ಬಿಗ್ ಬ್ಯಾಷ್ ಲೀಗ್ನ 22ನೇ ಪಂದ್ಯದ ವೇಳೆ ಅವಘಡ ಸಂಭವಿಸಿದೆ. ಪರ್ತ್ನಲ್ಲಿ ನಡೆದ ಈ ಪಂದ್ಯದಲ್ಲಿ ಸಿಡ್ನಿ ಥಂಡರ್ ಮತ್ತು ಪರ್ತ್ ಸ್ಕಾಚರ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದ ಮೊದಲ ಇನಿಂಗ್ಸ್ನ 16ನೇ ಓವರ್ ವೇಳೆ ಡೇನಿಯಲ್ ಸ್ಯಾಮ್ಸ್ ಮತ್ತು ಕ್ಯಾಮರೋನ್ ಬ್ಯಾಂಕ್ರಾಫ್ಟ್ ಕ್ಯಾಚ್ ಹಿಡಿಯುವ ಯತ್ನದಲ್ಲಿ ಮುಖಾಮುಖಿಯಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಡ್ನಿ ಥಂಡರ್ ತಂಡದ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಪರ್ತ್ ಸ್ಕಾಚರ್ಸ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಹೀಗೆ ಸಾಗಿದ ಪಂದ್ಯದ 16ನೇ ಓವರ್ನಲ್ಲಿ ಲಾಕಿ ಫರ್ಗುಸನ್ ಚೆಂಡು ಕೈಗೆತ್ತಿಕೊಂಡರು.
ಈ ಓವರ್ನ ಎರಡನೇ ಎಸೆತದಲ್ಲಿ ಕೂಪರ್ ಕೊನೊಲಿ ಸ್ಕ್ವೇರ್ ಲೆಗ್ನತ್ತ ಬಾರಿಸಲು ಯತ್ನಿಸಿದರು. ಗಾಳಿಯಲ್ಲಿ ತೇಲಿದ ಚೆಂಡನ್ನು ಹಿಡಿಯಲು ಒಂದು ಕಡೆಯಿಂದ ಕ್ಯಾಮರೋನ್ ಬ್ಯಾಂಕ್ರಾಫ್ಟ್ ಬಂದರೆ, ಇನ್ನೊಂದು ಕಡೆಯಿಂದ ಡೇನಿಯರ್ ಸ್ಯಾಮ್ಸ್ ಓಡಿ ಬಂದರು. ಆದರೆ ಚೆಂಡಿನ ಮೇಲೆ ಕಣ್ಣಿಟ್ಟಿದ್ದ ಇಬ್ಬರು ಪರಸ್ಪರ ಗಮನಿಸಿರಲಿಲ್ಲ.
ಪರಿಣಾಮ ಡೇನಿಯಲ್ ಸ್ಯಾಮ್ಸ್ – ಕ್ಯಾಮರೋನ್ ಬ್ಯಾಂಕ್ರಾಫ್ಟ್ ಮುಖಾಮುಖಿಯಾಗಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಇಬ್ಬರು ಮೈದಾನದಲ್ಲಿ ಉರುಳಿ ಬಿದ್ದಿದ್ದಾರೆ. ಅದರಲ್ಲೂ ಬ್ಯಾಂಕ್ರಾಫ್ಟ್ ಅವರ ಮೂಗಿಂದ ರಕ್ತ ಚಿಮ್ಮಿದರೆ, ಡಿಕ್ಕಿಯ ರಭಸಕ್ಕೆ ಡೇನಿಯಲ್ ಸ್ಯಾಮ್ಸ್ಗೆ ಎದ್ದು ನಿಲ್ಲಲು ಸಹ ಸಾಧ್ಯವಾಗಲಿಲ್ಲ.
ತಕ್ಷಣವೇ ವೈದ್ಯಕೀಯ ಸಿಬ್ಬಂದಿಗಳು ಮೈದಾನಕ್ಕೆ ಆಗಮಿಸಿ ಡೇಮಿಯಲ್ ಸ್ಯಾಮ್ಸ್ಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಇದಾಗ್ಯೂ ಅವರು ನಡೆಯುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಸ್ಟ್ರೆಚರ್ ಮೂಲಕ ಅವರನ್ನು ಮೈದಾನದಿಂದ ಕರೆದುಕೊಂಡು ಹೋಗಲಾಯಿತು.
ಇದೀಗ ಡೇನಿಯಲ್ ಸ್ಯಾಮ್ಸ್ ಹಾಗೂ ಕ್ಯಾಮರೋನ್ ಬ್ಯಾಂಕ್ರಾಫ್ಟ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಅವಘಡದ ಕಾರಣ ಸಿಡ್ನಿ ಥಂಡರ್ ಹಾಗೂ ಪರ್ತ್ ಸ್ಕಾರ್ಚರ್ಸ್ ನಡುವಣ ಪಂದ್ಯವು 12 ನಿಮಿಷಗಳ ಕಾಲ ಸ್ಥಗಿತಗೊಂಡಿತು.
BBL 2025: Daniel Sams and Cameron Bancroft taken to hospital after horrific on-field collision#BBL2024 #SydneyThunder #PerthScorchers pic.twitter.com/O4GJGV7N3d
— Zsports (@_Zsports) January 3, 2025
ಸಿಡ್ನಿ ಥಂಡರ್ಸ್ ಆಟಗಾರರ ಅವಘಡದ ಬಳಿಕ ಮುಂದುವರೆದ ಪಂದ್ಯದಲ್ಲಿ ಪರ್ತ್ ಸ್ಕಾಚರ್ಸ್ ಪರ ಆರಂಭಿಕ ದಾಂಡಿಗ ಫಿನ್ ಅಲೆನ್ 31 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 68 ರನ್ ಬಾರಿಸಿದರು. ಇನ್ನು ಕೂಪರ್ ಕೊನೊಲಿ ಅಜೇಯ 43 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಪರ್ತ್ ಸ್ಕಾಚರ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 177 ರನ್ ಕಲೆಹಾಕಿತು.
178 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಸಿಡ್ನಿ ಥಂಡರ್ ತಂಡಕ್ಕೆ ನಾಯಕ ಡೇವಿಡ್ ವಾರ್ನರ್ (49) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಮ್ಯಾಥ್ಯೂ ಗಿಲ್ಕ್ಸ್ 43 ರನ್ ಕಲೆಹಾಕಿದರು. ಆ ಬಳಿಕ ಕಣಕ್ಕಿಳಿದ ಶೆರ್ಫೇನ್ ರುದರ್ಫೋರ್ಡ್ 19 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 39 ರನ್ ಬಾರಿಸುವ ಮೂಲಕ ಕೊನೆಯ ಎಸೆತದಲ್ಲಿ ಸಿಡ್ನಿ ಥಂಡರ್ ತಂಡಕ್ಕೆ ಜಯ ತಂದುಕೊಟ್ಟರು.
ಪರ್ತ್ ಸ್ಕಾಚರ್ಸ್ ಪ್ಲೇಯಿಂಗ್ 11: ಮ್ಯಾಥ್ಯೂ ಹರ್ಸ್ಟ್ (ವಿಕೆಟ್ ಕೀಪರ್) , ಫಿನ್ ಅಲೆನ್ , ಕೂಪರ್ ಕೊನೊಲಿ , ಆರನ್ ಹಾರ್ಡಿ , ಆಶ್ಟನ್ ಟರ್ನರ್ (ನಾಯಕ) , ನಿಕ್ ಹಾಬ್ಸನ್ , ಮ್ಯಾಥ್ಯೂ ಸ್ಪೂರ್ಸ್ , ಮ್ಯಾಥ್ಯೂ ಕೆಲ್ಲಿ , ಆಂಡ್ರ್ಯೂ ಟೈ , ಜೇಸನ್ ಬೆಹ್ರೆಂಡಾರ್ಫ್ , ಲ್ಯಾನ್ಸ್ ಮೋರಿಸ್.
ಇದನ್ನೂ ಓದಿ: ಆವೇಶ, ಆಕ್ರೋಶ… ಸ್ಯಾಮ್ ಕೊನ್ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಸಿಡ್ನಿ ಥಂಡರ್ ಪ್ಲೇಯಿಂಗ್ 11: ಡೇವಿಡ್ ವಾರ್ನರ್ (ನಾಯಕ) , ಬ್ಲೇಕ್ ನಿಕಿತಾರಸ್ , ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್) , ಮ್ಯಾಥ್ಯೂ ಗಿಲ್ಕ್ಸ್ , ಶೆರ್ಫೇನ್ ರುದರ್ಫೋರ್ಡ್ , ಕ್ರಿಸ್ ಗ್ರೀನ್ , ಟಾಮ್ ಆಂಡ್ರ್ಯೂಸ್ , ಲಾಕಿ ಫರ್ಗುಸನ್ , ವೆಸ್ ಅಗರ್ , ಕ್ಯಾಮರೋನ್ ಬ್ಯಾಂಕ್ರಾಫ್ಟ್ , ಡೇನಿಯಲ್ ಸ್ಯಾಮ್ಸ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ