Jay Shah: ಐಸಿಸಿ ಗದ್ದುಗೆ ಮೇಲೆ ಜಯ್​ ಶಾ ಚಿತ್ತ? ಚುನಾವಣೆಗೆ ಸ್ಪರ್ಧಿಸಿದರೆ ಅವಿರೋಧ ಆಯ್ಕೆ ಖಚಿತ

|

Updated on: Jul 08, 2024 | 4:26 PM

Jay Shah: ಕ್ರಿಕ್‌ಬಜ್ ವರದಿಯ ಪ್ರಕಾರ, ಐಸಿಸಿ ಅಧ್ಯಕ್ಷ ಸ್ಥಾನವನ್ನು ಜಯ್ ಶಾ ವಹಿಸಿಕೊಳ್ಳಬೇಕೆ ಅಥವಾ ಬೇಡವೇ ಎಂಬುದರ ಕುರಿತು ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೆ ಜಯ್ ಶಾ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಅವರು ಅವಿರೋಧವಾಗಿ ಆಯ್ಕೆಯಾಗುವುದು ಖಚಿತ.

Jay Shah: ಐಸಿಸಿ ಗದ್ದುಗೆ ಮೇಲೆ ಜಯ್​ ಶಾ ಚಿತ್ತ? ಚುನಾವಣೆಗೆ ಸ್ಪರ್ಧಿಸಿದರೆ ಅವಿರೋಧ ಆಯ್ಕೆ ಖಚಿತ
ಜಯ್ ಶಾ, ರೋಹಿತ್ ಶರ್ಮಾ
Follow us on

ತನ್ನ ಅಧಿಕಾರಾವಧಿಯಲ್ಲಿ ಭಾರತ ಕ್ರಿಕೆಟ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿರುವ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಇದೀಗ ಐಸಿಸಿ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎಂದು ವರದಿಯಾಗಿದೆ. ವಾಸ್ತವವಾಗಿ ಐಸಿಸಿಯ ನೂತನ ಅಧ್ಯಕ್ಷರ ಆಯ್ಕೆ ಮುಂದಿನ ನವೆಂಬರ್‌ನಲ್ಲಿ ನಡೆಯಲಿದೆ. ಹೀಗಾಗಿ ಈ ಹುದ್ದೆಗೆ ಬಿಸಿಸಿಐನ ಪ್ರಸ್ತುತ ಕಾರ್ಯದರ್ಶಿ ಜಯ್ ಶಾ ಅವರನ್ನು ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಒಂದು ವೇಳೆ ಜಯ್​ ಶಾ ಈ ಹುದ್ದೆಗೆ ಆಯ್ಕೆಯಾದರೆ ಐಸಿಸಿಯ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಕ್ರಿಕ್‌ಬಜ್ ವರದಿಯ ಪ್ರಕಾರ, ಐಸಿಸಿ ಅಧ್ಯಕ್ಷ ಸ್ಥಾನವನ್ನು ಜಯ್ ಶಾ ವಹಿಸಿಕೊಳ್ಳಬೇಕೆ ಅಥವಾ ಬೇಡವೇ ಎಂಬುದರ ಕುರಿತು ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಈ ಹುದ್ದೆಯನ್ನು ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ ನಿರ್ವಹಿಸುತ್ತಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರ ಬೆಂಬಲದೊಂದಿಗೆ ಗ್ರೆಗ್ ಬಾರ್ಕ್ಲೇ ಈ ಹುದ್ದೆಯನ್ನು ವಹಿಸಿಕೊಂಡಿದ್ದಾರೆ. ಬಾರ್ಕ್ಲೇ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರೆಯುವ ಅವಕಾಶ ಹೊಂದಿದ್ದಾರೆ. ಆದರೆ ಜಯ್ ಶಾ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಅವರು ಅವಿರೋಧವಾಗಿ ಆಯ್ಕೆಯಾಗುವುದು ಖಚಿತ.

ಅಧ್ಯಕ್ಷರ ಅಧಿಕಾರಾವಧಿ ಪರಿಷ್ಕರಣೆ

ಐಸಿಸಿ, ಅಧ್ಯಕ್ಷರ ಅಧಿಕಾರಾವಧಿಯನ್ನು ಪರಿಷ್ಕರಿಸಿದೆ ಎಂಬ ವರದಿ ಈಗಾಗಲೇ ಹೊರಬಿದ್ದಿದೆ. ಇದನ್ನು ಮೂರು ಅವಧಿಯಿಂದ ಮೂರು ವರ್ಷಗಳ ಎರಡು ಅವಧಿಗೆ ಬದಲಾಯಿಸಲಾಗಿದೆ. ಶಾ ಆಯ್ಕೆಯಾದರೆ ಮೂರು ವರ್ಷಗಳ ಅವಧಿಗೆ ಐಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದರ ನಂತರ, ಅವರು ಬಿಸಿಸಿಐ ಸಂವಿಧಾನದ ಪ್ರಕಾರ 2028 ರಲ್ಲಿ ಬಿಸಿಸಿಐ ಅಧ್ಯಕ್ಷರಾಗಲು ಅರ್ಹರಾಗಿರುತ್ತಾರೆ.

ಜಯ್​ ಶಾ ಬಗ್ಗೆ ಊಹಾಪೋಹಗಳು

ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರೆ ಅವರು, ಐಸಿಸಿ ಪ್ರಧಾನ ಕಚೇರಿಯನ್ನು ದುಬೈನಿಂದ ಮುಂಬೈಗೆ ಸ್ಥಳಾಂತರಿಸುವ ಬಗ್ಗೆ ಚಿಂತಿಸಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಊಹಾಪೋಹಗಳು ಸುದ್ದಿಯಾಗಿವೆ. ಆದರೆ ಜಯ್ ಶಾ, ಈ ಬಗ್ಗೆ ಆಲೋಚಿಸಿಲ್ಲ. ಬದಲಿಗೆ ಅವರು ಐಸಿಸಿಯೊಳಗೆ ಬದಲಾವಣೆಯನ್ನು ತರಲು ಆಸಕ್ತಿ ಹೊಂದಿದ್ದಾರೆಂದು ಅವರ ಆಪ್ತವಲಯಗಳಿಂದ ತಿಳಿದುಬಂದಿದೆ. ಇದೀಗ ಅಧ್ಯಕ್ಷೀಯ ಚುನಾವಣೆಯ ವೇಳಾಪಟ್ಟಿಯನ್ನು ವಾರ್ಷಿಕ ಸಮ್ಮೇಳನದಲ್ಲಿ ಔಪಚಾರಿಕಗೊಳಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಸಹಾಯಕ ಸದಸ್ಯ ನಿರ್ದೇಶಕರ ಚುನಾವಣೆ

ಏತನ್ಮಧ್ಯೆ, ಜುಲೈ 19 ರಂದು ವಾರ್ಷಿಕ ಸಮ್ಮೇಳನದಲ್ಲಿ ಸಹಾಯಕ ಸದಸ್ಯ ನಿರ್ದೇಶಕರ ಚುನಾವಣೆ ನಡೆಯಲಿದೆ. ಐಸಿಸಿ ಬೋರ್ಡ್ ಆಫ್ ಡೈರೆಕ್ಟರ್‌ನಲ್ಲಿ ಮೂರು ಸ್ಥಾನಗಳಿಗೆ ಹನ್ನೊಂದು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಪ್ರತಿಯೊಬ್ಬರ ಅಧಿಕಾರಾವಧಿ ಎರಡು ವರ್ಷಗಳು. ಪ್ರಸ್ತುತ ನಿರ್ದೇಶಕರಾಗಿ ಒಮಾನ್‌ನ ಪಂಕಜ್ ಖಿಮ್ಜಿ, ಸಿಂಗಾಪುರದ ಇಮ್ರಾನ್ ಖವಾಜಾ ಮತ್ತು ಬರ್ಮುಡಾದ ನೀಲ್ ಸ್ಪೀಟ್ ಕಾರ್ಯನಿರ್ವಹಿಸುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:20 pm, Mon, 8 July 24