ಚಾಂಪಿಯನ್ಸ್ ಟ್ರೋಫಿ ಜೆರ್ಸಿಯಲ್ಲಿ ‘ಪಾಕಿಸ್ತಾನ್’ಗೆ ಸ್ಥಾನ ನೀಡಲು ಬಿಸಿಸಿಐ ನಿರಾಕರಣೆ

|

Updated on: Jan 21, 2025 | 11:53 AM

Champions Trophy 2025: ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಒಟ್ಟು 8 ತಂಢಗಳು ಕಣಕ್ಕಿಳಿಯಲಿದೆ. ಈ ತಂಡಗಳನ್ನು ಎರಡು ಗ್ರೂಪ್​ಗಳಾಗಿ ವಿಂಗಡಿಸಲಾಗಿದ್ದು, ಮೊದಲ ಸುತ್ತಿನಲ್ಲಿ ಆಯಾ ಗ್ರೂಪ್​ಗಳಲ್ಲಿನ ತಂಡಗಳ ನಡುವೆ ಪಂದ್ಯಗಳು ನಡೆಯಲಿದೆ. ಇಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್​ನಲ್ಲಿದ್ದು, ಅದರಂತೆ ಮೊದಲ ಸುತ್ತಿನಲ್ಲೇ ಉಭಯ ತಂಡಗಳು ಮುಖಾಮುಖಿಯಾಗಲಿದೆ.

ಚಾಂಪಿಯನ್ಸ್ ಟ್ರೋಫಿ ಜೆರ್ಸಿಯಲ್ಲಿ ಪಾಕಿಸ್ತಾನ್ಗೆ ಸ್ಥಾನ ನೀಡಲು ಬಿಸಿಸಿಐ ನಿರಾಕರಣೆ
Team India
Follow us on

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಫೆಬ್ರವರಿ 19 ರಿಂದ ಆರಂಭವಾಗಲಿರುವ ಈ ಏಕದಿನ ಟೂರ್ನಿಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆತಿಥ್ಯವಹಿಸಲಿದೆ. ಈ ಆತಿಥ್ಯದ ಕಾರಣ ಎಲ್ಲಾ ತಂಡಗಳ ಚಾಂಪಿಯನ್ಸ್ ಟ್ರೋಫಿ ಜೆರ್ಸಿ ಮೇಲೆ ಪಾಕಿಸ್ತಾನದ ಹೆಸರು ಕೂಡ ಕಾಣಿಸಿಕೊಳ್ಳಲಿದೆ. ಆದರೆ ಟೀಮ್ ಇಂಡಿಯಾ ಜೆರ್ಸಿಯಲ್ಲಿ ‘ಪಾಕಿಸ್ತಾನ್’ ಎಂಬ ಹೆಸರನ್ನು ಮುದ್ರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರಾಕರಿಸಿದೆ ಎಂದು ವರದಿಯಾಗಿದೆ.

ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ್ ಆತಿಥ್ಯವಹಿಸುತ್ತಿದ್ದರೂ, ಟೀಮ್ ಇಂಡಿಯಾ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ಟೀಮ್ ಇಂಡಿಯಾ ನಿರಾಕರಿಸಿರುವ ಕಾರಣ ಈ ಬಾರಿ ಟೂರ್ನಮೆಂಟ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ. ಅದರಂತೆ ಬಹುತೇಕ ಪಂದ್ಯಗಳು ಪಾಕ್​ನಲ್ಲಿ ನಡೆದರೆ, ಭಾರತ ತಂಡದ ಪಂದ್ಯಗಳು ದುಬೈನಲ್ಲಿ ಜರುಗಲಿದೆ.

ಇದೀಗ ಪಾಕಿಸ್ತಾನದಲ್ಲಿ ಪಂದ್ಯವಾಡದಿರುವ ಕಾರಣ ಭಾರತ ತಂಡದ ಜೆರ್ಸಿ ಮೇಲೆ ಆತಿಥೇಯ ‘ಪಾಕಿಸ್ತಾನ್’ ಹೆಸರು ನಮೂದಿಸಲು ಬಿಸಿಸಿಐ ನಿರಾಕರಿಸಿದೆ. ಬಿಸಿಸಿಐನ ಈ ನಿರ್ಧಾರವು ಇದೀಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಬಿಸಿಸಿಐ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ, ಇದನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅನುಮತಿಸುವುದಿಲ್ಲ ತಿಳಿಸಿದೆ. ಅಲ್ಲದೆ ಭಾರತ ಪ್ರತಿಯೊಂದರಲ್ಲೂ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದೆ.

ಏಷ್ಯಾಕಪ್​ನಲ್ಲಿ ‘ಪಾಕಿಸ್ತಾನ್​’ ಕೈ ಬಿಟ್ಟ ಭಾರತ:

2023ರ ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ವಹಿಸಿತ್ತು. ಆದರೆ ಭಾರತ ಪಾಕ್​ನಲ್ಲಿ ಟೂರ್ನಿ ಆಡಲು ನಿರಾಕರಿಸಿದ್ದರಿಂದ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು.

ಅದರಂತೆ ಪಾಕಿಸ್ತಾನ್ ಮತ್ತು ಶ್ರೀಲಂಕಾದಲ್ಲಿ ನಡೆದ ಏಷ್ಯಾಕಪ್ 2023 ರಲ್ಲಿ ಟೀಮ್ ಇಂಡಿಯಾ ತನ್ನೆಲ್ಲಾ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಿತ್ತು. ಈ ವೇಳೆ ಕೂಡ ಭಾರತ ತಂಡ ತನ್ನ ಜೆರ್ಸಿ ಮೇಲೆ ಪಾಕಿಸ್ತಾನ್ ಹೆಸರು ಹಾಕಿರಲಿಲ್ಲ ಎಂಬುದು ವಿಶೇಷ.

ಇದೀಗ ಚಾಂಪಿಯನ್ಸ್ ಟ್ರೋಫಿ ಜೆರ್ಸಿಯಿಂದಲೂ ‘ಪಾಕಿಸ್ತಾನ್’ಗೆ ಕೊಕ್ ನೀಡಲು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತೀಯರು ಆಟಗಾರರು ಧರಿಸುವ ಜೆರ್ಸಿ ಮೇಲೆ ‘ಪಾಕಿಸ್ತಾನ್’ ಕಾಣಿಸಿಕೊಳ್ಳುವುದಿಲ್ಲ ಎಂದೇ ಹೇಳಬಹುದು.

ಇದನ್ನೂ ಓದಿ: 26 ಸಿಕ್ಸ್, 17 ಫೋರ್​: RCBಯಿಂದ ಹೊರಬಿದ್ದ ಬಳಿಕ ಗ್ಲೆನ್ ಮ್ಯಾಕ್ಸ್​ವೆಲ್ ಸಿಡಿಲಬ್ಬರ

ಭಾರತ ತಂಡದ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ:

  1. ಭಾರತ vs ಬಾಂಗ್ಲಾದೇಶ್: ಫೆಬ್ರವರಿ 20 (ದುಬೈ)
  2. ಭಾರತ vs ಪಾಕಿಸ್ತಾನ್: ಫೆಬ್ರವರಿ 23 (ದುಬೈ)
  3. ಭಾರತ vs ನ್ಯೂಝಿಲೆಂಡ್: ಮಾರ್ಚ್ 2 (ದುಬೈ)
  4. ಸೆಮಿಫೈನಲ್ (ಅರ್ಹತೆ ಪಡೆದರೆ): ಮಾರ್ಚ್ 4 (ದುಬೈ)
  5. ಫೈನಲ್ (ಅರ್ಹತೆ ಪಡೆದರೆ): ಮಾರ್ಚ್ 9 (ದುಬೈ)