ಮುಂದಿನ ವರ್ಷ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯವಹಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೆ. ಆದರೆ ಈ ಟೂರ್ನಿಯ ಆಯೋಜನೆಗೆ ಸಂಬಂಧಿಸಿದಂತೆ ಬಿಸಿಸಿಐ ಮತ್ತು ಪಿಸಿಬಿ ನಡುವಿನ ವಿವಾದ ಇದುವರೆಗೂ ಕೊನೆಗೊಂಡಿಲ್ಲ. ಹೀಗಾಗಿ ಐಸಿಸಿ, ಎರಡು ಮಂಡಳಿಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ವರ್ಚುವಲ್ ಸಭೆಯನ್ನು ಆಯೋಜಿಸಿದೆ. ಈ ಸಭೆಯಲ್ಲಿ ಐಸಿಸಿ, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ನಡೆಸಲು ಪಾಕಿಸ್ತಾನದ ಮೇಲೆ ಒತ್ತಡ ಹೇರುವ ನಿರೀಕ್ಷೆಯಿದೆ. ಹೀಗಾಗಿ ಐಸಿಸಿ ವಿರುದ್ಧವೇ ತಿರುಗಿಬೀಳಲು ಸಿದ್ದವಾಗಿರುವ ಪಿಸಿಬಿ, ಇದೀಗ ಬಿಸಿಸಿಐ ಹೂಡುತ್ತಿರುವ ಅಸ್ತ್ರವನ್ನೇ ಮುಂದಿನ ದಿನಗಳಲ್ಲಿ ಪ್ರತ್ಯಾಸ್ತ್ರವಾಗಿ ಬಳಸಲು ಸಜ್ಜಾಗಿದೆ ಎಂದು ವರದಿಯಾಗಿದೆ.
ವಾಸ್ತವವಾಗಿ ಚಾಂಪಿಯನ್ಸ್ ಟ್ರೋಫಿ ನಂತರ ಭಾರತದಲ್ಲಿ ಎರಡು ದೊಡ್ಡ ಟೂರ್ನಿಗಳು ನಡೆಯಲಿವೆ. ಮುಂದಿನ ವರ್ಷ ನಡೆಯಲ್ಲಿರುವ ಮಹಿಳಾ ಏಕದಿನ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಲಿದೆ. ಇದಾದ ನಂತರ, 2026 ಪುರುಷರ ಟಿ20 ವಿಶ್ವಕಪ್ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಬಿಸಿಸಿಐನಂತೆಯೇ ಪಿಸಿಬಿ ಕೂಡ ಅದೇ ನಿಲುವನ್ನು ಅಳವಡಿಸಿಕೊಳ್ಳಬಹುದು. ಒಂದು ವೇಳೆ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಒತ್ತಾಯಿಸಿದರೆ, ಮುಂದಿನ ಎರಡು ಪ್ರಮುಖ ಟೂರ್ನಿಗಳಿಗೂ ಅದನ್ನೇ ಬೇಡಿಕೆ ಇಡಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೂಲಗಳನ್ನು ಉಲ್ಲೇಖಿಸಿ ಟೆಲಿಗ್ರಾಫ್ ವರದಿ ಮಾಡಿದೆ.
ಮೂಲಗಳ ಪ್ರಕಾರ, ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಿದರೆ, ಮುಂದಿನ ವರ್ಷ ನಡೆಯಲ್ಲಿರುವ ಮಹಿಳಾ ಏಕದಿನ ವಿಶ್ವಕಪ್‌ಗೆ ಭಾರತಕ್ಕೆ ತನ್ನ ತಂಡವನ್ನು ಕಳುಹಿಸುವುದಿಲ್ಲ ಎಂದು ಪಿಸಿಬಿ, ಐಸಿಸಿಗೆ ಬೆದರಿಕೆ ಹಾಕಿದೆ. ಇದಲ್ಲದೆ, 2026 ರ ಟಿ20 ವಿಶ್ವಕಪ್‌ನಲ್ಲಿನ ಪಾಕಿಸ್ತಾನದ ಎಲ್ಲಾ ಪಂದ್ಯಗಳನ್ನು ಭಾರತದವನ್ನು ಬಿಟ್ಟು ಶ್ರೀಲಂಕಾದಲ್ಲಿ ಆಡುವುದಾಗಿ ಐಸಿಸಿಗೆ ಮಾಹಿತಿ ನೀಡಿದೆ ಎಂದು ವರದಿಯಾಗಿದೆ.
ಒಂದು ವೇಳೆ ಈ ಎರಡೂ ಪಂದ್ಯಾವಳಿಗಳನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸದಿದ್ದರೆ, ಪಾಕಿಸ್ತಾನ ಈ ಎರಡೂ ಪಂದ್ಯಾವಳಿಗಳಿಂದ ತನ್ನ ಹೆಸರನ್ನು ಹಿಂತೆಗೆದುಕೊಳ್ಳಲಿದೆ ಎಂದು ವರದಿಯಾಗಿದೆ. ಭಾರತ ತಂಡ ಪಾಕಿಸ್ತಾನಕ್ಕೆ ಹೋಗದಿದ್ದರೆ ಪಾಕಿಸ್ತಾನ ತಂಡವೂ ಭಾರತಕ್ಕೆ ಬರುವುದಿಲ್ಲ ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಇತ್ತೀಚೆಗೆ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಆ ಪ್ರಕಾರ, ಮುಂದಿನ ದಿನಗಳಲ್ಲಿ ಬಿಸಿಸಿಐ ನಡೆಯನ್ನೇ ಪಿಸಿಬಿ ಅನುಸರಿಸುವ ಸಾಧ್ಯತೆಗಳಿವೆ.
ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೂಡ ಚಾಂಪಿಯನ್ಸ್ ಟ್ರೋಫಿ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ‘ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಇದರ ಹೊರತಾಗಿ ಇತರ ಆಯ್ಕೆಗಳೂ ಇವೆ. ನಮಗೆ ಭಾರತೀಯ ಆಟಗಾರರ ಸುರಕ್ಷತೆಯೇ ಮೊದಲ ಆದ್ಯತೆ, ಅದರ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಇದೀಗ ಮಾತುಕತೆ ನಡೆಯುತ್ತಿದೆ, ಎಲ್ಲವೂ ಅಂತಿಮಗೊಂಡ ನಂತರ ನಾವು ನಿಮಗೆ ತಿಳಿಸುತ್ತೇವೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ