IND vs AUS: ಇಬ್ಬರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯಲು ಟೀಮ್ ಇಂಡಿಯಾ ಪ್ಲ್ಯಾನ್
India vs Australia: ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸಜ್ಜಾಗಿದೆ. ಮೆಲ್ಬೋರ್ನ್ನ ಎಂಸಿಜಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಗುರುವಾರದಿಂದ (ಡಿ.26) ಶುರುವಾಗಲಿದ್ದು, ಈ ಮ್ಯಾಚ್ನಲ್ಲಿ ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ. ಏಕೆಂದರೆ ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ, ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿದೆ. ಇನ್ನು ಮೂರನೇ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ.
ಆಸ್ಟ್ರೇಲಿಯಾ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಬ್ಬರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಮೆಲ್ಬೋರ್ನ್ನ ಎಂಸಿಜಿ ಮೈದಾನದ ಪಿಚ್ ಸ್ಪಿನ್ನರ್ಗಳಿಗೆ ನೆರವಾಗುವ ನಿರೀಕ್ಷೆಯಿದ್ದು, ಹೀಗಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳಲು ಚಿಂತಿಸಲಾಗಿದೆ.
ಅದರಂತೆ ನಾಲ್ಕನೇ ಟೆಸ್ಟ್ ಪಂದ್ಯದಿಂದ ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಕೈ ಬಿಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಅವರ ಬದಲಿಗೆ ಸ್ಪಿನ್ ಆಲ್ರೌಂಡರ್ ಆಗಿ ವಾಷಿಂಗ್ಟನ್ ಸುಂದರ್ಗೆ ಚಾನ್ಸ್ ನೀಡಲಿದ್ದಾರೆ.
ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಕಣಕ್ಕಿಳಿದಿದ್ದರು. ಆದರೆ ಅಡಿಲೇಡ್ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಅವರ ಬದಲಿಗೆ ರವಿಚಂದ್ರನ್ ಅಶ್ವಿನ್ ಅವರಿಗೆ ಅವಕಾಶ ನೀಡಲಾಗಿತ್ತು.
ಇನ್ನು ಬ್ರಿಸ್ಬೇನ್ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಸ್ಪಿನ್ ಆಲ್ರೌಂಡರ್ ಆಗಿ ರವೀಂದ್ರ ಜಡೇಜಾ ಕಾಣಿಸಿಕೊಂಡಿದ್ದರು. ಇದೀಗ ಮೆಲ್ಬೋರ್ನ್ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಜೊತೆ ವಾಷಿಂಗ್ಟನ್ ಸುಂದರ್ ಅವರನ್ನು ಸಹ ಕಣಕ್ಕಿಳಿಸಲು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಪ್ಲ್ಯಾನ್ ರೂಪಿಸಿದ್ದಾರೆ.
ಅದರಂತೆ ಎಂಸಿಜಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜಾ ಸ್ಪಿನ್ ಆಲ್ರೌಂಡರ್ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಅತ್ತ ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ ಮುಂದುವರೆಯಲಿದ್ದಾರೆ.
ಮತ್ತೊಂದೆಡೆ ಈ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡವು ತನ್ನ ಪ್ಲೇಯಿಂಗ್ ಇಲೆವೆನ್ ಅನ್ನು ಪ್ರಕಟಿಸಿದೆ. ಈ ಇಲೆವೆನ್ನಲ್ಲಿ ಸ್ಪಿನ್ನರ್ ಆಗಿ ನಾಥನ್ ಲಿಯಾನ್ ಅವರನ್ನು ಆಯ್ಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಕೂಡ ಇಬ್ಬರು ಸ್ಪಿನ್ನರ್ಗಳನ್ನು ಆಡಿಸಲು ಮುಂದಾಗಿರುವುದು ವಿಶೇಷ.
ಹೀಗಾಗಿ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆಲ್ರೌಂಡರ್ಗಳಾಗಿ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ಬದಲಾವಣೆಯ ಹೊರತಾಗಿ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಸುದ್ದಿ ಕೂಡ ಇದೆ.
ಇದನ್ನೂ ಓದಿ: 22ನೇ ವಯಸ್ಸಿನಲ್ಲೇ ಸೈಮ್ ಅಯ್ಯೂಬ್ ಅಬ್ಬರ: ಸಚಿನ್, ವಿರಾಟ್ ಕೊಹ್ಲಿ ದಾಖಲೆ ಶೇಕಿಂಗ್
ಒಂದು ವೇಳೆ ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿದರೆ ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಬೇಕಾಗುತ್ತದೆ. ಹೀಗಾಗಿ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ತರ ಬದಲಾವಣೆ ಕಂಡು ಬರುವ ಸಾಧ್ಯತೆ ಹೆಚ್ಚಿದೆ.