ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾಗೆ ಅನುಕೂಲ: ಪಾಕ್ ಕ್ರಿಕೆಟಿಗರು ಕಿಡಿ

|

Updated on: Jan 08, 2025 | 10:23 AM

Champions Trophy 2025: ಚಾಂಪಿಯನ್ಸ್ ಟ್ರೋಫಿ 2025 ಫೆಬ್ರವರಿ 19 ರಿಂದ ಶುರುವಾಗಲಿದೆ. ಮಾರ್ಚ್ 9 ರವರೆಗೆ ನಡೆಯಲಿರುವ ಈ ಟೂರ್ನಿಯ ಮೊದಲ ಮ್ಯಾಚ್​ನಲ್ಲಿ ಆತಿಥೇಯ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಫೆಬ್ರವರಿ 20 ರಂದು ಬಾಂಗ್ಲಾದೇಶ್ ವಿರುದ್ಧ ಕಣಕ್ಕಿಳಿಯುವ ಮೂಲಕ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾಗೆ ಅನುಕೂಲ: ಪಾಕ್ ಕ್ರಿಕೆಟಿಗರು ಕಿಡಿ
Team India
Follow us on

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಶುರುವಾಗಲು ಇನ್ನು ತಿಂಗಳು ಮಾತ್ರ ಉಳಿದಿವೆ. ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯ ಬಹುತೇಕ ಮ್ಯಾಚ್​ಗಳು ಪಾಕಿಸ್ತಾನದಲ್ಲಿ ಜರುಗಿದರೆ, ಟೀಮ್ ಇಂಡಿಯಾದ ಪಂದ್ಯಗಳು ದುಬೈನಲ್ಲಿ ಆಯೋಜನೆಗೊಳ್ಳಲಿದೆ. ಇತ್ತ ಭಾರತ ತಂಡದ ಪಂದ್ಯಗಳು ಒಂದೇ ಮೈದಾನದಲ್ಲಿ ನಡೆಯುತ್ತಿರುವುದರ ಬಗ್ಗೆ ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಚಾಂಪಿಯನ್ಸ್​ ಟ್ರೋಫಿ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವುದರಿಂದ ಟೀಮ್ ಇಂಡಿಯಾ ಇತರ ತಂಡಗಳಿಗಿಂತ ಹೆಚ್ಚಿನ ಲಾಭವನ್ನು ಪಡೆಯಲಿದೆ ಎಂದು ಡಾನ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನದ ಮಾಜಿ ಬೌಲರ್ ಸಲೀಂ ಅಲ್ತಾಫ್ ಹೇಳಿದ್ದಾರೆ.

ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ಒಟ್ಟು 8 ತಂಡಗಳಿದ್ದು, ಇಲ್ಲಿ ಟೀಮ್ ಇಂಡಿಯಾ ಮಾತ್ರ ಒಂದೇ ಮೈದಾನದಲ್ಲಿ ತನ್ನ ಪಂದ್ಯಗಳನ್ನಾಡಲಿದೆ. ಇದೇ ವೇಳೆ ಇತರೆ ತಂಡಗಳು ಪಾಕಿಸ್ತಾನದ ಮೂರು ಮೈದಾನದಲ್ಲಿ ಕಣಕ್ಕಿಳಿಯುತ್ತಿದೆ. ಹೀಗಾಗಿ ಹೈಬ್ರಿಡ್ ಮಾದರಿಯು ಟೀಮ್ ಇಂಡಿಯಾ ಪಾಲಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಎಂದು ಅಲ್ತಾಫ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡವು ಲೀಗ್ ಹಂತದಲ್ಲಿ ಪಾಕಿಸ್ತಾನ್, ನ್ಯೂಝಿಲೆಂಡ್ ಮತ್ತು ಬಾಂಗ್ಲಾದೇಶ್ ವಿರುದ್ಧ ಪಂದ್ಯಗಳನ್ನಾಡಲಿದೆ. ಇದಕ್ಕಾಗಿ ಪಾಕಿಸ್ತಾನ್, ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ತಂಡಗಳು ದುಬೈಗೆ ಹೋಗಬೇಕಾಗುತ್ತದೆ. ಆದರೆ ಟೀಮ್ ಇಂಡಿಯಾಗೆ ಯಾವುದೇ ಪ್ರಯಾಣದ ಚಿಂತೆಯಿಲ್ಲ.

ಇಲ್ಲಿ ಉಳಿದ ಮೂರು ತಂಡಗಳು ದುಬೈಗೆ ಹೋಗಿ ಅಲ್ಲಿನ ಪರಿಸ್ಥಿತಿಗೆ ಒಗ್ಗಿಕೊಳ್ಳಬೇಕು. ಆದರೆ ಭಾರತ ತಂಡವು ಎಲ್ಲಾ ಪಂದ್ಯಗಳನ್ನು ಅಲ್ಲೇ ಆಡುವುದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಅದರಲ್ಲೂ ಪ್ರಯಾಣದ ಆಯಾಸವು ಟೀಮ್ ಇಂಡಿಯಾವನ್ನು ಕಾಡುವುದಿಲ್ಲ. ಇದುವೇ ಭಾರತ ತಂಡಕ್ಕೆ ಪಾಲಿಗೆ ದೊಡ್ಡ ಅನುಕೂಲ ಎಂದು ಸಲೀಂ ಅಲ್ತಾಫ್ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಪಾಕಿಸ್ತಾನ್ ತಂಡದ ಮಾಜಿ ನಾಯಕ ನಾಯಕ ಇಂತಿಖಾಬ್ ಆಲಂ, ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯವನ್ನು ಎಲ್ಲಿ ಆಡಬೇಕೆಂದು ತಿಳಿದಿರುವ ಏಕೈಕ ತಂಡ ಭಾರತ. ಅದೇ ಉಳಿದ ತಂಡಗಳ ಸೆಮಿಫೈನಲ್ ನಿರ್ಧಾರವಾಗುವುದು ಗ್ರೂಪ್ ಹಂತದ ಪಂದ್ಯಗಳ ಬಳಿಕ. ಇದರಿಂದ ಟೀಮ್ ಇಂಡಿಯಾ ಒಂದೇ ಪಿಚ್​ನಲ್ಲಿ ಹೊಂದಿಕೊಳ್ಳಲು ಕೂಡ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತರ ತಂಡಗಳಂತೆ ಟೀಮ್ ಇಂಡಿಯಾ ಇಡೀ ಟೂರ್ನಿಯಲ್ಲಿ ಎಲ್ಲೂ ಸಹ ಪ್ರಯಾಣಿಸಲ್ಲ. ಇದರೊಂದಿಗೆ, ಅವರು ಒಂದೇ ರೀತಿಯ ಪಿಚ್‌ಗಳು ಮತ್ತು ಕ್ರಿಕೆಟ್ ವಾತಾವರಣವನ್ನು ಪಡೆಯುತ್ತಾರೆ. ಇದು ಇತರ ತಂಡಗಳಿಗೆ ಮಾಡುವ ಅನ್ಯಾಯ. ಉಳಿದ ಕ್ರಿಕೆಟ್ ಮಂಡಳಿಗಳು ಯಾವುದೇ ಆಕ್ಷೇಪ ವ್ಯಕ್ತಪಡಿಸದಿರುವುದು ನನಗೆ ಆಶ್ಚರ್ಯ ತಂದಿದೆ ಎಂದು ಇಂತಿಖಾಬ್ ಆಲಂ ಹೇಳಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿಗೆ ಟೀಮ್ ಇಂಡಿಯಾದ 36 ಆಟಗಾರರ ಪಟ್ಟಿ ರೆಡಿ

ಒಟ್ಟಿನಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ತಿಂಗಳು ಮಾತ್ರ ಉಳಿದಿರುವಾಗ ಹೈಬ್ರಿಡ್ ಮಾದರಿ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಚಕಾರವೆತ್ತಿದ್ದು, ಇದರ ಬೆನ್ನಲ್ಲೇ ಟೂರ್ನಿಯಲ್ಲಿ ಟೀಮ್ ಇಂಡಿಯಾಗೆ ಆಗುವ ಅನುಕೂಲಗಳ ಬಗ್ಗೆ ಚರ್ಚೆಗಳು ಶುರುವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ