ಟೀಮ್ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್: ಹೊಸ ‘ಫಿಟ್​ನೆಸ್​ ಟೆಸ್ಟ್’ ಜಾರಿ!

Team India: ಟೀಮ್ ಇಂಡಿಯಾದ ಹಿರಿಯ ಕ್ರಿಕೆಟಿಗರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಗ್ ಶಾಕ್ ನೀಡಿದೆ. ಕಳೆದ ಸರಣಿಗಳಲ್ಲಿನ ಹಿನ್ನಡೆ ಹಾಗೂ ಆಟಗಾರರ ನಿರಂತರ ಗಾಯದ ಸಮಸ್ಯೆಗಳಿಂದ ಎಚ್ಚೆತ್ತಿರುವ ಮಂಡಳಿಯು, ಇನ್ಮುಂದೆ ಜೂನಿಯರ್-ಸೀನಿಯರ್ ಎನ್ನದೆ ಎಲ್ಲರಿಗೂ ಏಕರೂಪದ ಕಠಿಣ ಫಿಟ್‌ನೆಸ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.

ಟೀಮ್ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್: ಹೊಸ ಫಿಟ್​ನೆಸ್​ ಟೆಸ್ಟ್ ಜಾರಿ!
Team India
Image Credit source: BCCI

Updated on: Aug 06, 2026 | 2:20 PM

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟೀಮ್ ಇಂಡಿಯಾ ಆಟಗಾರರ ಫಿಟ್‌ನೆಸ್ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಇದುವರೆಗೆ ಹಿರಿಯ ಆಟಗಾರರಿಗೆ ನೀಡಲಾಗಿದ್ದ ಸುಲಭ ಮತ್ತು ಸಡಿಲವಾದ ವೈಯಕ್ತಿಕ ಫಿಟ್‌ನೆಸ್ ಗುರಿಗಳನ್ನು ಮಂಡಳಿಯು ಸಂಪೂರ್ಣವಾಗಿ ರದ್ದುಗೊಳಿಸಿದೆ. ಇಂಗ್ಲೆಂಡ್​, ಐರ್ಲೆಂಡ್ ಪ್ರವಾಸದ ಹಿನ್ನಡೆ ಹಾಗೂ ಆಟಗಾರರ ನಿರಂತರ ಗಾಯದ ಸಮಸ್ಯೆಗಳಿಂದ ಎಚ್ಚೆತ್ತಿರುವ ಬಿಸಿಸಿಐ, ಇನ್ಮುಂದೆ ಜೂನಿಯರ್-ಸೀನಿಯರ್ ಎನ್ನದೆ ಎಲ್ಲರಿಗೂ ಏಕರೂಪದ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ. ಅದರಂತೆ ಬೆಂಗಳೂರಿನಲ್ಲಿರುವ ಬಿಸಿಸಿಐನ ಹೊಸ ‘ಸೆಂಟರ್ ಆಫ್ ಎಕ್ಸಲೆನ್ಸ್’ (CoE) ಇನ್ನು ಮುಂದೆ ಯಾವುದೇ ತಾರತಮ್ಯವಿಲ್ಲದ ಕಠಿಣ ಫಿಟ್‌ನೆಸ್ ಪರೀಕ್ಷೆಗಳನ್ನು ನಡೆಸಲಿದೆ.

ಸುಲಭ ಗುರಿಗಳ ದುರುಪಯೋಗ:

ಕಳೆದ ಕೆಲವು ಸಮಯದಿಂದ CoE ವತಿಯಿಂದ ಆಟಗಾರರ ದೇಹಪ್ರಕೃತಿಗೆ ತಕ್ಕಂತೆ ‘ಕಸ್ಟಮೈಸ್ಡ್’ ಫಿಟ್‌ನೆಸ್ ಗುರಿಗಳನ್ನು ನೀಡಲಾಗುತ್ತಿತ್ತು. ಆದರೆ, ಕೆಲವು ಹಿರಿಯ ಆಟಗಾರರು ಇದರ ದುರುಪಯೋಗ ಪಡಿಸಿಕೊಂಡು ಸುಲಭವಾಗಿ ಪರೀಕ್ಷೆ ಪಾಸ್ ಮಾಡುತ್ತಿದ್ದರು ಎಂಬ ಗಂಭೀರ ವಿಷಯ ಬೆಳಕಿಗೆ ಬಂದಿದೆ. ಇದರಿಂದಾಗಿ ಮೈದಾನದಲ್ಲಿ ಆಟಗಾರರ ಚುರುಕುತನ ಗಣನೀಯವಾಗಿ ಕಡಿಮೆಯಾಗಿದ್ದು, ತಂಡದಲ್ಲಿ “ಸ್ಲೋ ಫೀಲ್ಡರ್ಸ್” ಸಂಖ್ಯೆ ಹೆಚ್ಚಾಗಿದೆ ಎಂದು ಟೀಮ್ ಮ್ಯಾನೇಜ್‌ಮೆಂಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.

ಪ್ರಮುಖ ಆಕ್ಷೇಪಣೆಗಳು:

  • ಮೈದಾನದಲ್ಲಿ ಆಲಸ್ಯ: ದೀರ್ಘ ಇನಿಂಗ್ಸ್ ಆಡುವಾಗ ಹಿರಿಯ ಬ್ಯಾಟರ್‌ಗಳು ರನ್‌ಗಾಗಿ ಓಡಲು ಕಷ್ಟಪಡುತ್ತಿರುವುದು ಮತ್ತು ವಿಕೆಟ್‌ಗಳ ನಡುವಿನ ವೇಗ ಕುಸಿದಿರುವುದು ಮಂಡಳಿಯ ಗಮನಕ್ಕೆ ಬಂದಿದೆ.
  • ಪದೇ ಪದೇ ಸ್ನಾಯು ಸೆಳೆತ: ಇಂಗ್ಲೆಂಡ್‌ನಂತಹ ಅನುಕೂಲಕರ ಹವಾಮಾನದಲ್ಲೂ ಆಟಗಾರರು ಪದೇ ಪದೇ ಸ್ನಾಯು ಸೆಳೆತಕ್ಕೆ ಒಳಗಾಗುತ್ತಿರುವುದಕ್ಕೆ ಬಿಸಿಸಿಐ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಫಿಸಿಯೋಗೆ ಕಟ್ಟುನಿಟ್ಟಿನ ಸೂಚನೆ:

ಟೀಮ್ ಇಂಡಿಯಾ ಫಿಸಿಯೋ ಕಮಲೇಶ್ ಜೈನ್ ಅವರಿಗೆ ಬಿಸಿಸಿಐ ಕಠಿಣ ಸಂದೇಶ ರವಾನಿಸಿದ್ದು, ಆಟಗಾರನ ಖ್ಯಾತಿ ಅಥವಾ ಹಿರಿತನ ಏನೇ ಇರಲಿ, ಫಿಟ್‌ನೆಸ್ ಕಳಪೆಯಾಗಿದ್ದರೆ ಮುಲಾಜಿಲ್ಲದೆ ರಿಪೋರ್ಟ್ ಮಾಡಲು ಆದೇಶಿಸಿದೆ.

ಹರ್ಷಿತ್ ರಾಣಾ ಪ್ರಕರಣ:

ವೇಗದ ಬೌಲರ್ ಹರ್ಷಿತ್ ರಾಣಾ ಯುಕೆ ಪ್ರವಾಸಕ್ಕೆ ಆಯ್ಕೆಯಾಗುವಾಗ 97 ಕೆಜಿ ಇದ್ದರು. ಆದರೆ ಮ್ಯಾನೇಜ್‌ಮೆಂಟ್ ಅವರು 4 ಕೆಜಿ ಅತಿ ತೂಕ ಹೊಂದಿದ್ದಾರೆ ಎಂದು ಗುರುತಿಸಿ ತಂಡದಿಂದ ಪಕ್ಕಕ್ಕಿಟ್ಟಿತ್ತು. ಪ್ರಸ್ತುತ ಅವರ ತೂಕವನ್ನು 96 ಕೆಜಿಗಿಂತ ಕಡಿಮೆ ಇಟ್ಟುಕೊಳ್ಳುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಹೊಸ ಫಿಟ್‌ನೆಸ್ ಮಾನದಂಡಗಳು:

ಹೊಸ ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಆಡ್ರಿಯನ್ ಲೆ ರಾಕ್ಸ್ ಅವರ ಮಾರ್ಗದರ್ಶನದಲ್ಲಿ, ಹಳೆಯ ಯೋ-ಯೋ ಟೆಸ್ಟ್ ಬದಲಿಗೆ ಈಗ ಬ್ರಾಂಕೋ ಟೆಸ್ಟ್ ಅನ್ನು ಪ್ರಮುಖ ಮಾನದಂಡವನ್ನಾಗಿ ಮಾಡಲಾಗಿದೆ. ಇನ್ಮುಂದೆ ಪ್ರತಿಯೊಬ್ಬ ಆಟಗಾರನೂ ಈ ಕೆಳಗಿನ ಏಕರೂಪ ಸಮಯದ ಮಿತಿಯೊಳಗೆ ಪರೀಕ್ಷೆ ಪಾಸಾಗಬೇಕಿರುವುದು ಕಡ್ಡಾಯ.

ಟೆಸ್ಟ್ ಮಾದರಿ ಉದ್ದೇಶ  ಸಮಯದ ಮಿತಿ
ಬ್ರಾಂಕೋ ಟೆಸ್ಟ್  ಆಟಗಾರನ ಶಟಲ್ ರನ್ನಿಂಗ್ ಸಾಮರ್ಥ್ಯ, ಚುರುಕುತನ ಮತ್ತು ಆಯಾಸದಿಂದ ಚೇತರಿಸಿಕೊಳ್ಳುವ ವೇಗವನ್ನು ಅಳೆಯುತ್ತದೆ. 5.15 ರಿಂದ 5.20 ನಿಮಿಷಗಳು
2K ಟೆಸ್ಟ್  2 ಕಿಲೋಮೀಟರ್ ದೂರದ ಓಟದ ಮೂಲಕ ಆಟಗಾರನ ಒಟ್ಟಾರೆ ಪಂದ್ಯದ ಫಿಟ್‌ನೆಸ್ ಅನ್ನು ನಿರ್ಣಯಿಸುತ್ತದೆ. 9 ರಿಂದ 10 ನಿಮಿಷಗಳು

 

ಇದನ್ನೂ ಓದಿ: ಈ ಭಾರತೀಯ ಬ್ಯಾಟರ್ ನನ್ನ ವಿಶ್ವ ದಾಖಲೆ ಮುರೀತಾನೆ: ಬಟ್ಲರ್ ಭವಿಷ್ಯ

ಬಿಸಿಸಿಐ ಸೆಕ್ರೆಟರಿ ದೇವಜಿತ್ ಸೈಕಿಯಾ ನೇತೃತ್ವದಲ್ಲಿ ನಡೆದಿರುವ ಈ ಬದಲಾವಣೆಯು ಮುಂಬರುವ ಸರಣಿಗಳಿಗೆ ಆಟಗಾರರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ನಿಯಮ ಉಲ್ಲಂಘಿಸುವ ಅಥವಾ ಫಿಟ್‌ನೆಸ್ ಕಾಪಾಡಿಕೊಳ್ಳದ ಆಟಗಾರರು ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ತಂಡದಿಂದ ಹೊರಗುಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

 

Published On - 2:19 pm, Thu, 6 August 26

Loading...
Unable to load recommendations.
Follow Us