6,6,6,6,6,6,6,6: ಸಿಕ್ಸರ್ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್
ಸ್ಪೇನ್ ಟಿ10 ಪಂದ್ಯದಲ್ಲಿ 16 ಎಸೆತಗಳನ್ನು ಎದುರಿಸಿದ ಅಲಿ ಹಸನ್ 8 ಸಿಕ್ಸ್ ಹಾಗೂ 1 ಫೋರ್ನೊಂದಿಗೆ ಅಜೇಯ 55 ರನ್ ಬಾರಿಸಿದ್ದಾರೆ. ಈ ಎಂಟು ಸಿಕ್ಸ್ಗಳು ಮೂಡಿಬಂದಿರುವುದು ಸತತ ಎಂಟು ಎಸೆತಗಳಲ್ಲಿ ಎಂಬುದು ವಿಶೇಷ.
ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಓವರ್ನಲ್ಲಿ 14 ಆಟಗಾರರು 6 ಸಿಕ್ಸ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಮೊದಲಿಗರು ಸರ್ ಗ್ಯಾರಿ ಸೋಬರ್ಸ್. ಹಾಗೆಯೇ ಸಾಧನೆ ಮಾಡಿದ ಕೊನೆಯ ಬ್ಯಾಟರ್ ದೆಹಲಿಯ ಪ್ರಿಯಾಂಶ್ ಆರ್ಯ. ಈ ಸಾಧನೆಗಳ ನಡುವೆ ಟಿ10 ಲೀಗ್ನಲ್ಲಿ ಬ್ಯಾಟರ್ ಒಬ್ಬರು 8 ಎಸೆತಗಳಲ್ಲಿ 8 ಸಿಕ್ಸ್ ಸಿಡಿಸಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಒಂದೇ ಓವರ್ನಲ್ಲಿ ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುವುದು ಸಹಜ.
ಆದರೆ ಬಾರ್ಸಿಲೋನಾದ ಅಲಿ ಹಸನ್ ಈ ಸಾಧನೆ ಮಾಡಿದ್ದು 2 ಓವರ್ಗಳ ನಡುವೆ ಎಂಬುದು ವಿಶೇಷ. ಸ್ಪೇನ್ನಲ್ಲಿ ನಡೆದ ಟಿ10 ಪಂದ್ಯದಲ್ಲಿ ಬಾರ್ಸಿಲೋನಾ ಹಾಗೂ ಯುನೈಟೆಡ್ ಸಿಸಿ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಬಾರ್ಸಿಲೋನಾ ತಂಡವು 6.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 113 ರನ್ ಗಳಿಸಿತ್ತು.
ಈ ವೇಳೆ ಕಣಕ್ಕಿಳಿದ ಅಲಿ ಹಸನ್ 6.2 ಓವರ್ನಿಂದ ಸತತ ಐದು ಸಿಕ್ಸ್ಗಳನ್ನು ಸಿಡಿಸಿದರು. ಇದಾದ ಬಳಿಕ 8ನೇ ಓವರ್‌ನ 2ನೇ ಮತ್ತೆ ಸ್ಟ್ರೈಕ್ ಪಡೆದುಕೊಂಡರು. ಈ ವೇಳೆ ಬ್ಯಾಕ್ ಟು ಬ್ಯಾಕ್ ಮೂರು ಸಿಕ್ಸ್ಗಳನ್ನು ಬಾರಿಸಿದರು. ಈ ಮೂಲಕ 8 ಎಸೆತಗಳಲ್ಲಿ ಸತತ 8 ಸಿಕ್ಸ್ ಬಾರಿಸಿ ಅಬ್ಬರಿಸಿದರು.
ಅಂತಿಮವಾಗಿ 16 ಎಸೆತಗಳನ್ನು ಎದುರಿಸಿದ ಅಲಿ ಹಸನ್ 8 ಸಿಕ್ಸ್ ಹಾಗೂ 1 ಫೋರ್ನೊಂದಿಗೆ ಅಜೇಯ 55 ರನ್ ಬಾರಿಸಿ ಮಿಂಚಿದರು. ಈ ಮೂಲಕ ಬಾರ್ಸಿಲೋನಾ ತಂಡ ನಿಗದಿತ 10 ಓವರ್‌ಗಳಲ್ಲಿ 4 ವಿಕೆಟ್‌ಗೆ 194 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಯುನೈಟೆಡ್ ಸಿಸಿ ತಂಡ 9.4 ಓವರ್ ಗಳಲ್ಲಿ 95 ರನ್ ಗಳಿಗೆ ಕುಸಿದು ಹೀನಾಯ ಸೋಲನುಭವಿಸಿತು.