IND vs AUS 4th Test: ದೊಡ್ಡ ಬದಲಾವಣೆಯೊಂದಿಗೆ 4, 5ನೇ ಟೆಸ್ಟ್ಗೆ ಆಸೀಸ್ ತಂಡ ಪ್ರಕಟ: 19 ವರ್ಷದ ಆಟಗಾರನಿಗೆ ಮಣೆ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮುಂದಿನ ಎರಡು ಟೆಸ್ಟ್ ಪಂದ್ಯಗಳು ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ನಡೆಯಲಿವೆ. ಬಾಕ್ಸಿಂಗ್ ಡೇ ಟೆಸ್ಟ್ ಡಿಸೆಂಬರ್ 26 ರಿಂದ ಮೆಲ್ಬೋರ್ನ್‌ನಲ್ಲಿ ಶುರುವಾಗಲಿದೆ. ಇದಕ್ಕೂ ಮುನ್ನ ಕ್ರಿಕೆಟ್ ಆಸ್ಟ್ರೇಲಿಯಾ ಉಳಿದ ಎರಡು ಟೆಸ್ಟ್‌ಗಳಿಗೆ ತಂಡವನ್ನು ಪ್ರಕಟಿಸಿದೆ. ಅಚ್ಚರಿ ಎಂಬಂತೆ 19 ವರ್ಷದ ಯುವ ಬ್ಯಾಟರ್ ಸ್ಯಾಮ್ ಕಾನ್ಸ್ಟಸ್ ಅವರನ್ನು ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ನಡೆಯಲಿರುವ ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತದ ವಿರುದ್ಧದ ಅಂತಿಮ ಎರಡು ಟೆಸ್ಟ್ ಪಂದ್ಯಗಳಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಉಸ್ಮಾನ್ ಖ್ವಾಜಾ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದ ನಾಥನ್ ಮೆಕ್‌ಸ್ವೀನಿ ಅವರನ್ನು ಕೈಬುಡಲಾಗಿದೆ. ಇವರ ಜಾಗಕ್ಕೆ 19 ವರ್ಷದ ಯುವ ಬ್ಯಾಟರ್ ಸ್ಯಾಮ್ ಕಾನ್ಸ್ಟಸ್ ಅವರನ್ನು ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಋತುವಿನಲ್ಲಿ ನೀಡಿದ ಅದ್ಭುತ ಪ್ರದರ್ಶನಕ್ಕಾಗಿ ಕೊಂಟಾಸ್ ಅವರಿಗೆ ಚೊಚ್ಚಲ ಕರೆ ಬಂದಿದೆ.
ಶೆಫೀಲ್ಡ್ ಶೀಲ್ಡ್‌ನಲ್ಲಿ ದಕ್ಷಿಣ ಆಸ್ಟ್ರೇಲಿಯಾ ವಿರುದ್ಧ ಬ್ಯಾಕ್-ಟು-ಬ್ಯಾಕ್ ಶತಕಗಳನ್ನು ಗಳಿಸಿ ಭರವಸೆ ಮೂಡಿಸಿದ್ದ ಸ್ಯಾಮ್ ಕಾನ್ಸ್ಟಸ್, ನಂತರ ಅಭ್ಯಾಸ ಪಂದ್ಯದಲ್ಲಿ ಭಾರತ A ವಿರುದ್ಧವೂ ಶತಕವನ್ನು ಸಿಡಿಸಿದ್ದರು. ಸಿಡ್ನಿ ಥಂಡರ್ಸ್ಗಾಗಿ ಬಿಗ್ ಬ್ಯಾಷ್ ಲೀಗ್ನ ಚೊಚ್ಚಲ ಪಂದ್ಯದಲ್ಲಿ 27-ಬಾಲ್ಗೆ 56 ರನ್ ಸಿಡಿಸಿದ್ದರು. ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ಕೂಡ 88 ರನ್ ಚಚ್ಚಿದ್ದರು. ಹೀಗಿದ್ದರೂ ಕಾನ್ಸ್ಟಸ್ ಎಂಸಿಜಿಯಲ್ಲಿ ಆಸ್ಟ್ರೇಲಿಯಾ ಪರ ಆಡುವುದು ಖಚಿತವಾಗಿಲ್ಲ. ಆಸ್ಟ್ರೇಲಿಯಾ ತಂಡದಲ್ಲಿ ಜೋಶ್ ಇಂಗ್ಲಿಸ್ ಬ್ಯಾಕ್-ಅಪ್ ಬ್ಯಾಟರ್ ಆಗಿ ಹೊಂದಿದ್ದು, ಇವರು ಮೊದಲ ಆಯ್ಕೆ ಆಗಲಿದ್ದಾರೆ.
ಅಂತೆಯೆ ತಂಡದಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಮಾಡಲಾಗಿದೆ. ಸ್ಟಾರ್ ಬೌಲರ್ ಜೋಶ್ ಹ್ಯಾಜಲ್ವುಡ್ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಗಾಯದಿಂದಾಗಿ ಅವರು ಈ ಸರಣಿಯಿಂದ ಔಟ್ ಆಗಿದ್ದಾರೆ. ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ಹ್ಯಾಜಲ್ವುಡ್ ಗಾಯಗೊಂಡಿದ್ದರು. ಇವರ ಬದಲಿಗೆ ಜೇ ರಿಚರ್ಡ್‌ಸನ್ ಆಸ್ಟ್ರೇಲಿಯ ತಂಡದಲ್ಲಿ ಸೇರ್ಪಡೆಗೊಂಡಿದ್ದಾರೆ. ಬಲಗೈ ವೇಗದ ಬೌಲರ್ ಜೇ ರಿಚರ್ಡ್ಸನ್ ಇದುವರೆಗೆ ಕೇವಲ 3 ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರಷ್ಟೆ. ಶ್ರೀಲಂಕಾ ಮತ್ತು ಇಂಗ್ಲೆಂಡ್ ತಂಡಗಳ ವಿರುದ್ಧ ಆಡಿದ 3 ಟೆಸ್ಟ್‌ಗಳಲ್ಲಿ ಒಟ್ಟು 11 ವಿಕೆಟ್‌ಗಳನ್ನು ತಮ್ಮ ಹೆಸರಿನಲ್ಲಿ ಪಡೆದಿದ್ದಾರೆ.
ಇದನ್ನೂ ಓದಿ: ಸಾಂಘಿಕ ಹೋರಾಟ; ವಿಂಡೀಸ್ ವಿರುದ್ಧ ಟಿ20 ಸರಣಿ ಗೆದ್ದ ಟೀಂ ಇಂಡಿಯಾ
ಭಾರತ ವಿರುದ್ಧದ ಕೊನೆಯ 2 ಟೆಸ್ಟ್‌ಗಳಿಗೆ ಆಸ್ಟ್ರೇಲಿಯಾ ತಂಡ:
ಪ್ಯಾಟ್ ಕಮ್ಮಿನ್ಸ್ (ನಾಯಕ), ಉಸ್ಮಾನ್ ಖ್ವಾಜಾ, ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಶಾನ್ ಅಬಾಟ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಸ್ಯಾಮ್ ಕಾನ್ಸ್ಟಸ್, ಜ್ಯೆ ರಿಚರ್ಡ್ಸನ್, ಜೋಶ್ ಇಂಗ್ಲಿಷ್, ಮಾರ್ನಸ್ ಲ್ಯಾಬುಸ್ಚಾಗ್ನೆ, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಮಿಚೆಲ್ ಸ್ಟಾರ್ಕ್, ಬ್ಯೂ ವೆಬ್‌ಸ್ಟರ್.
ಬಾರ್ಡರ್ -ಗವಾಸ್ಕರ್ ಟ್ರೋಫಿ ಇಲ್ಲಿಯವರೆಗೆ ರೋಚಕವಾಗಿದೆ. ಪರ್ತ್‌ನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಭಾರತ ಅಬ್ಬರದ ಜಯದೊಂದಿಗೆ ಸರಣಿಯನ್ನು ಆರಂಭಿಸಿತು, ಆಸ್ಟ್ರೇಲಿಯಾವನ್ನು 295 ರನ್‌ಗಳಿಂದ ಸೋಲಿಸಿತು. ಆದರೆ, ಎರಡನೇ ಟೆಸ್ಟ್ನಲ್ಲಿ ಕಮ್ಬ್ಯಾಕ್ ಆಸ್ಟ್ರೇಲಿಯ ಅಡಿಲೇಡ್‌ನಲ್ಲಿ 10 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಸರಣಿಯಲ್ಲಿ ಸಮಬಲ ಸಾಧಿಸಿತು. ಗಬ್ಬಾದಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲೂ ಆತಿಥೇಯರು ಪ್ರಾಬಲ್ಯ ಸಾಧಿಸುವಲ್ಲಿದ್ದರು. ಆದರೆ, ವರುಣನ ಕೃಪೆಯಿಂದ ಪಂದ್ಯ ಡ್ರಾ ಆಯಿತು. ಸದ್ಯ 1-1ರಲ್ಲಿ ಸಮಬಲ ಸಾಧಿಸಿರುವ ತಂಡಗಳು 4ನೇ ಟೆಸ್ಟ್‌ಗಾಗಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ತೆರಳಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ