ಇತ್ತೀಚೆಗೆ ಟೀಂ ಇಂಡಿಯಾದ ಕಳಪೆ ಪ್ರದರ್ಶನದಿಂದ ಬಿಸಿಸಿಐ ತಲೆ ತಗ್ಗಿಸುವಂತೆ ಮಾಡಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಬೋರ್ಡ್ 10 ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಈ ಮೂಲಕ ಆಟಗಾರರಲ್ಲಿ ಶಿಸ್ತನ್ನು ತರುವ ಪ್ರಯತ್ನದಲ್ಲಿದೆ. ಒಂದೊಮ್ಮೆ ನಿಯಮ ಪಾಲಿಸದೆ ಇದ್ದರೆ ದುಬಾರಿ ದಂಡ ತೆತ್ತಬೇಕಾದ ಪರಿಸ್ಥಿತಿ ಬರಲಿದೆ. ಕಿರಿಯ ಆಟಗಾರರಿಂದ ಹಿಡಿದು ಹಿರಿಯ ಆಟಗಾರರವರೆಗೆ ಎಲ್ಲರಿಗೂ ಇದು ಅನ್ವಯ ಆಗಲಿದೆ.
ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ನಮ್ಮ ನೆಲದಲ್ಲೇ 0-3 ಅಂತರದಿಂದ ಸೋತಿತು. ಇದಲ್ಲದೆ, ‘ಬಾರ್ಡರ್ ಗವಾಸ್ಕರ್ ಟ್ರೋಫಿ’ಯಲ್ಲೂ 1-3 ಅಂತರದಿಂದ ಸೋಲು ಅನುಭವಿಸಿತು. ಈ ಸೋಲಿನಿಂದಾಗಿ ಭಾರತ ವರ್ಲ್ಡ್ ಟೆಸ್ಟ್ ಚಾಂಪಿಯನ್ಸ್ ರೇಸ್ನಿಂದ ಹೊರ ಬಿದ್ದಿದೆ. ಈ ಬೆನ್ನಲ್ಲೇ ಬಿಸಿಸಿಐ ಕಠಿಣ ನಿಯಮ ತರಲು ಮುಂದಾಗಿದೆ.
ಎಲ್ಲ ಆಟಗಾರರು ದೇಶಿಯ ಪಂದ್ಯಗಳನ್ನು ಆಡಲೇಬೇಕು ಎಂದು ಬಿಸಿಸಿಐ ಹೇಳಿದೆ. ಇದರಿಂದ ಆಟಗಾರರು ಫಾರ್ಮ್ ಉಳಿಸಿಕೊಳ್ಳಲು, ತರಬೇತಿ ಪಡೆಯಲು ಸಹಾಯ ಆಗುತ್ತದೆ. ತಪ್ಪುಗಳನ್ನು ತಿದ್ದಿಕೊಳ್ಳಲು ದೇಶಿಯ ಸರಣಿ ಸಹಕಾರಿ ಆಗಲಿದೆ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ. ಪ್ರ್ಯಾಕ್ಟೀಸ್ ಮ್ಯಾಚ್ಗಳಿಗೆ ಕೆಲ ಆಟಗಾರರು ಪ್ರತ್ಯೇಕವಾಗಿ ಬರುತ್ತಿದ್ದರು. ಇದಕ್ಕೆ ಈಗ ಕಡಿವಾಣ ಹಾಕಲಾಗಿದೆ. ಈ ಮೂಲಕ ಶಿಸ್ತನ್ನು ತರಲು ಬಿಸಿಸಿಐ ಪ್ರಯತ್ನಿಸಿದೆ. ತೀರ ಅಗತ್ಯ ಬಿದ್ದಲ್ಲಿ ಹೆಡ್ ಕೋಚ್ನ ಅನುಮತಿ ಪಡೆಯಬೇಕು.
#BCCI unveils a 10-point policy to promote discipline and unity in the team. pic.twitter.com/2OqbBSDIIa
— All India Radio News (@airnewsalerts) January 17, 2025
ಬ್ಯಾಗೇಜ್ ಪಾಲಿಸಿಯನ್ನು ಕೂಡ ತರಲಾಗಿದ್ದು, ಆಟಗಾರರು ನಿಗದಪಡಿಸಿದ ತೂಕದಲ್ಲೇ ಬ್ಯಾಗ್ನ ತರಬೇಕು. ಆಟಗಾರರು ಕರೆತರುವ ಮ್ಯಾನೇಜರ್ಗಳು, ಬಾಣಸಿಗ ಅವರೆಲ್ಲರಿಗೂ ಕಡಿವಾಣ ಹಾಕಲಾಗಿದೆ.
ಇನ್ನು ತರಬೇತಿ ವೇಳೆ ಎಲ್ಲರೂ ಹಾಜರಿ ಹಾಕಬೇಕು. ಸರಿಯಾದ ಸಮಯಕ್ಕೆ ಇರುವುದು ಕೂಡ ಕಡ್ಡಾಯ. ಸೀರಿಸ್ ವೇಳೆ ಜಾಹೀರಾತು ಶೂಟಿಂಗ್ ಹಾಗೂ ಬ್ರ್ಯಾಂಡ್ಗಳ ಪ್ರಚಾರಕ್ಕೆ ಬ್ರೇಕ್ ಪಡೆಯುವುದರ ಮೇಲೆ ಕಡಿವಾಣ ಹಾಕಲಾಗಿದೆ. ಈ ಮೂಲಕ ಕ್ರಿಕೆಟ್ ಮೇಲೆ ಆಟಗಾರರ ಗಮನ ಹರಿಸಬೇಕು.
ಸರಣಿ ವೇಳೆ ಕುಟುಂಬದವರ ಭೇಟಿಗೂ ಹಲವು ಷರತ್ತುಗಳನ್ನು ಬಿಸಿಸಿಐ ತಂದಿದೆ. 45 ದಿನಕ್ಕೂ ಅಧಿಕ ದಿನ ಆಟಗಾರರು ವಿದೇಶದಲ್ಲಿ ನಡೆಯುವ ಸರಣಿಗಾಗಿ ಇರುತ್ತಾರೆ ಎಂದರೆ ಪತ್ನಿ ಹಾಗೂ ಮಗು (18 ವರ್ಷಕ್ಕಿಂತ ಸಣ್ಣವರು) ಭೇಟಿ ಮಾಡಬಹುದು ಮತ್ತು ಎರಡು ವಾರ ಮಾತ್ರ ಇರಬಹುದು.
ಬಿಸಿಸಿಐ ನಡೆಸುವ ಶೂಟ್, ಪ್ರಮೋಷನಲ್ ಆ್ಯಕ್ಟಿವಿಟಿಯಲ್ಲಿ ಆಟಗಾರರು ಭಾಗಿ ಆಗಲೇಬೇಕು. ಪಂದ್ಯ ನಿಗದಿಪಡಿಸಿದ ಸಮಯಕ್ಕಿಂತ ಮೊದಲೇ ಪೂರ್ಣಗೊಂಡರೂ ಆಟಗಾರರು ತಂಡದ ಜೊತೆ ಇರಲೇಬೇಕು ಎಂಬ ನಿಯಮ ಇದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿಯ ಹಳೆಯ ನಿಯಮಗಳನ್ನು ಜಾರಿಗೊಳಿಸಲು ಮುಂದಾದ ಬಿಸಿಸಿಐ
ಈ ನಿಯಮಗಳನ್ನು ಆಟಗಾರರು ಪಾಲಿಸಲಬೇಕು. ಒಂದೊಮ್ಮೆ ನಿಯಮ ಪಾಲನೆ ಮಾಡದೆ ಇದ್ದರೆ ಅಂಥ ಆಟಗಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಸಿಸಿಐಗೆ ಅಧಿಕಾರ ಇರಲಿದೆ. ಐಪಿಎಲ್ ಸೇರಿ ಬಿಸಿಸಿಐ ನಡೆಸುವ ಎಲ್ಲಾ ಟೂರ್ನ್ಮೆಂಟ್ನಿಂದ ಆಟಗಾರರನ್ನು ಹೊರಕ್ಕೆ ಇಡುವ ಅಧಿಕಾರವೂ ಇದರಲ್ಲಿ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.