ಮೆಲ್ಬೋರ್ನ್ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ. ಪರ್ತ್ ಟೆಸ್ಟ್ಗೆ ಅಲಭ್ಯರಾಗಿದ್ದ ಹಿಟ್ಮ್ಯಾನ್ ಸ್ಥಾನದಲ್ಲಿ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಿದ್ದರು. ಅಲ್ಲದೆ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದೇ ಕಾರಣದಿಂದಾಗಿ ರೋಹಿತ್ ಶರ್ಮಾ ಅಡಿಲೇಡ್ ಮತ್ತು ಬ್ರಿಸ್ಬೇನ್ ಟೆಸ್ಟ್ಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು.
ಇದೀಗ ಮೆಲ್ಬೋರ್ನ್ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತೆ ಓಪನರ್ ಆಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಹಾಗೂ ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ.
ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿದರೆ ಕೆಎಲ್ ರಾಹುಲ್ ಅವರ ಸ್ಥಾನ ಪಲ್ಲಟವಾಗಲಿದೆ. ಅಂದರೆ ಈ ಹಿಂದಿನಂತೆ ಅವರು ಮತ್ತೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ.
ಇತ್ತ ಅತ್ಯುತ್ತಮ ಫಾರ್ಮ್ನಲ್ಲಿರುವ ಕೆಎಲ್ ರಾಹುಲ್ ಮೂರು ಪಂದ್ಯಗಳಿಂದ 235 ರನ್ ಕಲೆಹಾಕಿದ್ದಾರೆ. ಈ ಮೂಲಕ ಈ ಬಾರಿಯ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದೀಗ ಕಳಪೆ ಫಾರ್ಮ್ನಲ್ಲಿರುವ ರೋಹಿತ್ ಶರ್ಮಾಗಾಗಿ ಕೆಎಲ್ ರಾಹುಲ್ ತಮ್ಮ ಕ್ರಮಾಂಕ ಬದಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ರಾಹುಲ್ ಅವರ ಫಾರ್ಮ್ ಮೇಲೆ ಪರಿಣಾಮ ಬೀರಲಿದೆಯಾ ಕಾದು ನೋಡಬೇಕಿದೆ.
ಕ್ರಿಸ್ಮಸ್ ಹಬ್ಬದ ಮರುದಿನ ನಡೆಯುವ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಕ್ರಿಸ್ಮಸ್ ದಿನದಂದು ಸಿಗುವ ಗಿಫ್ಟ್ ಬಾಕ್ಸ್ಗಳನ್ನು ಮರುದಿನ ಅಂದರೆ, ಡಿಸೆಂಬರ್ 26 ರಂದು ಓಪನ್ ಮಾಡಲಾಗುತ್ತದೆ. ಇದೇ ಕಾರಣದಿಂದ ಬಾಕ್ಸ್ ಓಪನ್ ಮಾಡುವ ದಿನವನ್ನು ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ. ಇದೇ ದಿನ ಆಯೋಜಿಸಲಾಗುವ ಟೆಸ್ಟ್ ಪಂದ್ಯಗಳನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: 22ನೇ ವಯಸ್ಸಿನಲ್ಲೇ ಸೈಮ್ ಅಯ್ಯೂಬ್ ಅಬ್ಬರ: ಸಚಿನ್, ವಿರಾಟ್ ಕೊಹ್ಲಿ ದಾಖಲೆ ಶೇಕಿಂಗ್
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಭಾರತೀಯ ಕಾಲಮಾನ ಮುಂಜಾನೆ 5 ಗಂಟೆಯಿಂದ ಶುರುವಾಗಲಿದೆ. ಮೊದಲ ಸೆಷನ್ 5 ಗಂಟೆಯಿಂದ ಆರಂಭವಾಗಲಿದ್ದು, 7 ಗಂಟೆಯವರೆಗೆ ಮುಂದುವರೆಯಲಿದೆ. ಇನ್ನು ದ್ವಿತೀಯ ಸೆಷನ್ 7.40 am ರಿಂದ 9.40 am IST ವರೆಗೆ ನಡೆಯಲಿದೆ. ಹಾಗೆಯೇ 10 am ಗಂಟೆಗೆ ತೃತೀಯ ಸೆಷನ್ ಆರಂಭವಾಗಲಿದ್ದು, 12 pm IST ವರೆಗೆ ಮುಂದುವೆರೆಯಲಿದೆ.