IND vs AUS: ನಾಲ್ವರ ಆಗಮನ; ಕೊನೆಯ 2 ಟೆಸ್ಟ್​ ಪಂದ್ಯಕ್ಕೆ ಆಸೀಸ್ ತಂಡ ಪ್ರಕಟ

|

Updated on: Dec 20, 2024 | 3:25 PM

IND vs AUS: ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಉಳಿದ ಎರಡು ಪಂದ್ಯಗಳಿಗೆ ತನ್ನ ತಂಡವನ್ನು ಪ್ರಕಟಿಸಿದೆ. ನಾಥನ್ ಮೆಕ್‌ಸ್ವೀನಿಗೆ ಬದಲಾಗಿ ಸ್ಯಾಮ್ ಕಾನ್ಸ್ಟಾಂಟ್ಸ್ ಅವರನ್ನು ಆರಂಭಿಕನಾಗಿ ಆಯ್ಕೆ ಮಾಡಲಾಗಿದೆ. ಜೋಶ್ ಹೇಜಲ್ವುಡ್ ಅವರಿಗೆ ವಿಶ್ರಾಂತಿ ನೀಡಲಾಗಿದೆ ಮತ್ತು ಜೇ ರಿಚರ್ಡ್ಸನ್ ಮತ್ತು ಬ್ಯೂ ವೆಬ್ಸ್ಟರ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ.

IND vs AUS: ನಾಲ್ವರ ಆಗಮನ; ಕೊನೆಯ 2 ಟೆಸ್ಟ್​ ಪಂದ್ಯಕ್ಕೆ ಆಸೀಸ್ ತಂಡ ಪ್ರಕಟ
ಆಸ್ಟ್ರೇಲಿಯಾ ತಂಡ
Follow us on

ಟೀಂ ಇಂಡಿಯಾ ವಿರುದ್ಧದ ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಉಳಿದೆರಡು ಟೆಸ್ಟ್‌ ಪಂದ್ಯಗಳಿಗೆ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಈ 15 ಸದಸ್ಯರ ತಂಡಕ್ಕೆ ನಾಲ್ವರ ಆಗಮನವಾಗಿದ್ದರೆ, ಇಬ್ಬರಿಗೆ ತಂಡದಿಂದ ಗೇಟ್​ಪಾಸ್ ನೀಡಲಾಗಿದೆ. ತಂಡದಿಂದ ಹೊರಬಿದ್ದವರ ಪೈಕಿ ಒಬ್ಬ ಯುವ ಬ್ಯಾಟ್ಸ್‌ಮನ್ ಸೇರಿದ್ದರೆ, ಮತ್ತೊಬ್ಬ ಅನುಭವಿ ವೇಗದ ಬೌಲರ್​ ಸೇರಿದ್ದಾರೆ. ಮೊದಲ ಮೂರು ಟೆಸ್ಟ್‌ಗಳಿಗೆ ಉಸ್ಮಾನ್ ಖವಾಜಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದ ನಾಥನ್ ಮೆಕ್‌ಸ್ವೀನಿಗೆ ಕೋಕ್ ನೀಡಿದ್ದರೆ, ಗಾಬಾ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಅನುಭವಿ ವೇಗಿ ಜೋಶ್ ಹೇಜಲ್​ವುಡ್​ಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ತಂಡಕ್ಕೆ ಆಗಮನವಾದರ ಪೈಕಿ ಸ್ಯಾಮ್ ಕಾನ್ಸ್ಟಾಸ್, ಸೀನ್ ಅಬಾಟ್ ಹಾಗೂ ಜೇ ರಿಚರ್ಡ್‌ಸನ್, ಬ್ಯೂ ವೆಬ್ಸ್ಟರ್ ಸೇರಿದ್ದಾರೆ.

ಆರಂಭಿಕರಲ್ಲಿ ಬದಲಾವಣೆ

ನಾಥನ್ ಮೆಕ್‌ಸ್ವೀನಿ ಸ್ಥಾನಕ್ಕೆ ಆರಂಭಿಕನಾಗಿ ಆಯ್ಕೆಯಾಗಿರುವ ಸ್ಯಾಮ್ ಕಾನ್ಸ್ಟಾಸ್ ಮುಂದಿನ 2 ಟೆಸ್ಟ್‌ಗಳಿಗೆ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ವಾಸ್ತವವಾಗಿ ಇಡೀ ಸರಣಿಯಲ್ಲಿ ಆಸ್ಟ್ರೇಲಿಯಾಕ್ಕೆ ಓಪನಿಂಗ್ ದೊಡ್ಡ ಸಮಸ್ಯೆಯಾದೆ. ಇದುವರೆಗೆ ಆಡಿದ ಮೂರೂ ಪಂದ್ಯಗಳಲ್ಲಿ ಯಾವುದೇ ಆರಂಭಿಕ ಬ್ಯಾಟ್ಸ್​ಮನ್ 40ಕ್ಕೂ ಹೆಚ್ಚು ರನ್ ಗಳಿಸಲು ಸಾಧ್ಯವಾಗಿಲ್ಲ. ಜಸ್ಪ್ರೀತ್ ಬುಮ್ರಾ ಅವರ ಮುಂದೆ ಅನುಭವಿ ಉಸ್ಮಾನ್ ಖವಾಜಾ ಮತ್ತು 25 ವರ್ಷದ ನಾಥನ್ ಮೆಕ್‌ಸ್ವೀನಿ ಅವರು ನಿರಂತರವಾಗಿ ಹೋರಾಡುತ್ತಿರುವುದು ಕಂಡುಬಂದಿದೆ.

ಈ ಸರಣಿಯಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಮೆಕ್‌ಸ್ವೀನಿ ಇದುವರೆಗೆ ಆಡಿದ 6 ಇನ್ನಿಂಗ್ಸ್‌ಗಳಲ್ಲಿ 14.40 ಸರಾಸರಿಯಲ್ಲಿ 72 ರನ್ ಗಳಿಸಿದ್ದಾರೆ. ಆದರೆ ಆಡಿದ 6 ಇನ್ನಿಂಗ್ಸ್‌ಗಳಲ್ಲಿ 5 ರಲ್ಲಿ 10 ರನ್ ಗಡಿ ದಾಟಲು ಸಾಧ್ಯವಾಗಲಿಲ್ಲ. ಆದ್ದರಿಂದ ಆಸ್ಟ್ರೇಲಿಯನ್ ಆಡಳಿತವು ಬದಲಾವಣೆಗಳನ್ನು ಮಾಡಲು ನಿರ್ಧರಿಸಿದೆ. ಆ ಪ್ರಕಾರ ಸ್ಯಾಮ್ ಕಾನ್‌ಸ್ಟಂಟ್ಸ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಲಿದೆ.

ಬೌಲಿಂಗ್ ವಿಭಾಗದಲ್ಲಿ ಮೂವರು

ಇನ್ನು ಬೌಲಿಂಗ್‌ ವಿಭಾಗಕ್ಕೆ ಸೇರ್ಪಡೆಗೊಂಡಿರುವ ಜಾಯ್ ರಿಚರ್ಡ್ಸನ್ ಸುಮಾರು 2 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡಕ್ಕೆ ಮರಳಿದ್ದಾರೆ. ಅವರು ಕೊನೆಯ ಬಾರಿಗೆ 2021-22ರಲ್ಲಿ ಆಡಿದ ಆಶಸ್ ಸರಣಿಯಲ್ಲಿ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇವರಲ್ಲದೆ, ಬ್ಯೂ ವೆಬ್‌ಸ್ಟರ್ ಅವರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದಕ್ಕೂ ಮೊದಲು ಬ್ಯೂ ವೆಬ್‌ಸ್ಟರ್ ಅವರನ್ನು ಅಡಿಲೇಡ್ ಟೆಸ್ಟ್‌ಗಾಗಿ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ ಆ ಬಳಿಕ ಅವರನ್ನು ತಂಡದಿಂದ ಕೈಬಿಡಲಾಗಿತ್ತು.

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಸೀನ್ ಅಬಾಟ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಸ್ಯಾಮ್ ಕಾನ್ಸ್ಟಾಸ್, ಜ್ಯೆ ರಿಚರ್ಡ್ಸನ್, ಜೋಶ್ ಇಂಗ್ಲಿಷ್, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಮಿಚೆಲ್ ಸ್ಟಾರ್ಕ್, ಬ್ಯೂ ವೆಬ್‌ಸ್ಟರ್.

ಕೊನೆಯ ಎರಡು ಟೆಸ್ಟ್ ವಿವರ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮುಂದಿನ ಎರಡು ಟೆಸ್ಟ್ ಪಂದ್ಯಗಳು ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ನಡೆಯಲಿವೆ. ಬಾಕ್ಸಿಂಗ್ ಡೇ ಟೆಸ್ಟ್ ಡಿಸೆಂಬರ್ 26 ರಿಂದ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಆ ಬಳಿಕ ಹೊಸ ವರ್ಷದಲ್ಲಿ ಅಂದರೆ 2025 ರ ಜನವರಿಯಲ್ಲಿ ಕೊನೆಯ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ನಡೆಯಲಿದೆ. ಉಭಯ ದೇಶಗಳ ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿ ಸದ್ಯ 1-1ರಲ್ಲಿ ಸಮಬಲಗೊಂಡಿದೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು. ಆದರೆ ಅಡಿಲೇಡ್‌ನಲ್ಲಿ ಹಗಲು-ರಾತ್ರಿ ನಡೆದ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Fri, 20 December 24