ಐಸಿಸಿಯ ಮತ್ತೊಂದು ಟೂರ್ನಿಗೆ ವೇದಿಕೆ ಸಿದ್ಧವಾಗಿದೆ. ಫೆಬ್ರವರಿ 19 ರಿಂದ ಪಾಕಿಸ್ತಾನದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಚಾಲನೆ ದೊರೆಯಲಿದೆ. 8 ತಂಡಗಳ ನಡುವಣ ಈ ಕದನಕ್ಕಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ತೆರಳುತ್ತಿಲ್ಲ ಎಂಬುದು ವಿಶೇಷ. ಅಂದರೆ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ.
ಅದರಂತೆ ಟೀಮ್ ಇಂಡಿಯಾದ ಪಂದ್ಯಗಳನ್ನು ದುಬೈನಲ್ಲಿ ನಡೆಯಲಿದೆ. ಉಳಿದ ಪಂದ್ಯಗಳು ಪಾಕಿಸ್ತಾನದಲ್ಲೇ ಜರುಗಲಿದೆ. ಭಾರತೀಯ ಆಟಗಾರರ ಸುರಕ್ಷತಾ ದೃಷ್ಟಿಯಿಂದ ಪಾಕ್ನಲ್ಲಿ ಪಂದ್ಯಾವಳಿ ಆಡಲು ಬಿಸಿಸಿಐ ಹಿಂದೇಟು ಹಾಕಿತ್ತು. ಅಲ್ಲದೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸುವಂತೆ ಐಸಿಸಿಗೆ ಮನವಿ ಮಾಡಿತ್ತು.
ಈ ಮನವಿಯನ್ನು ಒಪ್ಪಿಕೊಳ್ಳುವಂತೆ ಐಸಿಸಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಮನವೊಲಿಸಿದೆ. ಆದರೆ ಈ ಒಪ್ಪಿಗೆಗೂ ಮುನ್ನ ಪಾಕಿಸ್ತಾನ್ ಕೆಲ ಷರತ್ತುಗಳನ್ನು ಮುಂದಿಟ್ಟಿದೆ. ಈ ಷರತ್ತಿನಂತೆ ಭಾರತದಲ್ಲಿ ಮುಂಬರುವ ದಿನಗಳಲ್ಲಿ ನಡೆಯುವ ಐಸಿಸಿ ಟೂರ್ನಿಗಳನ್ನು ಸಹ ಹೈಬ್ರಿಡ್ ಮಾದರಿಯಲ್ಲೇ ಆಯೋಜಿಸಬೇಕೆಂದು ತಿಳಿಸಿದೆ.
ಅಂದರೆ ಇಲ್ಲಿ ಪಾಕಿಸ್ತಾನ್ ತಂಡ ಕೂಡ ಇನ್ಮುಂದೆ ಭಾರತದಲ್ಲಿ ಐಸಿಸಿ ಟೂರ್ನಿಗಳನ್ನು ಆಡಲ್ಲ ಎಂದು ತಿಳಿಸಿದೆ. ಇದಕ್ಕಾಗಿ 2031ರವರೆಗೆ ಭಾರತದಲ್ಲಿ ನಡೆಯುವ ಎಲ್ಲಾ ಐಸಿಸಿ ಟೂರ್ನಿಗಳನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಬೇಕೆಂದು ಬೇಡಿಕೆಯಿಟ್ಟಿದೆ. ಈ ಬೇಡಿಕೆಯನ್ನು ಒಪ್ಪುದಾದರೆ ಮಾತ್ರ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವುದಾಗಿ ಪಿಸಿಬಿ ಹೇಳಿಕೊಂಡಿತ್ತು.
ಈ ಎಲ್ಲಾ ಬೇಡಿಕೆಗಳಿಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಸ್ತು ಎಂದಿದ್ದು, ಅದರಂತೆ ಮುಂಬರುವ ದಿನಗಳಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಟೂರ್ನಿಗಳನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವುದಾಗಿ ಭರವಸೆ ನೀಡಿದೆ.
ಹೀಗಾಗಿ 2025 ರಲ್ಲಿ ಭಾರತದಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್, 2026 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್, 2029 ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ, 2031 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗಾಗಿ ಪಾಕಿಸ್ತಾನ್ ತಂಡವು ಭಾರತಕ್ಕೆ ಬರಲ್ಲ.
ಬದಲಾಗಿ ಬಿಸಿಸಿಐ ಹೈಬ್ರಿಡ್ ಮಾದರಿಯಲ್ಲಿ ಪಂದ್ಯವನ್ನು ಆಯೋಜಿಸಬೇಕಾಗುತ್ತದೆ. ಅದರಂತೆ ಭಾರತದಲ್ಲಿ ನಡೆಯಲಿರುವ 4 ಐಸಿಸಿ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ಜರುಗಲಿದ್ದು, ಈ ಟೂರ್ನಿಯಲ್ಲಿನ ಪಾಕಿಸ್ತಾನದ ಪಂದ್ಯಗಳಿಗೆ ಶ್ರೀಲಂಕಾ ಅಥವಾ ಯುಎಇ ಆತಿಥ್ಯವಹಿಸುವ ಸಾಧ್ಯತೆ ಹೆಚ್ಚು.
Published On - 8:08 am, Wed, 25 December 24