- Kannada News Photo gallery Cricket photos The Champions Trophy schedule raises concerns for Team India
ಟೀಮ್ ಇಂಡಿಯಾದ ಚಿಂತೆ ಹೆಚ್ಚಿಸಿದ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ
Champions Trophy 2025: ಚಾಂಪಿಯನ್ಸ್ ಟ್ರೋಫಿ 2025 ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಇಲ್ಲಿ ಟೀಮ್ ಇಂಡಿಯಾದ ಪಂದ್ಯಗಳು ದುಬೈನಲ್ಲಿ ನಡೆದರೆ, ಉಳಿದ ಮ್ಯಾಚ್ಗಳು ಪಾಕಿಸ್ತಾನದಲ್ಲಿ ಜರುಗಲಿದೆ. ಆದರೆ ಭಾರತ ತಂಡದ ಪಂದ್ಯಗಳಿಗೆ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ ಅನ್ನು ಆಯ್ಕೆ ಮಾಡಿರುವುದೇ ಈಗ ಹೊಸ ಚಿಂತೆಗೆ ಕಾರಣವಾಗಿದೆ. ಏಕೆಂದರೆ ಈ ಮೈದಾನದಲ್ಲಿ ಗೆಲ್ಲಬೇಕಿದ್ದರೆ ಅದೃಷ್ಟ ಕೂಡ ಕೈ ಹಿಡಿಯಬೇಕಾಗುತ್ತದೆ.
Updated on: Dec 25, 2024 | 6:30 AM

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿ ಪ್ರಕಟಗೊಂಡಿದೆ. 8 ತಂಡಗಳ ನಡುವಣ ಈ ಕದನವು ಫೆಬ್ರವರಿ 19 ರಿಂದ ಶುರುವಾಗಲಿದೆ. ಹಾಗೆಯೇ ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ. ಇನ್ನು ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.

ಹಾಗೆಯೇ ಟೀಮ್ ಇಂಡಿಯಾ ಫೆಬ್ರವರಿ 20 ರಂದು ಕಣಕ್ಕಿಳಿಯುವ ಮೂಲಕ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ. ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯಕ್ಕೆ ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಇನ್ನು ಟೀಮ್ ಇಂಡಿಯಾದ 2ನೇ ಎದುರಾಳಿ ಪಾಕಿಸ್ತಾನ್. ಹೈವೋಲ್ಟೇಜ್ ಪೈಪೋಟಿಗೆ ಸಾಕ್ಷಿಯಾಗಲಿರುವ ಈ ಪಂದ್ಯವು ಫೆಬ್ರವರಿ 23 ರಂದು ನಡೆಯಲಿದೆ. ಈ ಪಂದ್ಯ ಕೂಡ ದುಬೈ ಅಂತಾರಾಷ್ಟ್ಟೀಯ ಸ್ಟೇಡಿಯಂನಲ್ಲೇ ಜರುಗಲಿದೆ.

ಹಾಗೆಯೇ ಭಾರತ ತಂಡವು ತನ್ನ ಕೊನೆಯ ಲೀಗ್ ಮ್ಯಾಚ್ನಲ್ಲಿ ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಮಾರ್ಚ್ 2 ರಂದು ದುಬೈನಲ್ಲೇ ನಡೆಯಲಿದೆ. ಅಂದರೆ ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾ ಮೂರು ಪಂದ್ಯಗಳನ್ನು ದುಬೈನಲ್ಲೇ ಆಡಲಿದೆ.

ಅತ್ತ ಭಾರತ ತಂಡವು ದುಬೈನಲ್ಲಿ ಪಂದ್ಯವಾಡಬೇಕಿರುವುದೇ ಈಗ ದೊಡ್ಡ ಚಿಂತೆ. ಏಕೆಂದರೆ ದುಬೈ ಸ್ಟೇಡಿಯಂನಲ್ಲಿ ಟಾಸ್ ನಿರ್ಣಾಯಕ. ಈ ಮೈದಾನದಲ್ಲಿ ಟಾಸ್ ಗೆಲ್ಲುವ ತಂಡ ಮ್ಯಾಚ್ ಗೆಲ್ತಾರೆ ಎಂಬ ಪ್ರತೀತಿ ಇದೆ. ಇದನ್ನೇ ಅಂಕಿ ಅಂಶಗಳು ಕೂಡ ಒತ್ತಿ ಹೇಳುತ್ತಿವೆ. ಇಲ್ಲಿ ಆಡಲಾದ 33 ಏಕದಿನ ಪಂದ್ಯಗಳಲ್ಲಿ 20 ಮ್ಯಾಚ್ಗಳಲ್ಲಿ ಟಾಸ್ ಗೆದ್ದು ಚೇಸಿಂಗ್ ಮಾಡಿದ ತಂಡವೇ ಗೆದ್ದಿದೆ. ಇನ್ನು ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿರುವುದು ಕೇವಲ 12 ಬಾರಿ ಮಾತ್ರ.

ನಿಮಗೆ ನೆನಪಿರುವಂತೆ, ಭಾರತ ತಂಡವು ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ್ ವಿರುದ್ಧ ಸೋತಿರುವುದು ಕೇವಲ ಒಮ್ಮೆ ಮಾತ್ರ. ಅದು ಕೂಡ ಇದೇ ಮೈದಾನದಲ್ಲಿ ಎಂಬುದು ಉಲ್ಲೇಖಾರ್ಹ. 2021ರ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ನೀಡಿದ 152 ರನ್ಗಳ ಗುರಿಯನ್ನು ಪಾಕಿಸ್ತಾನ್ ವಿಕೆಟ್ ನಷ್ಟವಿಲ್ಲದೆ ಚೇಸ್ ಮಾಡಿತ್ತು. ಅಂದು ಪಾಕ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದರು. ಇದೇ ಟೂರ್ನಿಯಲ್ಲಿ ನ್ಯೂಝಿಲೆಂಡ್ ಕೂಡ ಟೀಮ್ ಇಂಡಿಯಾವನ್ನು ಸೋಲಿಸಿತ್ತು.

ಅಂದರೆ ದುಬೈನಲ್ಲಿ ನಡೆದ 2021ರ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಟಾಸ್ ಸೋತ ಪಂದ್ಯಗಳಲ್ಲಿ ಮುಗ್ಗರಿಸಿತ್ತು. ಅಲ್ಲದೆ ಈ ಮೈದಾನದಲ್ಲಿ ಕಣಕ್ಕಿಳಿದ ಬಹುತೇಕ ತಂಡಗಳು ಚೇಸಿಂಗ್ ಮೂಲಕ ಗೆಲುವು ದಾಖಲಿಸಿದ ಇತಿಹಾಸವೇ ಇದೆ. ಹೀಗಾಗಿ ಈ ಬಾರಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆಲ್ಲಬೇಕಿದ್ದರೆ ಟಾಸ್ ಕೂಡ ನಿರ್ಣಾಯಕ ಪಾತ್ರವಹಿಸಲಿರುವುದು ಸ್ಪಷ್ಟ.



















