಾಪ್ 10 ರಿಂದ ಹೊರಬಿದ್ದಿದ್ದ ಸೂರ್ಯ, ಐವರು ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಿ ಮತ್ತೆ ಟಾಪ್ 10 ರೊಳಗೆ ಸ್ಥಾನ ಪಡೆದಿದ್ದಾರೆ.
Updated on:Jan 28, 2026 | 4:33 PM

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ಗೆ ಐಸಿಸಿಯಿಂದ ಭರ್ಜರಿ ಬಹುಮಾನ ಸಿಕ್ಕಿದೆ. ಐಸಿಸಿ ಬಿಡುಗಡೆ ಮಾಡಿರುವ ನೂತನ ಟಿ20 ಶ್ರೇಯಾಂಕದಲ್ಲಿ ಐವರು ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಿ ಏಳನೇ ಸ್ಥಾನಕ್ಕೇರಿದ್ದಾರೆ.

ಕಳೆದ ಒಂದು ವರ್ಷದಿಂದ ಒಂದೇ ಒಂದು ಅರ್ಧಶತಕವನ್ನು ಬಾರಿಸಲಾಗದೆ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಸೂರ್ಯ, ಇದರ ಪರಿಣಾಮವಾಗಿ ಕಳೆದ ವಾರ ಟಾಪ್ 10 ರಿಂದ ಹೊರಬಿದ್ದಿದ್ದರು. ಆದರೆ ಈಗ ಮತ್ತೆ ಟಾಪ್ 10 ರೊಳಗೆ ಪ್ರವೇಶಿಸಿದ್ದು, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಟಿಮ್ ಸೀಫರ್ಟ್, ಟಿಮ್ ಡೇವಿಡ್ ಮತ್ತು ಡೆವಾಲ್ಡ್ ಬ್ರೆವಿಸ್ ಅವರನ್ನು ಹಿಂದಿಕ್ಕಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಆಡಿರುವ ಮೂರು ಪಂದ್ಯಗಳಲ್ಲಿ 171 ರನ್ ಕಲೆಹಾಕಿ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ 2 ಅರ್ಧಶತಕಗಳನ್ನು ಬಾರಿಸಿರುವ ಸೂರ್ಯ 200 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ.

ಈ ಟಿ20 ಸರಣಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಸೂರ್ಯ ಎಂಟು ಸಿಕ್ಸರ್‌ಗಳು ಮತ್ತು 19 ಬೌಂಡರಿಗಳನ್ನು ಬಾರಿಸಿದ್ದಾರೆ. ಟಿ20 ಸರಣಿಯಲ್ಲಿ ಇನ್ನು ಎರಡು ಪಂದ್ಯಗಳು ಬಾಕಿ ಇದ್ದು ಈ ಪಂದ್ಯಗಳಲ್ಲೂ ಸೂರ್ಯಕುಮಾರ್ ಅಬ್ಬರಿಸಿದರೆ, ಮುಂದಿನ ಐಸಿಸಿ ಶ್ರೇಯಾಂಕದಲ್ಲಿ ಮತ್ತೆ ಮುಂಬಡ್ತಿ ಪಡೆಯಲಿದ್ದಾರೆ.

ಸೂರ್ಯಕುಮಾರ್ ಮಾತ್ರವಲ್ಲದೆ ಟಿ20 ಶ್ರೇಯಾಂಕದಲ್ಲಿ ಭಾರತೀಯ ಆಟಗಾರರ ಪ್ರಾಬಲ್ಯವೇ ಹೆಚ್ಚಿದೆ. ಅಭಿಷೇಕ್ ಶರ್ಮಾ ಟಿ20 ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ತಿಲಕ್ ವರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ಸೂರ್ಯಕುಮಾರ್ ಐದು ಸ್ಥಾನ ಮೇಲೇರಿದ್ದಾರೆ. ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ನಾಲ್ಕು ಬೌಲರ್‌ಗಳನ್ನು ಹಿಂದಿಕ್ಕಿ 13 ನೇ ಸ್ಥಾನಕ್ಕೆ ತಲುಪಿದ್ದು, ವರುಣ್ ಚಕ್ರವರ್ತಿ ಮೊದಲ ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ ಒಂದು ಸ್ಥಾನ ಬಡ್ತಿ ಪಡೆದು ಮೂರನೇ ಸ್ಥಾನಕ್ಕೆ ತಲುಪಿದ್ದಾರೆ.
Published On - 4:32 pm, Wed, 28 January 26
