- Kannada News Photo gallery Cricket photos IND vs AUS: Virat Kohli set to break Sachin Tendulkar's record
Virat Kohli: ವಿರಾಟ್ ಕೊಹ್ಲಿ ಮುಂದಿದೆ ಮಾಸ್ಟರ್ ಬ್ಲಾಸ್ಟರ್ ದಾಖಲೆ
India vs Australia: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯವು ಡಿಸೆಂಬರ್ 26 ರಿಂದ ಶುರುವಾಗಲಿದೆ. ಈ ಸರಣಿಯ ಮೂಲಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆಯಬಹುದು. ಇದಕ್ಕಾಗಿ ಬೇಕಿರುವುದು ಕೇವಲ 134 ರನ್ಗಳು ಮಾತ್ರ. ಅಂದರೆ ಎರಡು ಇನಿಂಗ್ಸ್ಗಳಲ್ಲಿ ಕೊಹ್ಲಿ ಬ್ಯಾಟ್ನಿಂದ ಭರ್ಜರಿ ಶತಕ ಮೂಡಿಬಂದರೆ ಹೊಸ ದಾಖಲೆ ನಿರ್ಮಾಣವಾಗಲಿದೆ.
Updated on: Dec 25, 2024 | 11:44 AM

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವು ಗುರುವಾರದಿಂದ ಶುರುವಾಗಲಿದೆ. ಮೆಲ್ಬೋರ್ನ್ನಲ್ಲಿ ಎಂಸಿಜಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆಯಬಹುದು. ಅದು ಕೂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯುವ ಮೂಲಕ.

ಹೌದು, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ಗಳ ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಈ ಮೈದಾನದಲ್ಲಿ 10 ಇನಿಂಗ್ಸ್ ಆಡಿರುವ ಸಚಿನ್ ತೆಂಡೂಲ್ಕರ್ ಒಟ್ಟು 449 ರನ್ ಕಲೆಹಾಕಿದ್ದಾರೆ.

ಹಾಗೆಯೇ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಅಜಿಂಕ್ಯ ರಹಾನೆ. ಮೆಲ್ಬೋರ್ನ್ ಮೈದಾನದಲ್ಲಿ 6 ಇನಿಂಗ್ಸ್ ಆಡಿರುವ ರಹಾನೆ 369 ರನ್ ಬಾರಿಸಿದ್ದಾರೆ. ಈ ಮೂಲಕ ಎಂಸಿಜಿ ಅಂಗಳದಲ್ಲಿ ಅತ್ಯಧಿಕ ರನ್ ಕಲೆಹಾಕಿದ 2ನೇ ಭಾರತೀಯ ಎನಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕಿಂಗ್ ಕೊಹ್ಲಿ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈವರೆಗೆ 6 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಒಂದು ಶತಕ ಹಾಗೂ 2 ಅರ್ಧಶತಕಗಳೊಂದಿಗೆ 316 ರನ್ಗಳನ್ನು ಕಲೆಹಾಕಿದ್ದಾರೆ.

ಇದೀಗ 316 ರನ್ಗಳೊಂದಿಗೆ ಮೂರನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ನಲ್ಲಿ 134 ರನ್ ಕಲೆಹಾಕಿದರೆ ಅಗ್ರಸ್ಥಾನಕ್ಕೇರಬಹುದು. ಈ ಮೂಲಕ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎನಿಸಿಕೊಳ್ಳಬಹುದು.



















