ENG vs AFG: ಐತಿಹಾಸಿಕ ಜಯ: ಆಂಗ್ಲರನ್ನು ಗಂಟು ಮೂಟೆ ಕಟ್ಟಿಸಿದ ಅಫ್ಘಾನ್ನರು

|

Updated on: Feb 27, 2025 | 7:18 AM

Afghanistan vs England: 2023 ರಲ್ಲಿ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿದ್ದ ಅಫ್ಘಾನಿಸ್ತಾನ್ ತಂಡವು ಇದೀಗ ಮತ್ತೊಮ್ಮೆ ಆಂಗ್ಲ ಪಡೆಗೆ ಆಘಾತ ನೀಡಿದ್ದಾರೆ. ಅದು ಕೂಡ 8 ರನ್ ಗಳ ವಿಜಯ ಸಾಧಿಸುವ ಮೂಲಕ. ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ್ ತಂಡ ಸೆಮಿಫೈನಲ್ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಇನ್ನು ಸೋತಿರುವ ಇಂಗ್ಲೆಂಡ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.

ENG vs AFG: ಐತಿಹಾಸಿಕ ಜಯ: ಆಂಗ್ಲರನ್ನು ಗಂಟು ಮೂಟೆ ಕಟ್ಟಿಸಿದ ಅಫ್ಘಾನ್ನರು
Aghanistan
Follow us on

ಚಾಂಪಿಯನ್ಸ್ ಟ್ರೋಫಿಯಲ್ಲಿ ಅಫ್ಘಾನಿಸ್ತಾನ್ ಐತಿಹಾಸಿಕ ಗೆಲುವು ದಾಖಲಿಸಿದೆ. ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್‌ ತಂಡವನ್ನು ಬಗ್ಗು ಬಡಿದಿರುವ ಅಫ್ಘಾನಿಸ್ತಾನ್ ಸೆಮಿಫೈನಲ್ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಅತ್ತ ಸೋತಿರುವ ಆಂಗ್ಲ ಪಡೆ ಟೂರ್ನಿಯಿಂದ ಹೊರಬಿದ್ದಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ್ ತಂಡದ ಪರ ಯುವ ಬ್ಯಾಟರ್ ಇಬ್ರಾಹಿಂ ಝದ್ರಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಇಂಗ್ಲೆಂಡ್ ತಂಡದ ಅನುಭವಿ ಬೌಲರ್‌ಗಳ ಮುಂದೆ ಸೆಟೆದು ನಿಂತ ಇಬ್ರಾಹಿಂ ಕೇವಲ 106 ಎಸೆತಗಳಲ್ಲಿ ಶತಕ ಪೂರೈಸಿದರು. ಇನ್ನು ಝದ್ರಾನ್​ಗೆ ಉತ್ತಮ ಸಾಥ್ ನೀಡಿದ ಶಾಹಿದಿ 67 ಎಸೆತಗಳಲ್ಲಿ 40 ರನ್ ಬಾರಿಸಿದರೆ, ಅಝ್ಮತ್ 31 ಎಸೆತಗಳಲ್ಲಿ 41 ರನ್ ಸಿಡಿಸಿದರು.

ಇದರ ನಡುವೆ 150 ರನ್ ಗಳನ್ನು ಪೂರೈಸಿದ ಇಬ್ರಾಹಿಂ ಝದ್ರಾನ್ ಅಂತಿಮವಾಗಿ 146 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 12 ಫೋರ್ ಗಳೊಂದಿಗೆ 177 ರನ್ ಬಾರಿಸಿ ಔಟಾದರು. ಕೊನೆಯ ಓವರ್‌ಗಳ ವೇಳೆ ಅಬ್ಬರಿಸಿದ ಮೊಹಮ್ಮದ್ ನಬಿ ಕೇವಲ 24 ಎಸೆತಗಳಲ್ಲಿ 40 ರನ್ ಚಚ್ಚಿದರು. ಈ ಮೂಲಕ ಅಫ್ಘಾನಿಸ್ತಾನ್ 50 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 325 ರನ್ ಕಲೆಹಾಕಿತು.

326 ರನ್ ಗಳ ಗುರಿ:

ಅಫ್ಘಾನಿಸ್ತಾನ್ ನೀಡಿದ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಫಿಲ್ ಸಾಲ್ಟ್ 12 ರನ್ ಗಳಿಸಿ ಔಟಾದರೆ, ಆ ಬಳಿಕ ಬಂದ ಜೇಮಿ ಸ್ಮಿತ್ 9 ರನ್​ಗೆ ವಿಕೆಟ್ ಒಪ್ಪಿಸಿದರು. ಇನ್ನು ಬೆನ್ ಡಕೆಟ್ 38 ರನ್ ಬಾರಿಸಿದರೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿರಲಿಲ್ಲ. ಈ ಹಂತದಲ್ಲಿ ಕಣಕ್ಕಿಳಿದ ಜೋ ರೂಟ್ ಏಕಾಂಗಿ ಹೋರಾಟಕ್ಕೆ ಮುಂದಾದರು.

ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ರೂಟ್ 111 ಎಸೆತಗಳಲ್ಲಿ 11 ಫೋರ್ ಹಾಗೂ ಒಂದು ಸಿಕ್ಸ್ ನೊಂದಿಗೆ 120 ರನ್ ಬಾರಿಸಿದರು. ಆದರೆ ತಂಡದ ಮೊತ್ತ 287 ರನ್ ಆಗಿದ್ದ ವೇಳೆ ರೂಟ್ ವಿಕೆಟ್ ಪಡೆಯುವಲ್ಲಿ ಅಝ್ಮತ್ ಯಶಸ್ವಿಯಾದರು.

ಪರಿಣಾಮ ಕೊನೆಯ ಎರಡು ಓವರುಗಳಲ್ಲಿ ಇಂಗ್ಲೆಂಡ್ ತಂಡಕ್ಕೆ 16 ರನ್ ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ದಾಳಿಗಿಳಿದ ಫಝಲ್ ಹಕ್ ಫಾರೂಖಿ ಜೋಫ್ರಾ ಆರ್ಚರ್ ವಿಕೆಟ್ ಪಡೆದು ಕೇವಲ 3 ರನ್ ಮಾತ್ರ ಬಿಟ್ಟು ಕೊಟ್ಟರು.

ಅಂತಿಮವಾಗಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು ಕೊನೆಯ ಓವರ್‌ನಲ್ಲಿ 13 ರನ್ ಬೇಕಿತ್ತು. 50ನೇ ಓವರ್ ಎಸೆದ ಅಝ್ಮತ್ 5ನೇ ಎಸೆತದಲ್ಲಿ ಆದಿಲ್ ರಶೀದ್ ವಿಕೆಟ್ ಕಬಳಿಸಿ ಅಫ್ಘಾನಿಸ್ತಾನ್ ತಂಡಕ್ಕೆ 8 ರನ್ ಗಳ ರೋಚಕ ಜಯ ತಂದುಕೊಟ್ಟರು.

ಈ ಗೆಲುವಿನೊಂದಿಗೆ ಅಫ್ಘಾನ್ ಪಡೆ ಸೆಮಿಫೈನಲ್ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಅತ್ತ ಎರಡೂ ಪಂದ್ಯಗಳಲ್ಲೂ ಸೋತಿರುವ ಇಂಗ್ಲೆಂಡ್ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿದೆ.

ವಿಶೇಷ ಎಂದರೆ ಇದು ಅಫ್ಗಾನಿಸ್ತಾನ್ ತಂಡದ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಟೂರ್ನಿ. ಇದೀಗ ಚೊಚ್ಚಲ ಟೂರ್ನಿಯಲ್ಲೇ ಅಫ್ಘಾನ್ ಪಡೆ ಬಲಿಷ್ಠ ತಂಡವನ್ನು ಮಕಾಡೆ ಮಲಗಿಸುವಲ್ಲಿ ಯಶಸ್ವಿಯಾಗಿದೆ.

ಅಫ್ಘಾನಿಸ್ತಾನ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ಇಬ್ರಾಹಿಂ ಝದ್ರಾನ್ , ಸೇದಿಕುಲ್ಲಾ ಅಟಲ್ , ರಹಮತ್ ಷಾ , ಹಶ್ಮತುಲ್ಲಾ ಶಾಹಿದಿ (ನಾಯಕ) , ಅಝ್ಮತುಲ್ಲಾ ಒಮರ್​ಝಾಹಿ, ಮೊಹಮ್ಮದ್ ನಬಿ , ಗುಲ್ಬದಿನ್ ನೈಬ್ , ರಶೀದ್ ಖಾನ್ , ನೂರ್ ಅಹ್ಮದ್ , ಫಝಲ್​ ಹಕ್ ಫಾರೂಖಿ.

ಇದನ್ನೂ ಓದಿ: ಅಬ್ಬರಿಸಿ ಬೊಬ್ಬಿರಿದು ವಿರಾಟ್ ಕೊಹ್ಲಿ ಬರೆದ ದಾಖಲೆಗಳು ಒಂದೆರೆಡಲ್ಲ..!

ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲಿಪ್ ಸಾಲ್ಟ್ , ಬೆನ್ ಡಕೆಟ್ , ಜೇಮಿ ಸ್ಮಿತ್ (ವಿಕೆಟ್ ಕೀಪರ್) , ಜೋ ರೂಟ್ , ಹ್ಯಾರಿ ಬ್ರೂಕ್ , ಜೋಸ್ ಬಟ್ಲರ್ (ನಾಯಕ) , ಲಿಯಾಮ್ ಲಿವಿಂಗ್‌ಸ್ಟೋನ್ , ಜೋಫ್ರಾ ಆರ್ಚರ್ , ಜೇಮೀ ಓವರ್ಟನ್ , ಆದಿಲ್ ರಶೀದ್ , ಮಾರ್ಕ್ ವುಡ್.

Published On - 7:17 am, Thu, 27 February 25