ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯ (Sourav Ganguly) ಹಿರಿಯ ಸಹೋದರ ಸ್ನೇಹಶಿಶ್ ಗಂಗೂಲಿ (Snehasish Ganguly) ಅವರ ಆರೋಗ್ಯ ಹಠಾತ್ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಶುಕ್ರವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿಯಾಗಿರುವ ಸ್ನೇಹಶಿಶ್ ಈ ಹಿಂದೆ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ವರ್ಷದ ಆರಂಭದಲ್ಲಿ ಹೃದಯದ ಆಂಜಿಯೋಪ್ಲ್ಯಾಸ್ಟಿ ಸರ್ಜರಿ ಕೂಡ ಮಾಡಿಸಿದ್ದರು. ಇದೀಗ ದಿಢೀರಣೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಸೌರವ್ ಗಂಗೂಲಿ ಪತ್ನಿ ಡೋನಾ ಜೊತೆ ಇಂಗ್ಲೆಂಡ್ನಲ್ಲಿದ್ದಾರೆ. ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಕಳೆದ ವಾರ ತೆರಳಿದ್ದರು. ಇದೀಗ ಸಹೋದರನ ಅನಾರೋಗ್ಯ ನಿಮಿತ್ತ ಶೀಘ್ರದಲ್ಲೇ ಭಾರತಕ್ಕೆ ಮರಳುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಗಂಗೂಲಿಯ ಹಿರಿಯ ಸಹೋದರನಿಗೆ ಕೋಲ್ಕತ್ತಾದ ವುಡ್‌ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ.
ಗಂಗೂಲಿ ಸಹೋದರ ಕೂಡ ಮಾಜಿ ಆಟಗಾರ:
ಸ್ನೇಹಶಿಶ್ ಗಂಗೂಲಿ ಅವರು ಪ್ರಸ್ತುತ ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮುನ್ನ ಅವರು ರಣಜಿ ಕ್ರಿಕೆಟ್ನಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸಿದ್ದರು. ಬಂಗಾಳ ಪರ ರಣಜಿ ಟ್ರೋಫಿಯಲ್ಲಿ 55 ಪಂದ್ಯಗಳನ್ನು ಆಡಿರುವ ಸ್ನೇಹಶಿಶ್ 2534 ರನ್ ಗಳಿಸಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ 55 ವರ್ಷದ ಸ್ನೇಹಶಿಶ್ ಆಂಜಿಯೋಪ್ಲ್ಯಾಸ್ಟಿ ಸರ್ಜರಿ ಕೂಡ ಮಾಡಿಸಿಕೊಂಡಿದ್ದರು. ಸದ್ಯ ಇಂಗ್ಲೆಂಡ್ನಲ್ಲಿರುವ ಸಹೋದರ ಸೌರವ್ ಗಂಗೂಲಿ ಅಣ್ಣನ ಅನಾರೋಗ್ಯದ ನಿಮಿತ್ತ ಶೀಘ್ರದಲ್ಲೇ ಭಾರತಕ್ಕೆ ವಾಪಾಸಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ
ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?