ವಿರಾಟ್-ರೋಹಿತ್ ಸೇರಿದಂತೆ 6 ಆಟಗಾರರ ಟಿ20 ವೃತ್ತಿಜೀವನ ಅಂತ್ಯ! ಸೂಚನೆ ನೀಡಿದ ಬಿಸಿಸಿಐ

| Updated By: ಪೃಥ್ವಿಶಂಕರ

Updated on: Dec 29, 2022 | 12:52 PM

Team India: ಇನ್‌ಸೈಡ್‌ಸ್ಪೋರ್ಟ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಬಿಸಿಸಿಐ ಆಯ್ಕೆಗಾರರು ಭಾರತದ 6 ಹಿರಿಯ ಆಟಗಾರರನ್ನು ಈಗ ತಮ್ಮ ಟಿ20 ವೃತ್ತಿಜೀವನದ ಬಗ್ಗೆ ಯೋಚಿಸುವಂತೆ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ವಿರಾಟ್-ರೋಹಿತ್ ಸೇರಿದಂತೆ 6 ಆಟಗಾರರ ಟಿ20 ವೃತ್ತಿಜೀವನ ಅಂತ್ಯ! ಸೂಚನೆ ನೀಡಿದ ಬಿಸಿಸಿಐ
ಟೀಂ ಇಂಡಿಯಾ
Follow us on

ಟಿ20 ವಿಶ್ವಕಪ್​ನಿಂದ (T20 World Cup) ಬರಿಗೈಯಲ್ಲಿ ವಾಪಸ್ಸಾದ ಬಳಿಕ ಟೀಂ ಇಂಡಿಯಾದ (Team India) ಟಿ20 ತಂಡದಲ್ಲಿ ಕೆಲವು ಅಚ್ಚರಿಯ ಬದಲಾವಣೆಗಳು ಕಂಡುಬರುತ್ತಿವೆ. ಅದರ ಫಲವಾಗಿ ಹಾರ್ದಿಕ್ ಪಾಂಡ್ಯಗೆ (Hardik Pandya) ಟಿ20 ತಂಡದ ನಾಯಕತ್ವ ನೀಡಲು ಎಲ್ಲಾ ರೀತಿಯ ತಯಾರಿ ಕೂಡ ನಡೆದಿದೆ. ಹಾಗೆಯೇ ಬಾಂಗ್ಲಾ ಪ್ರವಾಸ ಮುಗಿಸಿ ಬಂದ ತಂಡವನ್ನು ಭೇಟಿ ಮಾಡಿದ್ದ ಬಿಸಿಸಿಐ (BCCI) ಬಿಗ್​ ಬಾಸ್​ಗಳು ಕೆಲವು ಆಟಗಾರರಿಗೆ ಚುಟುಕು ಮಾದರಿಯಿಂದ ಕೋಕ್ ನೀಡುವ ಸೂಚನೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಇನ್‌ಸೈಡ್‌ಸ್ಪೋರ್ಟ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಬಿಸಿಸಿಐ ಆಯ್ಕೆಗಾರರು ಭಾರತದ 6 ಹಿರಿಯ ಆಟಗಾರರನ್ನು ಈಗ ತಮ್ಮ ಟಿ20 ವೃತ್ತಿಜೀವನದ ಬಗ್ಗೆ ಯೋಚಿಸುವಂತೆ ಕೇಳಿಕೊಂಡಿದ್ದಾರೆ. ವರದಿ ಪ್ರಕಾರ, ಈ 6 ಕ್ರಿಕೆಟಿಗರಲ್ಲಿ ರೋಹಿತ್, ಶರ್ಮಾ, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಆರ್. ಅಶ್ವಿನ್, ಮೊಹಮ್ಮದ್ ಶಮಿ ಮತ್ತು ದಿನೇಶ್ ಕಾರ್ತಿಕ್ ಹೆಸರು ಸೇರಿದೆ ಎಂದು ತಿಳಿದುಬಂದಿದೆ.

ಬಿಸಿಸಿಐನ ಉನ್ನತ ಮೂಲಗಳು ಇನ್‌ಸೈಡ್‌ಸ್ಪೋರ್ಟ್‌ಗೆ ತಿಳಿಸಿರುವಂತೆ, “ಈಗ ನಾವು 2024 ರ ಟಿ20 ವಿಶ್ವಕಪ್‌ಗಾಗಿ ಯೋಜನೆ ಸಿದ್ದಪಡಿಸುತ್ತಿದ್ದೇವೆ. ನಮ್ಮಲ್ಲಿ 35-36 ವರ್ಷ ವಯಸ್ಸಿನ ಅನೇಕ ಆಟಗಾರರಿದ್ದಾರೆ. ಹೀಗಾಗಿ ಈ ಆಟಗಾರರು ತಂಡದ ದೀರ್ಘಾವಧಿಯ ಯೋಜನೆಗೆ ಸರಿಹೊಂದುವುದಿಲ್ಲ. ಅಲ್ಲದೆ ಇನ್ನು ಮುಂದೆ ನಾವು ನಮ್ಮ ಟಿ20 ತಂಡವನ್ನು ಕಟ್ಟಬೇಕಿದೆ. ಈಗ ಈ ಕೆಲಸಕ್ಕೆ ಕೈ ಹಾಕದಿದ್ದರೆ ಮತ್ತ್ಯಾವಾಗ ಮುಂದಾಗುವುದು?. ಹೀಗಾಗಿ ನಾವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಇನ್ನು ಮುಂದೆ ಟಿ20 ತಂಡದಲ್ಲಿ ವಯಸ್ಸಿಗೆ ತಕ್ಕಂತೆ ಹೊಂದಿಕೊಳ್ಳದ ಆಟಗಾರರಿಗೆ ಈ ಮಾದರಿಯಿಂದ ಕೋಕ್ ನೀಡುವ ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.

‘ನಮ್ಮ ಯಶಸ್ಸನ್ನು ಭಾರತಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ’; ಮತ್ತೊಮ್ಮೆ ಗುಡುಗಿದ ರಮೀಜ್ ರಾಜಾ

ಇನ್ನು ಮುಂದೆ ಟಿ20 ತಂಡದಲ್ಲಿ ಈ ಆಟಗಾರರು ಆಡುವುದು ಅನುಮಾನ?

ಟಿ20 ವೃತ್ತಿಜೀವನ ಭಾಗಶಃ ಅಂತ್ಯವಾಗಿರುವ ಪೈಕಿ ಆಟಗಾರರ ಪೈಕಿ ಆರ್. ಅಶ್ವಿನ್, ಮೊಹಮ್ಮದ್ ಶಮಿ, ದಿನೇಶ್ ಕಾರ್ತಿಕ್ ಮತ್ತು ಭುವನೇಶ್ವರ್ ಕುಮಾರ್ ಅವರ ಹೆಸರನ್ನು ಸೇರಿಸಲಾಗಿದೆ ಎಂದು ವರದಿಯಾಗಿದೆ. ಇವರಲ್ಲದೆ ಟಿ20 ತಂಡದಲ್ಲಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೂ ಇನ್ನು ಮುಂದೆ ಟಿ20 ತಂಡದಲ್ಲಿ ಸಿಗುವ ಅವಕಾಶಗಳು ಕಡಿಮೆ. ಅಲ್ಲದೆ ಕೆಎಲ್ ರಾಹುಲ್ ಅವರು ಟಿ20 ತಂಡದ ಯೋಜನೆಗೆ ಹೊಂದಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಲಾಗಿಲ್ಲ. ಆದರೆ ಅವರು ಟಿ20 ವಿಶ್ವಕಪ್‌ನ ಯೋಜನೆಯ ಭಾಗವಾಗಬಹುದು ಎಂಬುದು ಬಿಸಿಸಿಐ ಮೂಲಗಳಿಂದ ತಿಳಿದು ಬಂದ ಮಾಹಿತಿಯಾಗಿದೆ.

ಶ್ರೀಲಂಕಾ ವಿರುದ್ಧದ ಸರಣಿಯೇ ಮುನ್ನುಡಿ

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ಟೀಂ ಇಂಡಿಯಾದಲ್ಲಿ ಭವಿಷ್ಯದ ಟಿ20 ತಂಡವನ್ನು ಕಟ್ಟುವ ತಯಾರಿ ಶುರುವಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಸರಣಿಗೆ ಆಯ್ಕೆದಾರರು ತಂಡದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದ್ದಾರೆ. ಹಲವು ಆಟಗಾರರನ್ನು ಹೊರಗಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಂದರೆ ಮುಂದಿನ ಟಿ20 ವಿಶ್ವಕಪ್‌ಗೆ ತಂಡ ರಚನೆ ಈ ಸರಣಿಯಿಂದ ಆರಂಭವಾಗಿದೆ ಎಂಬುದು ಸ್ಪಷ್ಟವಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:48 pm, Thu, 29 December 22