ಭಾರತ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್ (Gautam Gambhir) ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಹೊಸ ಕೋಚ್ಗೆ ಸಿಗುವ ವೇತನ ಎಷ್ಟು ಎಂಬ ಚರ್ಚೆಗಳು ಶುರುವಾಗಿದೆ. ಈ ಚರ್ಚೆಗಳ ನಡುವೆ ಇದೀಗ ಮತ್ತೊಂದು ಮಾಹಿತಿ ಹೊರಬಿದ್ದಿದೆ. ಅದೇನೆಂದರೆ ಗೌತಮ್ ಗಂಭೀರ್ ಅವರ ವಾರ್ಷಿಕ ವೇತನವನ್ನು ಬಿಸಿಸಿಐ ಇನ್ನೂ ಕೂಡ ನಿಗದಿ ಮಾಡಿಲ್ಲ ಎಂಬುದು. ಇದಕ್ಕೆ ಮುಖ್ಯ ಕಾರಣ ಅವರು ಈ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು. ಅಂದರೆ ಭಾರತ ತಂಡದ ಕೋಚ್ ಹುದ್ದೆಗೆ ಆಯ್ಕೆಯಾಗುವ ಮುನ್ನ ಗಂಭೀರ್ ತಮ್ಮ ವೇತನದ ಒಪ್ಪಂದಕ್ಕಾಗಿ ಯಾವುದೇ ಬೇಡಿಕೆಯಿಟ್ಟಿಲ್ಲ ಎಂದು ವರದಿಯಾಗಿದೆ.
ಗೌತಮ್ ಗಂಭೀರ್ ಅವರಿಗೆ ಕೋಚ್ ಹುದ್ದೆ ಅಲಂಕರಿಸುವುದು ಮುಖ್ಯವಾಗಿತ್ತು. ಸಂಬಳ ಮತ್ತು ಇತರ ವಿಷಯಗಳ ಬಗ್ಗೆ ಅವರು ಚರ್ಚೆ ನಡೆಸಿಲ್ಲ. ಅಲ್ಲದೆ ಯಾವುದೇ ಡಿಮ್ಯಾಂಡ್ ಅನ್ನು ಸಹ ಮುಂದಿಟ್ಟಿಲ್ಲ. ಹೀಗಾಗಿಯೇ ಅವರ ವೇತನ ಎಷ್ಟು ಎಂಬುದು ಇನ್ನೂ ಸಹ ಅಂತಿಮವಾಗಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
2014 ರಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಯಿಂದ ಡಂಕನ್ ಫ್ಲೆಚರ್ ಕೆಳಗಿಳಿದಾಗ ರವಿಶಾಸ್ತ್ರಿ ಕೂಡ ಯಾವುದೇ ಒಪ್ಪಂದವಿಲ್ಲದೆ ಕಾರ್ಯಾರಂಭ ಮಾಡಿದ್ದರು. ಇದೀಗ ಗೌತಮ್ ಗಂಭೀರ್ ಕೂಡ ವೇತನ ನಿಗದಿಯ ಒಪ್ಪಂದಕ್ಕೂ ಮುನ್ನವೇ ಕೋಚ್ ಹುದ್ದೆಯನ್ನು ಅಲಂಕರಿಸಿದ್ದಾರೆ.
ಇದಾಗ್ಯೂ ಗೌತಮ್ ಗಂಭೀರ್ ಅವರಿಗೆ ವಾರ್ಷಿಕ 12 ಕೋಟಿ ರೂ. ಸಂಭಾವನೆ ಸಿಗುವ ಸಾಧ್ಯತೆಯಿದೆ. ಏಕೆಂದರೆ ಈ ಹಿಂದಿನ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಬಿಸಿಸಿಐ ವಾರ್ಷಿಕ ವೇತನವಾಗಿ 12 ಕೋಟಿ ರೂ. ಪಾವತಿ ಮಾಡಿದೆ. ಇದಕ್ಕೆ ಸಮಾನವಾಗಿ ಗೌತಮ್ ಗಂಭೀರ್ಗೂ ವೇತನ ಸಿಗಲಿದೆ ಎಂದು ತಿಳಿದು ಬಂದಿದೆ.
ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾದ ಹಂಗಾಮಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಕಾಣಿಸಿಕೊಂಡಿದ್ದಾರೆ. ಈ ಸರಣಿಯ ಬಳಿಕ ಭಾರತ ತಂಡವು ಶ್ರೀಲಂಕಾ ಪ್ರವಾಸ ಕೈ ಕೊಳ್ಳಲಿದೆ. ಅಂದರೆ ಶ್ರೀಲಂಕಾ ಸರಣಿಯೊಂದಿಗೆ ಗೌತಮ್ ಗಂಭೀರ್ ಟೀಮ್ ಇಂಡಿಯಾ ಕೋಚ್ ಆಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.
ಇದನ್ನೂ ಓದಿ: ವಿಚ್ಛೇದನದ ಸುದ್ದಿಯ ನಡುವೆ ಸಖತ್ ಸುಂದರಿ ಜೊತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ
ಈ ಸರಣಿಯಲ್ಲಿ ಭಾರತ ತಂಡವು 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಲಿದೆ. ಆದರೆ ಗಂಭೀರ್ ಅವರ ಕೋಚಿಂಗ್ ಪದಗ್ರಹಣಕ್ಕೆ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಹಾಗೂ ವಿರಾಟ್ ಕೊಹ್ಲಿ ಅಲಭ್ಯರಾಗಲಿದ್ದಾರೆ. ಈ ಮೂವರು ಹಿರಿಯ ಆಟಗಾರರು ಶ್ರೀಲಂಕಾ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆದಿದ್ದು, ಹೀಗಾಗಿ ಏಕದಿನ ತಂಡವನ್ನು ಕೆಎಲ್ ರಾಹುಲ್ ಹಾಗೂ ಟಿ20 ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸುವ ಸಾಧ್ಯತೆಯಿದೆ.