AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಮೊದಲ 2 ಎಸೆತಗಳು; ವಿಡಿಯೋ

Canada vs Scotland: ಕೆನಡಾ ಮತ್ತು ಸ್ಕಾಟ್ಲೆಂಡ್ ನಡುವಿನ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಲೀಗ್ 2 ಪಂದ್ಯದಲ್ಲಿ ಅಪರೂಪದ ಘಟನೆ ನಡೆಯಿತು. ಕೆನಡಾ ತಂಡ ತನ್ನ ಇನ್ನಿಂಗ್ಸ್‌ನ ಮೊದಲ ಎರಡು ಎಸೆತಗಳಲ್ಲಿ ಆರಂಭಿಕರಿಬ್ಬರ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದು ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಭವಿಸಿದ್ದು. ಸ್ಕಾಟ್ಲೆಂಡ್ ಈ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿತು.

ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಮೊದಲ 2 ಎಸೆತಗಳು; ವಿಡಿಯೋ
Scotland Vs Canada
ಪೃಥ್ವಿಶಂಕರ
|

Updated on: Sep 01, 2025 | 6:19 PM

Share

ಕೆನಡಾ ಹಾಗೂ ಸ್ಕಾಟ್ಲೆಂಡ್ (Canada vs Scotland) ನಡುವೆ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಲೀಗ್ 2 ರ 81 ನೇ ಪಂದ್ಯ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು. ಉಭಯ ತಂಡಗಳ ನಡುವೆ ಕಿಂಗ್ ಸಿಟಿಯ ಮೇಪಲ್ ಲೀಫ್ ನಾರ್ತ್-ವೆಸ್ಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ಕೆನಡಾ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಅದ್ಭುತ ಜಯ ಸಾಧಿಸಿತು. ಇದೇ ಪಂದ್ಯದಲ್ಲಿ ಅಪರೂಪದಲ್ಲಿ ಅಪರೂಪವಾದ ಘಟನೆಯೊಂದು ಸಂಭವಿಸಿತು. ವಾಸ್ತವವಾಗಿ ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಕೆನಡಾ ತಂಡಕ್ಕೆ ಇನ್ನಿಂಗ್ಸ್‌ನ ಮೊದಲ ಎರಡು ಎಸೆತಗಳಲ್ಲಿ ಆಘಾತ ಎದುರಾಯಿತು.

ಹಿಂದೆಂದೂ ನಡೆದಿರಲಿಲ್ಲ

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆನಡಾ ತಂಡವು ತನ್ನ ಇನ್ನಿಂಗ್ಸ್‌ನ ಮೊದಲ ಎರಡು ಎಸೆತಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರನ್ನೂ ಕಳೆದುಕೊಂಡಿತು. ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ತಂಡದ ಆರಂಭಿಕರಿಬ್ಬರು ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿದ್ದು, ಇದೇ ಮೊದಲು. ಅಷ್ಟಕ್ಕೂ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇನ್ನಿಂಗ್ಸ್‌ನ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್‌ಗಳು ಬೀಳುವುದನ್ನು ನಾವು ಹಲವು ಬಾರಿ ನೋಡಿದ್ದೇವೆ. ಆದರೆ ಆರಂಭಿಕರು ಈ ರೀತಿ ಔಟಾದ ಘಟನೆಗಳು ಈ ಹಿಂದೆ ನಡೆದಿರಲಿಲ್ಲ.

ಪಂದ್ಯದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಬ್ರಾಡ್ ಕರಿ ಕೆನಡಾದ ಆರಂಭಿಕ ಆಟಗಾರ ಅಲಿ ನದೀಮ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಇದಾದ ನಂತರ ಮೂರನೇ ಕ್ರಮಾಂಕದಲ್ಲಿ ಪರ್ಗತ್ ಸಿಂಗ್ ಬ್ಯಾಟಿಂಗ್ ಮಾಡಲು ಬಂದರು. ಅದೇ ಸಮಯದಲ್ಲಿ, ಮತ್ತೊಬ್ಬ ಆರಂಭಿಕ ಆಟಗಾರ ಯುವರಾಜ್ ಸಮ್ರಾ ನಾನ್-ಸ್ಟ್ರೈಕ್‌ನಲ್ಲಿ ನಿಂತಿದ್ದರು. ಆದರೆ ಪಂದ್ಯದ ಎರಡನೇ ಎಸೆತದಲ್ಲಿ ಅವರು ರನೌಟ್ ಆದರು. ಇದರಿಂದಾಗಿ ಕೆನಡಾ ತನ್ನ ಇಬ್ಬರೂ ಆರಂಭಿಕ ಆಟಗಾರರನ್ನು ಮೊದಲ ಎರಡು ಎಸೆತಗಳಲ್ಲಿ ಕಳೆದುಕೊಂಡಿತು. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

View this post on Instagram

A post shared by FanCode (@fancode)

ಸ್ಕಾಟ್ಲೆಂಡ್‌ಗೆ ಭರ್ಜರಿ ಗೆಲುವು

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ ಸ್ಕಾಟ್ಲೆಂಡ್‌ನ ವೇಗಿ ಬ್ರಾಡ್ ಕರಿ ದಾಳಿಗೆ ನಲುಗಿದ ಕೆನಡಾ 11 ಓವರ್‌ಗಳಲ್ಲಿ ಕೇವಲ 18 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಆದಾಗ್ಯೂ, ಏಕಾಂಗಿ ಹೋರಾಟ ನಡೆಸಿದ ಶ್ರೇಯಸ್ ಮೊವ್ವಾ 60 ರನ್‌ಗಳ ಇನ್ನಿಂಗ್ಸ್ ಆಡಿದರು. ಇದರಿಂದಾಗಿ ಕೆನಡಾ ತಂಡವು 48.1 ಓವರ್‌ಗಳಲ್ಲಿ 184 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಸ್ಕಾಟ್ಲೆಂಡ್ ಪರ ಬ್ರಾಡ್ ಕರಿ ಅತಿ ಹೆಚ್ಚು 4 ವಿಕೆಟ್‌ಗಳನ್ನು ಪಡೆದರು. ಮತ್ತೊಂದೆಡೆ, ಸ್ಕಾಟ್ಲೆಂಡ್ 41.5 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಈ ಗುರಿಯನ್ನು ಸಾಧಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ