ಬರೋಬ್ಬರಿ 34 ದಿನಗಳು… ಭಾರತದ ಏಷ್ಯಾಕಪ್ ಟ್ರೋಫಿ ಎಲ್ಲಿ?

India vs Pakistan: ಏಷ್ಯಾಕಪ್​ನ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.1 ಓವರ್​ಗಳಲ್ಲಿ 146 ರನ್​ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 19.4 ಓವರ್​ಗಳಲ್ಲಿ 150 ರನ್​ಗಳಿಸಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ 9ನೇ ಬಾರಿ ಏಷ್ಯಾಕಪ್​ನಲ್ಲಿ ಚಾಂಪಿಯನ್ ಪಟ್ಟಕ್ಕೇರಿತು.

ಬರೋಬ್ಬರಿ 34 ದಿನಗಳು... ಭಾರತದ ಏಷ್ಯಾಕಪ್ ಟ್ರೋಫಿ ಎಲ್ಲಿ?
Team India

Updated on: Nov 01, 2025 | 10:30 AM

ಭಾರತ ತಂಡವು ಏಷ್ಯಾಕಪ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿ ಬರೋಬ್ಬರಿ 34 ದಿನಗಳು ಕಳೆದಿವೆ. ಇದಾಗ್ಯೂ ಇನ್ನೂ ಕೂಡ ಏಷ್ಯಾಕಪ್ ಟ್ರೋಫಿ ಟೀಮ್ ಇಂಡಿಯಾ ಕೈ ಸೇರಿಲ್ಲ. ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು 5 ವಿಕೆಟ್​ಗಳಿಂದ ಮಣಿಸಿ ಭಾರತ ತಂಡ ಏಷ್ಯಾಕಪ್ ಗೆದ್ದುಕೊಂಡಿತ್ತು. ಆದಾಗ್ಯೂ, ಭಾರತ ಮತ್ತು ಪಾಕಿಸ್ತಾನದ ನಡುವಣ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದರು.

ಇದಕ್ಕೆ ಮುಖ್ಯ ಕಾರಣ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ಮುಖ್ಯಸ್ಥ ಮೊಹ್ಸಿನ್ ನಖ್ವಿ ಪಾಕಿಸ್ತಾನ ಸರ್ಕಾರದ ಆಂತರಿಕ ವ್ಯವಹಾರಗಳ ಸಚಿವರಾಗಿರುವುದು. ಹೀಗಾಗಿಯೇ ಟೀಮ್ ಇಂಡಿಯಾ ಪಾಕ್ ವ್ಯಕ್ತಿಯಿಂದ ಏಷ್ಯಾಕಪ್ ಸ್ವೀಕರಿಸಲು ನಿರಾಕರಿಸಿತ್ತು.

ಅತ್ತ ಭಾರತೀಯ ಆಟಗಾರರು ತನ್ನಿಂದ ಟ್ರೋಫಿ ಸ್ವೀಕರಿಸಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಮೊಹ್ಸಿನ್ ನಖ್ವಿ, ಏಷ್ಯಾ ಕಪ್ ಟ್ರೋಫಿ ಹಾಗೂ ವಿನ್ನರ್ ಮೆಡಲ್​ಗಳನ್ನು ಹೊಟೇಲ್​ಗೆ ಕೊಂಡೊಯ್ಯುವಂತೆ ಸೂಚಿಸಿದ್ದರು. ಇದರಿಂದಾಗಿ ಟೀಮ್ ಇಂಡಿಯಾ ಆಟಗಾರರು ಟ್ರೋಫಿ ಇಲ್ಲದೇ ಸಂಭ್ರಮಿಸಿದ್ದರು.

ಇದಾದ ಬಳಿಕ ಬಿಸಿಸಿಐ ಹಲವು ಬಾರಿ ಟ್ರೋಫಿ ಹಿಂತಿರುಗಿಸುವಂತೆ ಮನವಿ ಮಾಡಿದೆ. ಆದರೆ ಮೊಹ್ಸಿನ್ ನಖ್ವಿ ಕಡೆಯಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಹೀಗಾಗಿಯೇ ಇದೀಗ ಭಾರತೀಯ ಕ್ರಿಕೆಟ್ ಮಂಡಳಿ ಮುಂದಿನ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲು ನಿರ್ಧರಿಸಿದೆ.

ಬಿಸಿಸಿಐ ಕಾರ್ಯದರ್ಶಿ ಹೇಳಿದ್ದೇನು?

ಮುಂದಿನ ಮೂರು ದಿನಗಳಲ್ಲಿ ಏಷ್ಯಾಕಪ್ ಟ್ರೋಫಿ ಬಿಸಿಸಿಐ ಕೈ ಸೇರದಿದ್ದರೆ, ನವೆಂಬರ್ 4 ರಂದು ದುಬೈನಲ್ಲಿ ಆರಂಭವಾಗುವ ಐಸಿಸಿ ಸಭೆಯಲ್ಲಿ ಈ ವಿಷಯವನ್ನು ಬಲವಾಗಿ ಪ್ರಸ್ತಾಪಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟಪಡಿಸಿದ್ದಾರೆ.

ಒಂದು ತಿಂಗಳು ಕಳೆದರೂ ಟ್ರೋಫಿಯನ್ನು ನಮಗೆ ನೀಡದಿರುವ ಬಗ್ಗೆ ನಮಗೆ ಸ್ವಲ್ಪ ಅಸಮಾಧಾನವಿದೆ. ಈ ಬಗ್ಗೆ 10 ದಿನಗಳ ಹಿಂದೆ ನಾವು ಎಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದೇವೆ. ಆದರೆ ಅವರ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ.  ಏಷ್ಯಾಕಪ್ ಟ್ರೋಫಿ ಇನ್ನೂ ಕೂಡ ಅವರ ಬಳಿಯೇ ಇದೆ. ಇನ್ನು ಒಂದೆರಡು ದಿನಗಳಲ್ಲಿ ಟ್ರೋಫಿ ಮುಂಬೈನಲ್ಲಿರುವ ಬಿಸಿಸಿಐ ಮುಖ್ಯ ಕಚೇರಿಗೆ ತಲುಪುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪಿಟಿಐಗೆ ತಿಳಿಸಿದ್ದಾರೆ.

ಟ್ರೋಫಿಯನ್ನು ಹಿಂತಿರುಗಿಸದಿದ್ದರೆ, ನವೆಂಬರ್ 4 ರಿಂದ ದುಬೈನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಬಿಸಿಸಿಐ ಈ ವಿಷಯವನ್ನು ಪ್ರಸ್ತಾಪಿಸಲಿದೆ. ಅದಕ್ಕೂ ಮುನ್ನ ಟ್ರೋಫಿ ಮುಂಬೈಗೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ದೇವಜಿತ್ ಸೈಕಿಯಾ ಹೇಳಿದ್ದಾರೆ.

ಇದನ್ನೂ ಓದಿ: ಬಿರುಗಾಳಿ ಬ್ಯಾಟಿಂಗ್… ಹೊಸ ವಿಶ್ವ ದಾಖಲೆ ನಿರ್ಮಿಸಿದ ಅಭಿಷೇಕ್ ಶರ್ಮಾ

ಒಟ್ಟಿನಲ್ಲಿ ಏಷ್ಯಾಕಪ್ ಟೂರ್ನಿ ಮುಗಿದು ತಿಂಗಳು ಕಳೆದರೂ ಟ್ರೋಫಿ ವಿವಾದ ಕೊನೆಗೊಂಡಿಲ್ಲ. ಇತ್ತ ಬಿಸಿಸಿಐ ಪದೇ ಪದೇ ಟ್ರೋಫಿಯನ್ನು ಕೇಳುತ್ತಿದ್ದರೂ ಮೊಹ್ಸಿನ್ ನಖ್ವಿ ತಮ್ಮ ನಿಲುವು ಬದಲಿಸಿಲ್ಲ. ಅಲ್ಲದೆ ಟ್ರೋಫಿ ಬೇಕಿದ್ದರೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರೇ ಬಂದು ಸ್ವೀಕರಿಸಲಿ ಎಂದಿದ್ದಾರೆ. ಹೀಗಾಗಿ ಬಿಸಿಸಿಐ ತೆಗೆದುಕೊಳ್ಳುವ ಮುಂದಿನ ನಿರ್ಧಾರವೇನು? ಎಂಬುದೇ ಈಗ ಕುತೂಹಲ.

 

 

 

Published On - 10:23 am, Sat, 1 November 25