ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ (T20 World Cup 2021) ನಂತರ ವಿರಾಟ್ ಕೊಹ್ಲಿ ಟಿ20 ಟೀಮ್ ಇಂಡಿಯಾ (Team India) ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ. ಇದರ ಬೆನ್ನಲ್ಲೇ ಭಾರತ ತಂಡ ನ್ಯೂಜಿಲೆಂಡ್ ವಿರುದ್ದ ಸರಣಿ ಆಡಲಿದೆ. ಆದರೆ ಆ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಇದರೊಂದಿಗೆ ಟೀಮ್ ಇಂಡಿಯಾದ ಟಿ20 ತಂಡದ ಮುಂದಿನ ನಾಯಕ ಯಾರು ಎಂಬುದು ಕೂಡ ಬಹಿರಂಗವಾಗಿದೆ. ಹೌದು, ವಿರಾಟ್ ಕೊಹ್ಲಿಯ (Virat Kohli) ಸ್ಥಾನವನ್ನು ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ (Rohit Sharma) ಅಲಂಕರಿಸಲಿದ್ದಾರೆ ಎಂಬುದನ್ನು ಬಿಸಿಸಿಐ ಮೂಲಗಳು ಖಚಿತಪಡಿಸಿದೆ.
ಈ ಹಿಂದೆ ಕೆಎಲ್ ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಹಾಗೂ ರೋಹಿತ್ ಶರ್ಮಾ ಹೆಸರುಗಳು ಹೊಸ ನಾಯಕನ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಅದರಲ್ಲೂ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ನಾಯಕನ ಸ್ಥಾನ ಸಿಗಲಿದೆ ಎನ್ನಲಾಗಿತ್ತು. ಆದರೀಗ ಯುವ ಆಟಗಾರರನ್ನು ಕೈಬಿಟ್ಟು, ಬಿಸಿಸಿಐ ಅನುಭವಿ ರೋಹಿತ್ಗೆ ಪಟ್ಟ ಕಟ್ಟಲು ಮುಂದಾಗಿದೆ. ಅದರಂತೆ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ರೋಹಿತ್ ಶರ್ಮಾ ಅವರನ್ನು ನಾಯಕನಾಗಿ ಅಧಿಕೃತವಾಗಿ ಘೋಷಿಸಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
2014 ರಲ್ಲಿ ಎಂಎಸ್ ಧೋನಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ನಂತರ ಇದೇ ಮೊದಲ ಬಾರಿಗೆ ಭಾರತವು ವಿಭಜಿತ ನಾಯಕತ್ವ ಹೊಂದಲಿದೆ. 2017 ರಲ್ಲಿ ಟಿ20 ನಾಯಕನಾಗಿ ಅಧಿಕಾರ ಸ್ವೀಕರಿಸಿದ ಕೊಹ್ಲಿ ಇದುವರೆಗೆ ಭಾರತ ತಂಡವನ್ನು 45 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಇದರಲ್ಲಿ ಭಾರತವು 27 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಅಂದರೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ಶೇ. 65.11 ರಷ್ಟು ಪಂದ್ಯಗಳಲ್ಲಿ ವಿಜಯ ಸಾಧಿಸಿದೆ. ಇದಾಗ್ಯೂ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ ಎಂಬುದು ವಿಶೇಷ.
ಇನ್ನು ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿರುವ ರೋಹಿತ್ ಶರ್ಮಾ, 2017 ರಲ್ಲಿ ಶ್ರೀಲಂಕಾ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಈ ಸರಣಿಯಲ್ಲಿ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಲಂಕಾ ತಂಡವನ್ನು ವೈಟ್ ವಾಶ್ ಮಾಡಿದ್ದರು. ಹಾಗೆಯೇ 2018 ರಲ್ಲಿ ನಿದಹಾಸ್ ಟ್ರೋಫಿಯಲ್ಲಿ ನಾಯಕನಾಗಿ ಅದ್ಭುತ ಪ್ರದರ್ಶನ ನೀಡಿದ ಹಿಟ್ಮ್ಯಾನ್ ಗೆಲುವಿನೊಂದಿಗೆ ಮರಳಿದ್ದರು. ನಾಯಕನಾಗಿ 19 ಪಂದ್ಯಗಳನ್ನು ಆಡಿರುವ ರೋಹಿತ್ 41.88 ರ ಸರಾಸರಿಯಲ್ಲಿ 712 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು ಐದು ಅರ್ಧ ಶತಕಗಳು ಮೂಡಿಬಂದಿವೆ.
ಹಾಗೆಯೇ ಟೀಮ್ ಇಂಡಿಯಾವನ್ನು 19 ಪಂದ್ಯಗಳಲ್ಲಿ ಮುನ್ನಡೆಸಿರುವ ಹಿಟ್ಮ್ಯಾನ್ 15 ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಒಟ್ಟಾರೆ ಫಲಿತಾಂಶದಲ್ಲಿ ಶೇ. 78.94 ಗೆಲುವಿನ ಶೇಕಡವಾರು ಹೊಂದಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಹಿಟ್ಮ್ಯಾನ್ ಐದು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಬಿಸಿಸಿಐ ರೋಹಿತ್ ಶರ್ಮಾಗೆ ಟಿ20 ನಾಯಕತ್ವ ನೀಡಲು ನಿರ್ಧರಿಸಿದೆ.
ಇದನ್ನೂ ಓದಿ: T20 World Cup 2021: ಟಿ20 ಕ್ರಿಕೆಟ್ನಲ್ಲಿ ನಂಬರ್ 1 ಬ್ಯಾಟರ್ ಯಾರು ಗೊತ್ತಾ?
ಇದನ್ನೂ ಓದಿ:T20 World Cup 2021: ಟಿ20 ವಿಶ್ವಕಪ್ ಗೆದ್ದವರಿಗೆ ಸಿಗೋ ಹಣವೆಷ್ಟು? ಸೋತರೆ ಸಿಗೋದೆಷ್ಟು?
ಇದನ್ನೂ ಓದಿ: T20 World Cup Winners: ಟಿ20 ವಿಶ್ವಕಪ್ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ
(BCCI official confirms, ‘Rohit Sharma will take over T20 captaincy from Kohli)