
ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ (Australia vs Pakistan) ಮಹಿಳಾ ತಂಡಗಳ ನಡುವೆ 2025 ರ ಮಹಿಳಾ ವಿಶ್ವಕಪ್ನ (Women’s World Cup) 9ನೇ ಪಂದ್ಯ ಶ್ರೀಲಂಕಾದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲಿ ಪಾಕ್ ಬೌಲರ್ಗಳು ಸರಿಯಾಗಿಯೇ ಚಳ್ಳೆ ಹಣ್ಣು ತಿನ್ನಿಸಿದರು. ಬ್ಯಾಟಿಂಗ್ ವಿಭಾಗದಲ್ಲಿ ಸ್ಟಾರ್ ಆಟಗಾರ್ತಿಯರನ್ನೇ ಹೊಂದಿರುವ ಆಸ್ಟ್ರೇಲಿಯಾ ಒಂದು ಹಂತದಲ್ಲಿ 100 ರನ್ ಕಲೆಹಾಕುವುದು ಕಷ್ಟಕರ ಎಂದು ತೋರುತ್ತಿತ್ತು. ಏಕೆಂದರೆ ಕೇವಲ 76 ರನ್‌ಗಳಿಗೆ ತಂಡದ ಪ್ರಮುಖ 7 ವಿಕೆಟ್ಗಳು ಉದುರಿದವು. ಆದರೆ ತಂಡದ ಪರ ಏಕಾಂಗಿ ಹೋರಾಟ ನೀಡಿದ ಅನುಭವಿ ಆಟಗಾರ್ತಿ ಬೆತ್ ಮೂನಿ (Beth Mooney) ಸ್ಮರಣೀಯ ಶತಕ ಬಾರಿಸಿದರು. ಶತಕ ಬಾರಿಸಿದ್ದು ಮಾತ್ರವಲ್ಲದೆ ತಂಡವನ್ನು 50 ಓವರ್‌ಗಳಲ್ಲಿ 221 ರನ್‌ಗಳಿಗೆ ಕರೆದೊಯ್ಯಿದರು.
ಬೆತ್ ಮೂನಿ ಅವರ ಇನ್ನಿಂಗ್ಸ್‌ನ ಅತ್ಯಂತ ಆಶ್ಚರ್ಯಕರ ಅಂಶವೆಂದರೆ ಅವರು ಒಟ್ಟು 114 ಎಸೆತಗಳನ್ನು ಎದುರಿಸಿದರು, ಅದರಲ್ಲಿ 49 ಎಸೆತಗಳು ಯಾವುದೇ ಸ್ಕೋರ್ ಗಳಿಸಲಿಲ್ಲ. 49 ಡಾಟ್ ಬಾಲ್‌ಗಳನ್ನು ಎದುರಿಸಿದರೂ, ತಮ್ಮ ಶತಕದ ಇನ್ನಿಂಗ್ಸ್ನಲ್ಲಿ 95 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಬ್ಯಾಟ್ ಬೀಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 114 ಎಸೆತಗಳನ್ನು ಎದುರಿಸಿದ ಮೂನಿ 11 ಬೌಂಡರಿ ಸಹಿತ 109 ರನ್ ಬಾರಿಸಿ ಔಟಾದರು.
ಆದಾಗ್ಯೂ ಈ ಪಂದ್ಯದಲ್ಲಿ ಮೂನಿ ಹೊರತುಪಡಿಸಿ ಉಳಿದ ಆಟಗಾರ್ತಿಯರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ನಾಯಕಿ ಅಲಿಸಾ ಹೀಲಿ 20 ರನ್, ಲಿಚ್‌ಫೀಲ್ಡ್ 10 ರನ್, ಎಲಿಸ್ ಪೆರ್ರಿ 5 ರನ್ ಮತ್ತು ಸದರ್ಲ್ಯಾಂಡ್ ಮತ್ತು ಗಾರ್ಡ್ನರ್ ತಲಾ 1 ರನ್‌ಗಳಿಗೆ ಔಟಾದರು. ಆದಾಗ್ಯೂ ಒಂದು ತುದಿಯಲ್ಲಿ ಭದ್ರವಾಗಿ ನಿಂತ ಬೆತ್ ಮೂನಿ, 10 ನೇ ಕ್ರಮಾಂಕದಲ್ಲಿ ಬಂದ ಎಲಾನಾ ಕಿಂಗ್ ಅವರೊಂದಿಗೆ 106 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.
ಬೆತ್ ಮೂನಿಗೆ ಇದು ಶ್ರೀಲಂಕಾದಲ್ಲಿ ಮೊದಲ ಶತಕವಾಗಿದೆ. ಏಕೆಂದರೆ ಶ್ರೀಲಂಕಾ ನೆಲದಲ್ಲಿ ಮೊದಲ ಏಕದಿನ ಪಂದ್ಯವನ್ನಾಡಿದ ಮೂನಿ 2016 ರಲ್ಲಿ ಶ್ರೀಲಂಕಾದಲ್ಲಿ ಟಿ20 ಪಂದ್ಯವನ್ನು ಆಡಿದ್ದರು. ಇದು ಶ್ರೀಲಂಕಾ ನೆಲದಲ್ಲಿ ಮೂನಿ ಅವರ ಮೊದಲ ಶತಕ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಅವರ ಐದನೇ ಶತಕವಾಗಿದೆ. ಇದು ಪಾಕಿಸ್ತಾನ ವಿರುದ್ಧ ಮೂನಿ ಅವರ ಎರಡನೇ ಶತಕವಾಗಿದೆ. ಹಾಗೆಯೇ ಮೂನಿ ಭಾರತದ ವಿರುದ್ಧ ಎರಡು ಶತಕ ಮತ್ತು ನ್ಯೂಜಿಲೆಂಡ್ ವಿರುದ್ಧ ಒಂದು ಶತಕವನ್ನು ಬಾರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:15 pm, Wed, 8 October 25