Team India: ರಹಾನೆ ಸ್ಥಾನಕ್ಕೆ ಕಂಟಕ: ಈ ಮೂವರಲ್ಲಿ ಯಾರಾಗಲಿದ್ದಾರೆ ಉಪನಾಯಕ?
Ajinkya Rahane: ತಂಡದಲ್ಲಿ ಸೂರ್ಯಕುಮಾರ್ ಯಾದವ್, ಹನುಮಾ ವಿಹಾರಿ, ವೃದ್ಧಿಮಾನ್ ಸಾಹ, ಅಭಿಮನ್ಯು ಈಶ್ವರನ್, ಪೃಥ್ವಿ ಶಾ ಹಾಗೂ ಮಯಾಂಕ್ ಅಗರ್ವಾಲ್ ಅವಕಾಶವನ್ನು ಎದುರು ನೋಡುತ್ತಿದ್ದಾರೆ.
ಕ್ರಿಕೆಟ್ ಅಂಗಳದಲ್ಲಿ ಅಲಿಖಿತ ನಿಯಮವೊಂದಿದೆ. ಅದೇನೆಂದರೆ ಕಳಪೆ ಫಾರ್ಮ್ ಹೊರತಾಗಿಯೂ ನಾಯಕ ಹಾಗೂ ಉಪನಾಯಕನಿಗೆ ತಂಡದಲ್ಲಿ ಸ್ಥಾನ ನೀಡುವುದು. ಒಂದು ವೇಳೆ ಕಳಪೆ ಪ್ರದರ್ಶನ ಕಾರಣದಿಂದ ನಾಯಕನನ್ನು ಹೊರಗಿಟ್ಟರೂ ವಿವಾದ ಕೂಡ ಶುರುವಾಗುತ್ತದೆ. ಹೀಗಾಗಿಯೇ ಈ ಹಿಂದಿನಿಂದಲೂ ನಾಯಕ ಹಾಗೂ ಉಪನಾಯಕನ ಕೆಟ್ಟ ಪ್ರದರ್ಶನದ ಹೊರತಾಗಿಯೂ ತಂಡದಿಂದ ಕೈ ಬಿಡುವುದಿಲ್ಲ. ಆದರೆ ಕೆಲವೊಮ್ಮೆ ಎಷ್ಟೇ ಅವಕಾಶ ನೀಡಿದ್ರೂ ಉತ್ತಮ ಪ್ರದರ್ಶನ ಮೂಡಿ ಬರುವುದಿಲ್ಲ. ಇದರಿಂದ ಮತ್ತೊಂದು ಸರಣಿಯ ಆಯ್ಕೆವರೆಗೂ ಅವರನ್ನು ಕೈ ಬಿಡಲು ಕಾಯಬೇಕಾಗುತ್ತದೆ. ಅಂತಹದ್ದೇ ಸಂದಿಗ್ಧ ಪರಿಸ್ಥಿತಿ ಇದೀಗ ಟೀಮ್ ಇಂಡಿಯಾಗೆ (Team India) ಎದುರಾಗಿದೆ. ಹೌದು, ಟೀಮ್ ಇಂಡಿಯಾ ಉಪನಾಯಕ ಅಜಿಂಕ್ಯ ರಹಾನೆ (Ajinkya Rahane) ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್ಮನ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಪ್ರಸ್ತುತ ಅವರ ಫಾರ್ಮ್ ಗಮನಿಸಿದರೆ ಅವರನ್ನು ತಂಡದಿಂದ ಕೈ ಬಿಟ್ಟು, ಬೆಂಚ್ ಕಾಯುತ್ತಿರುವ ಆಟಗಾರರಿಗೆ ಅವಕಾಶ ಕಲ್ಪಿಸುವುದು ಅನಿವಾರ್ಯ.
ಏಕೆಂದರೆ ಅಜಿಂಕ್ಯ ರಹಾನೆ ಅವರ ಕೊನೆಯ 14 ಇನಿಂಗ್ಸ್ನಲ್ಲಿ ಮೂಡಿಬಂದಿದ್ದು ಕೇವಲ 269 ರನ್ ಮಾತ್ರ. ಅದರಲ್ಲಿ ಆಸ್ಟ್ರೇಲಿಯಾ ವಿರುದ್ದದ ಒಂದು ಶತಕ ಕೂಡ ಸೇರಿದೆ. ಇದಾದ ಬಳಿಕ ಕ್ರೀಸ್ ಕಚ್ಚಿ ನಿಲ್ಲುವಲ್ಲಿ ರಹಾನೆ ಎಡವಿದ್ದಾರೆ. ಅದು ಈಗ ಇಂಗ್ಲೆಂಡ್ನಲ್ಲೂ ಮುಂದುವರೆದಿದೆ. ಇನ್ನು ರಹಾನೆ ಅವರ ಕೊನೆಯ 10 ಟೆಸ್ಟ್ ಇನ್ನಿಂಗ್ಸ್‌ಗಳನ್ನು ಗಮನಿಸಿದರೆ ಕಾಣುವುದು ಕೇವಲ 182 ರನ್ಗಳು ಮಾತ್ರ. ಅಂದರೆ ಟೀಮ್ ಇಂಡಿಯಾ ಉಪನಾಯಕ 18.20 ರ ಸರಾಸರಿಯಲ್ಲಿ ರನ್ ಪೇರಿಸಲಷ್ಟೇ ಶಕ್ತರಾಗಿದ್ದಾರೆ. ಇದಾಗ್ಯೂ ಪ್ರತಿಬಾರಿಯೂ ರಹಾನೆಗೆ ತಂಡದಲ್ಲಿ ಸ್ಥಾನ ಸಿಗುತ್ತಿರುವುದು ಉಪನಾಯಕ ಎಂಬ ಕಾರಣಕ್ಕಾಗಿ ಎಂಬುದರಲ್ಲಿ ನೋ ಡೌಟ್.
ಇದೀಗ ಇಂಗ್ಲೆಂಡ್ ಸರಣಿಯಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳನ್ನು ಆಡಬೇಕಿದೆ. ಇದರಲ್ಲಿ ಮೊದಲ ಟೆಸ್ಟ್ ಹಾಗೂ 2ನೇ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ರಹಾನೆ ಸಂಪೂರ್ಣ ವಿಫಲರಾಗಿದ್ದಾರೆ. ಅತ್ತ ತಂಡದಲ್ಲಿ ಸೂರ್ಯಕುಮಾರ್ ಯಾದವ್, ಹನುಮಾ ವಿಹಾರಿ, ವೃದ್ಧಿಮಾನ್ ಸಾಹ, ಅಭಿಮನ್ಯು ಈಶ್ವರನ್, ಪೃಥ್ವಿ ಶಾ ಹಾಗೂ ಮಯಾಂಕ್ ಅಗರ್ವಾಲ್ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಇದಾಗ್ಯೂ ರಹಾನೆ ಅವರ ಸ್ಥಾನದಲ್ಲಿ ಟೀಮ್ ಇಂಡಿಯಾ ಪ್ರಯೋಗ ಮಾಡಲು ಮುಂದಾಗುತ್ತಿಲ್ಲ. ಇದಕ್ಕೆ ಕಾರಣ ಉಪನಾಯಕನ ಪಟ್ಟವಿರುವುದು ಎಂದರೆ ತಪ್ಪಾಗಲಾರದು. ಹೀಗಾಗಿ ಕಳಪೆ ಫಾರ್ಮ್ನಲ್ಲಿರುವ ರಹಾನೆ ಅವರನ್ನು ಉಪ ನಾಯಕನ ಸ್ಥಾನದಿಂದ ಕೆಳಗಿಸಬೇಕೆಂಬ ಕೂಗುಗಳು ಕೇಳಿ ಬರಲಾರಂಭಿಸಿದೆ.
ಒಂದು ವೇಳೆ ರಹಾನೆ ಅವರನ್ನು ಉಪನಾಯಕನ ಸ್ಥಾನದಿಂದ ಕೆಳಗಿಸಿದರೆ ಟೀಮ್ ಇಂಡಿಯಾದ ಮೂವರು ಆಟಗಾರರಲ್ಲಿ ಒಬ್ಬರಿಗೆ ವೈಸ್ ಕ್ಯಾಪ್ಟನ್ ಪಟ್ಟ ಸಿಗಲಿದೆ. ಉಪ ನಾಯಕನ ಸ್ಥಾನವನ್ನು ಎದುರು ನೋಡುತ್ತಿರುವ ಆಟಗಾರರ ಪಟ್ಟಿಯಲ್ಲಿರುವ ಟಾಪ್ 3 ಪ್ಲೇಯರ್ಸ್ ಯಾರೆಂದರೆ…
1) ರೋಹಿತ್ ಶರ್ಮಾ – ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ, ಭಾರತ ತಂಡವನ್ನು ಹಿಟ್ಮ್ಯಾನ್ ಹಲವು ಬಾರಿ ಮುನ್ನಡೆಸಿದ್ದಾರೆ ಮತ್ತು ಯಶಸ್ವಿಯೂ ಆಗಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಉಪನಾಯಕರಾಗಿದ್ದರು. ಇದಲ್ಲದೆ ಏಕದಿನ ಮತ್ತು ಟಿ 20 ಯಲ್ಲೂ ಉಪನಾಯಕನ ಜವಾಬ್ದಾರಿ ನಿರ್ಹಿಸುತ್ತಿದ್ದಾರೆ. ಹೀಗಾಗಿ ರಹಾನೆ ಅವರನ್ನು ಕೆಳಗಿಸಿದರೆ ಆ ಸ್ಥಾನ ಹಿಟ್ಮ್ಯಾನ್ ಪಾಲಾಗುವ ಸಾಧ್ಯತೆ ಹೆಚ್ಚು.
2) ಕೆಎಲ್ ರಾಹುಲ್ – ಕನ್ನಡಿಗ ಕೆಎಲ್ ರಾಹುಲ್ ಭಾರತ ತಂಡದ ಭವಿಷ್ಯದ ನಾಯಕ ಎಂದು ಬಿಂಬಿತವಾಗಿರುವ ಆಟಗಾರ. ಈಗಾಗಲೇ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಹಾಗೆಯೇ ನಾಯಕತ್ವದ ಗುಣಗಳು ಕೂಡ ರಾಹುಲ್ ಅವರಲ್ಲಿದೆ. ಹೀಗಾಗಿ ಭವಿಷ್ಯದ ದೃಷ್ಟಿಯಲ್ಲಿ ಶಾಂತ ಸ್ವಭಾವದ ರಾಹುಲ್ಗೆ ಉಪನಾಯಕನ ಪಟ್ಟ ಕಟ್ಟಬಹುದು.
3) ರಿಷಭ್ ಪಂತ್ – ಈ ಬಾರಿಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ರಿಷಭ್ ಪಂತ್ ತಮ್ಮ ನಾಯಕತ್ವದ ಗುಣವನ್ನು ತೆರೆದಿಟ್ಟಿದ್ದಾರೆ. ಶಾಂತ ಸ್ವಭಾವದ ಮೂಲಕವೇ ಗಮನ ಸೆಳೆದಿರುವ ಪಂತ್ ಕೂಡ ಭಾರತದ ಮುಂದಿನ ನಾಯಕನಾಗುವ ರೇಸ್ನಲ್ಲಿರುವ ಆಟಗಾರ. ಧೋನಿ ಬಳಿಕ ಮತ್ತೊಮ್ಮೆ ವಿಕೆಟ್ ಕೀಪರ್ ಅನ್ನು ನಾಯಕನಾಗಿ ಆಯ್ಕೆ ಮಾಡಬೇಕೆಂದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಬಯಸಿದರೆ ರಿಷಭ್ ಪಂತ್ಗೆ ಉಪನಾಯಕನ ಸ್ಥಾನ ನೀಡಿ ಈಗಲೇ ಪರೀಕ್ಷಿಸಲಿದೆ. ಹೀಗಾಗಿ ರಹಾನೆ ಅವರನ್ನು ಉಪನಾಯಕನ ಸ್ಥಾನದಿಂದ ಕೆಳಗಿಸಿದರೆ ಆ ಸ್ಥಾನದಲ್ಲಿ ರಿಷಭ್ ಪಂತ್ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ
ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ
ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?
(3 players who can replace Ajinkya Rahane as Team India’s Test vice-captain)