
2025 ರ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ಆರಂಭವಾಗಿದೆ. ಈ ಐಸಿಸಿ ಟೂರ್ನಮೆಂಟ್‌ನ ಮೊದಲ ಪಂದ್ಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಕರಾಚಿಯ ನ್ಯಾಷನಲ್ ಬ್ಯಾಂಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಮತ್ತು ಕ್ರಿಕೆಟ್ ದಂತಕಥೆಗಳು ಚಾಂಪಿಯನ್ಸ್ ಟ್ರೋಫಿಯ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಮೊದಲ ಪಂದ್ಯದಿಂದಲೇ ಪಾಕಿಸ್ತಾನ ಮುಜುಗರಕ್ಕೀಡಾಗಿದೆ. ಇದಕ್ಕೆ ಕಾರಣ ಈ ಐಸಿಸಿ ಟೂರ್ನಿಯಲ್ಲೂ ಇಡೀ ಕ್ರೀಡಾಂಗಣ ಖಾಲಿ ಖಾಲಿ ಹೊಡೆಯುತ್ತಿರುವುದು. ಆತಿಥೇಯ ಪಾಕಿಸ್ತಾನ ತಂಡ ತನ್ನ ತವರು ಮೈದಾನದಲ್ಲಿ ಮೊದಲ ಪಂದ್ಯವನ್ನಾಡುತ್ತಿದ್ದರೂ ಪಂದ್ಯವನ್ನು ವೀಕ್ಷಿಸಲು ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬಂದಿಲ್ಲ. ಇದನ್ನು ಗಮನಿಸಿದ ಇಂಗ್ಲೆಂಡ್‌ನ ಮಾಜಿ ಆಟಗಾರ ಮೈಕೆಲ್ ವಾನ್ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡು ಪಾಕಿಸ್ತಾನದ ಕಾಲೆಳೆದಿದ್ದಾರೆ.
ವಾಸ್ತವವಾಗಿ ಈ ಹಿಂದೆ 1996 ರಲ್ಲಿ ಪಾಕಿಸ್ತಾನದಲ್ಲಿ ಏಕದಿನ ವಿಶ್ವಕಪ್ ಆಯೋಜಿಸಲಾಗಿತ್ತು. ಆ ನಂತರ ಒಂದೇ ಒಂದು ಐಸಿಸಿ ಟೂರ್ನಿ ಪಾಕಿಸ್ತಾನದಲ್ಲಿ ನಡೆದಿರಲಿಲ್ಲ. ಇದೀಗ 29 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಮೆಂಟ್ ನಡೆಯುತ್ತಿದೆ. ಇದಕ್ಕೆ ಸಂತೋಷ ವ್ಯಕ್ತಪಡಿಸಿದ ಮೈಕಲ್ ವಾನ್, ಅಭಿಮಾನಿಗಳ ಕೊರತೆಯನ್ನು ಉಲ್ಲೇಖಿಸಿ ಪಾಕಿಸ್ತಾನವನ್ನು ಗೇಲಿ ಮಾಡಿದ್ದಾರೆ. ‘ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿರುವುದು ನೋಡಲು ತುಂಬಾ ಸಂತೋಷವಾಗಿದೆ.. 1996 ರ ನಂತರದ ಮೊದಲ ಪ್ರಮುಖ ಟೂರ್ನಿ ಇಲ್ಲಿ ನಡೆಯುತ್ತಿದೆ.. ಆದರೆ ಸ್ಥಳೀಯರಿಗೆ ಈ ಈವೆಂಟ್ ಬಗ್ಗೆ ತಿಳಿಸುವಲ್ಲಿ ಪಿಸಿಬಿ ಮರೆತಿದ್ದಾರೆಯೇ?’. ಜನಸಂದಣಿ ಎಲ್ಲಿದೆ? ಎಂದು ವಾನ್ ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಬರೆದುಕೊಂಡಿದ್ದಾರೆ.
Great to see the champions trophy being played in Pakistan .. First major event since 1996 .. Have they forgotten to tell the locals it’s on .. Where is the crowd ?? #ChampionsTrophy2025
— Michael Vaughan (@MichaelVaughan) February 19, 2025
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಉದ್ಘಾಟನಾ ಪಂದ್ಯ ಮಧ್ಯಾಹ್ನ 2.30 ಕ್ಕೆ ಪ್ರಾರಂಭವಾಯಿತು. ಮೊದಲ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಸೇರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅದರಲ್ಲೂ ಪಾಕಿಸ್ತಾನದಲ್ಲಿ 29 ವರ್ಷಗಳ ನಂತರ ಐಸಿಸಿ ಈವೆಂಟ್ ನಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬರುವ ನಿರೀಕ್ಷೆಯಿತ್ತು. ಆದರೆ ಪಂದ್ಯಾವಳಿ ಪ್ರಾರಂಭವಾದಾಗ, ದೊಡ್ಡ ನಿರಾಶೆ ಕಾದಿತ್ತು. ನ್ಯಾಷನಲ್ ಬ್ಯಾಂಕ್ ಕ್ರೀಡಾಂಗಣದ ಅನೇಕ ಸ್ಟ್ಯಾಂಡ್‌ಗಳು ಖಾಲಿಯಿದ್ದವು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಕ್ರಿಕೆಟ್ ತಂಡ 320 ರನ್‌ಗಳ ಗುರಿ ನೀಡಿದೆ. ನ್ಯೂಜಿಲೆಂಡ್ ಪರ ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕ ಗಳಿಸಿದರೆ, ಇತರರಿಗೆ ಯಾವುದೇ ವಿಶೇಷ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ವಿಲ್ ಯಂಗ್ ಮತ್ತು ಟಾಮ್ ಲ್ಯಾಥಮ್ ಶತಕ ಬಾರಿಸಿದರೆ ಗ್ಲೆನ್ ಫಿಲಿಪ್ಸ್ ಅರ್ಧಶತಕದ ಇನ್ನಿಂಗ್ಸ್ ಆಡಿದರು ಇದರಿಂದಾಗಿ ನ್ಯೂಜಿಲೆಂಡ್ 300 ರನ್ ದಾಟಲು ಸಾಧ್ಯವಾಯಿತು. ಅಂತಿಮವಾಗಿ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 320 ರನ್ ಕಲೆಹಾಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:21 pm, Wed, 19 February 25