
ಎಡ್ಜ್‌ಬಾಸ್ಟನ್ ಟೆಸ್ಟ್ ಆಡಿ ಮುಗಿಸಿರುವ ಇಂಗ್ಲೆಂಡ್ ಹಾಗೂ ಟೀಂ ಇಂಡಿಯಾ (India vs England) ಇದೀಗ ಲಾರ್ಡ್ಸ್‌ನಲ್ಲಿ (Lords Test) ನಡೆಯಲ್ಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ತನ್ನ ತಯಾರಿ ಆರಂಭಿಸಿವೆ. ಇದಕ್ಕಾಗಿ ಆತಿಥೇಯ ಇಂಗ್ಲೆಂಡ್ ಕೂಡ ತನ್ನ 16 ಸದಸ್ಯರ ತಂಡವನ್ನು ಸಹ ಪ್ರಕಟಿಸಿದೆ. ಈ ತಂಡಕ್ಕೆ ಮತ್ತೊಬ್ಬ ವೇಗಿ ಗಸ್ ಅಟ್ಕಿನ್ಸನ್ ಅವರನ್ನು ಹೊಸದಾಗಿ ಸೇರಿಸಿಕೊಳ್ಳಲಾಗಿದೆ. ಇದನ್ನು ಬಿಟ್ಟರೆ ತಂಡದಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ. ಆದಾಗ್ಯೂ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆಗಳಾಗುವುದು ಖಚಿತ ಎನ್ನಬಹುದು. ಅದರಲ್ಲೂ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಏಕೆಂದರೆ ಆಡಿರುವ ಎರಡೂ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ವೇಗಿಗಳು ಪ್ರಭಾವ ಬೀರುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಗಳಾಗುವುದನ್ನು ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ (Brendon McCullum) ಧೃಡಪಡಿಸಿದ್ದಾರೆ.
ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಜೋಫ್ರಾ ಆರ್ಚರ್ ಇಂಗ್ಲೆಂಡ್‌ನ ಪ್ಲೇಯಿಂಗ್ 11 ಭಾಗವಾಗಲಿದ್ದಾರೆ ಎಂದು ಇಂಗ್ಲೆಂಡ್ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ದೃಢಪಡಿಸಿದ್ದಾರೆ. ಆರ್ಚರ್ ಆಗಮನವು ಇಂಗ್ಲಿಷ್ ಬೌಲಿಂಗ್ ದಾಳಿಯನ್ನು ಬಹಳಷ್ಟು ಬಲಪಡಿಸುತ್ತದೆ. ಅಲ್ಲದೆ ಇಂಗ್ಲೆಂಡ್ನಲ್ಲಿ ಆರ್ಚರ್ ಅವರ ಪ್ರದರ್ಶನವು ಅಮೋಘವಾಗಿದ್ದು, ಇದುವರೆಗೆ ಒಟ್ಟು 8 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 30 ವಿಕೆಟ್‌ಗಳನ್ನು ಪಡೆದಿದ್ದಾರೆ. ಆರ್ಚರ್ ಒಂದು ಇನ್ನಿಂಗ್ಸ್‌ನಲ್ಲಿ ಎರಡು ಬಾರಿ 5 ವಿಕೆಟ್‌ಗಳನ್ನು ಪಡೆದ ಸಾಧನೆಯನ್ನು ಮಾಡಿದ್ದಾರೆ. ಹಾಗೆಯೇ ಭಾರತದ ವಿರುದ್ಧ 2 ಟೆಸ್ಟ್‌ಗಳನ್ನು ಆಡಿರುವ ಆರ್ಚರ್ 4 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.
ವಾಸ್ತವವಾಗಿ ಎಡ್ಜ್ಬಾಸ್ಟನ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲೇ ಆರ್ಚರ್ ಆಡಬೇಕಾಗಿತ್ತು. ಇದಕ್ಕಾಗಿ ಅವರನ್ನು ತಂಡಕ್ಕೂ ಆಯ್ಕೆ ಮಾಡಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಕೌಟುಂಬಿಕ ಕಾರಣ ನೀಡಿ ಆರ್ಚರ್ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಆರ್ಚರ್ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ಬೌಲಿಂಗ್ ವಿಭಾಗ ಮೊದಲ ಟೆಸ್ಟ್ ಪಂದ್ಯದಂತೆ ಎರಡನೇ ಟೆಸ್ಟ್ ಪಂದ್ಯದಲ್ಲೂ ಕಳಪೆ ಪ್ರದರ್ಶನ ನೀಡಿತ್ತು. ಹೀಗಾಗಿ ಇಂಗ್ಲೆಂಡ್ ತಂಡಕ್ಕೆ ಪಂದ್ಯವನ್ನು ಗೆಲ್ಲುವುದಕ್ಕಾಗಲಿ ಅಥವಾ ಡ್ರಾ ಮಾಡಿಕೊಳ್ಳುವುದಕ್ಕಾಗಲಿ ಸಾಧ್ಯವಾಗಲಿಲ್ಲ. ಇದೀಗ ಆರ್ಚರ್ ಆಗಮನದಿಂದ ಇಂಗ್ಲೆಂಡ್ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಯಾಗಲಿದ್ದು, ಯಾವ ಆಟಗಾರನನ್ನು ತಂಡದಿಂದ ಕೈಬಿಡಲಾಗುತ್ತದೆ ಎಂಬುದು ಇಷ್ಟರಲ್ಲೇ ಗೊತ್ತಾಗಲಿದೆ.
IND vs ENG: 200 ರನ್ ಹೊಡಿತ್ತೀನಿ ಎಂದಿದ್ದ ವೈಭವ್ ಕೊನೆಯ ಪಂದ್ಯದಲ್ಲಿ ಹೊಡೆದಿದ್ದೇಷ್ಟು?
ಲಾರ್ಡ್ಸ್ ಟೆಸ್ಟ್‌ಗೆ ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಓಲಿ ಪೋಪ್, ಜೋ ರೂಟ್, ಬೆನ್ ಡಕೆಟ್, ಜ್ಯಾಕ್ ಕ್ರಾಲಿ, ಹ್ಯಾರಿ ಬ್ರೂಕ್, ಜೇಮೀ ಸ್ಮಿತ್, ಜಾಕೋಬ್ ಬೆಥೆಲ್, ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ಬ್ರೈಡನ್ ಕಾರ್ಸೆ, ಶೋಯೆಬ್ ಬಶೀರ್, ಗಸ್ ಅಟ್ಕಿನ್ಸನ್, ಜೋಶ್ ಟಂಗ್, ಜೇಮೀ ಓವರ್ಟನ್, ಸ್ಯಾಮ್ ಕುಕ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ