ಬಲಗೈ ಬೌಲರ್​​ಗಳ ಮುಂದೆ ಮುಗ್ಗರಿಸುತ್ತಿರುವ ರೋಹಿತ್ ಶರ್ಮಾ

India vs Australia: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಹಾದಿಯನ್ನು ಸುಗಮಗೊಳಿಸಲಿದೆ. ಹೀಗಾಗಿ ಈ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಕಡೆಯಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ಬಲಗೈ ಬೌಲರ್​​ಗಳ ಮುಂದೆ ಮುಗ್ಗರಿಸುತ್ತಿರುವ ರೋಹಿತ್ ಶರ್ಮಾ
Rohit Sharma
Follow us
ಝಾಹಿರ್ ಯೂಸುಫ್
|

Updated on: Dec 22, 2024 | 2:23 PM

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್​ಗಳ ಅಮೋಘ ಗೆಲುವು ದಾಖಲಿಸಿತ್ತು. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲೇ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದ್ದ ಟೀಮ್ ಇಂಡಿಯಾ ದ್ವಿತೀಯ ಪಂದ್ಯದಲ್ಲಿ ಮುಗ್ಗರಿಸಿತ್ತು. ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 10 ವಿಕೆಟ್​ಗಳ ಜಯ ಸಾಧಿಸಿದೆ. ಇನ್ನು 3ನೇ ಪಂದ್ಯವು ಡ್ರಾನಲ್ಲಿ ಅಂತ್ಯ ಕಂಡಿದೆ. ಇದರೊಂದಿಗೆ ಸರಣಿಯು 1-1 ಅಂತರದಿಂದ ಮುಂದುವರೆದಿದೆ.

ಇದೀಗ ಉಳಿದ ಎರಡು ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್​ಗೇರಲಿದೆ. ಹೀಗಾಗಿ ಮೆಲ್ಬೋರ್ನ್​ನಲ್ಲಿ ನಡೆಯಲಿರುವ 4ನೇ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಆದರೆ ಈ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡದ ಅತೀ ದೊಡ್ಡ ಚಿಂತೆ ಎಂದರೆ ರೋಹಿತ್ ಶರ್ಮಾ ಅವರ ಕಳಪೆ ಫಾರ್ಮ್.

ಅಡಿಲೇಡ್ ಮತ್ತು ಬ್ರಿಸ್ಬೇನ್​ನಲ್ಲಿ ಆಡಿದ ಮೂರು ಇನಿಂಗ್ಸ್​ಗಳಲ್ಲೂ ರೋಹಿತ್ ಶರ್ಮಾ ಅವರ ಬ್ಯಾಟ್ ಸದ್ದು ಮಾಡಿಲ್ಲ. 2ನೇ ಟೆಸ್ಟ್​​ನಲ್ಲಿ ಕ್ರಮವಾಗಿ 3 ಮತ್ತು 6 ರನ್​ಗಳಿಸಿದ್ದ ಹಿಟ್​ಮ್ಯಾನ್ 3ನೇ ಟೆಸ್ಟ್​ನ ಮೊದಲ ಇನಿಂಗ್ಸ್​ನಲ್ಲಿ 10 ರನ್ ಬಾರಿಸಿ ಔಟಾಗಿದ್ದಾರೆ. ಈ ಮೂರೂ ಇನಿಂಗ್ಸ್ ಗಳಲ್ಲಿ ವೇಗದ ಬೌಲರ್ ಗಳಿಗೆ ಕ್ಯಾಚ್ ನೀಡಿ ಪೆವಿಲಿಯನ್​ಗೆ ಮರಳಿರುವುದೇ ಅಚ್ಚರಿ.

ಅಂದರೆ ಟೀಮ್ ಇಂಡಿಯಾ ನಾಯಕ ಕೆಲವು ಸಮಯದಿಂದ ಬಲಗೈ ವೇಗದ ಬೌಲರ್‌ಗಳನ್ನು ಎದುರಿಸಲು ತಡಕಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು. ಕಳೆದ 12 ಇನ್ನಿಂಗ್ಸ್‌ಗಳಲ್ಲಿ ಬಲಗೈ ವೇಗದ ಬೌಲರ್‌ಗಳ ವಿರುದ್ಧ ರೋಹಿತ್ ಶರ್ಮಾ ಕೇವಲ 106 ರನ್ ಗಳಿಸಿದ್ದಾರೆ. ಇದೇ ವೇಳೆ 9 ಬಾರಿ ಬಲಗೈ ವೇಗಿಗಳಿಗೆ ವಿಕೆಟ್ ಒಪ್ಪಿಸಿದ್ದಾರೆ.

ಇನ್ನು ಕುತೂಹಲಕಾರಿ ವಿಷಯ ಎಂದರೆ ಕಳೆದ 12 ಇನಿಂಗ್ಸ್​ಗಳಲ್ಲಿ ರೋಹಿತ್ ಶರ್ಮಾ ಬಲಗೈ ವೇಗಿಗಳ ವಿರುದ್ಧ ಕೇವಲ 11.8ರ ಸರಾಸರಿಯಲ್ಲಿ ರನ್​ಗಳಿಸಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಸರಾಸರಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಈ ವರ್ಷ ಅವರ ಸರಾಸರಿ ಕೇವಲ 26.39 ರನ್ ಮಾತ್ರ.

ಇದೀಗ ಟೀಮ್ ಇಂಡಿಯಾ ಮೆಲ್ಬೋರ್ನ್ ಮೈದಾನದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಇತ್ತ ನಾಯಕ ರೋಹಿತ್ ಶರ್ಮಾ ಕಳಪೆ ಫಾರ್ಮ್​ನಲ್ಲಿದ್ದರೆ, ಅತ್ತ ಮೆಲ್ಬೋರ್ನ್ ಮೈದಾನದಲ್ಲಿ ಆಸ್ಟ್ರೇಲಿಯಾ ಬೌಲರ್​​ಗಳು ಉತ್ತಮ ದಾಳಿ ಸಂಘಟಿಸಿದ ದಾಖಲೆಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: ಭಾರತ vs ಪಾಕಿಸ್ತಾನ್ ಮುಖಾಮುಖಿಗೆ ಮುಹೂರ್ತ ಫಿಕ್ಸ್

ಈ ಮೈದಾನದಲ್ಲಿ ನಾಥನ್ ಲಿಯಾನ್ 24 ಇನ್ನಿಂಗ್ಸ್‌ಗಳಲ್ಲಿ 45 ವಿಕೆಟ್ ಪಡೆದರೆ, ಪ್ಯಾಟ್ ಕಮ್ಮಿನ್ಸ್ 35 ವಿಕೆಟ್, ಮಿಚೆಲ್ ಸ್ಟಾರ್ಕ್ 25 ಮತ್ತು ಸ್ಕಾಟ್ ಬೋಲ್ಯಾಂಡ್ 10 ವಿಕೆಟ್ ಪಡೆದಿದ್ದಾರೆ. ಇಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ಸ್ಕಾಟ್ ಬೋಲ್ಯಾಂಡ್ ಬಲಗೈ ವೇಗಿಗಳು. ಇವರೊಂದಿಗೆ ಮಿಚೆಲ್ ಸ್ಟಾರ್ಕ್ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಮೆಲ್ಬೋರ್ನ್​ನಲ್ಲೂ ರೋಹಿತ್ ಶರ್ಮಾಗೆ ಬಲಗೈ ವೇಗಿಗಳಿಂದ ದೊಡ್ಡ ಸವಾಲು ಎದುರಾಗುವುದರಲ್ಲಿ ಡೌಟೇ ಇಲ್ಲ.