AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Champions Trophy 2025: ಮೊದಲ ಪಂದ್ಯಕ್ಕೂ ಮುನ್ನವೇ ನಾಲ್ವರು ಆಟಗಾರರಿಗೆ ರೋಹಿತ್ ಖಡಕ್ ಸೂಚನೆ

Rohit Sharma on India's Champions Trophy Prospects: ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಅದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಟಾಪ್ 4 ಬ್ಯಾಟ್ಸ್‌ಮನ್‌ಗಳು (ರೋಹಿತ್, ಕೊಹ್ಲಿ, ಗಿಲ್, ಅಯ್ಯರ್) ಉತ್ತಮ ಪ್ರದರ್ಶನ ನೀಡಬೇಕೆಂದು ನಿರೀಕ್ಷಿಸಿದ್ದಾರೆ. ಸ್ಪಿನ್ನರ್‌ಗಳ ಬಗ್ಗೆಯೂ ಮಾತನಾಡಿದ ರೋಹಿತ್, ಅವರನ್ನು ಆಲ್‌ರೌಂಡರ್‌ಗಳೆಂದು ಪರಿಗಣಿಸಿ ತಂಡದ ಬ್ಯಾಟಿಂಗ್‌ಗೆ ಬಲ ತುಂಬುವುದಾಗಿ ಹೇಳಿದ್ದಾರೆ. ಈ ಟೂರ್ನಿಯ ಮಹತ್ವವನ್ನು ಒತ್ತಿಹೇಳಿದ ರೋಹಿತ್, ಗೆಲುವಿಗಾಗಿ ಕಠಿಣ ಪರಿಶ್ರಮ ಅಗತ್ಯವಿದೆ ಎಂದಿದ್ದಾರೆ.

Champions Trophy 2025: ಮೊದಲ ಪಂದ್ಯಕ್ಕೂ ಮುನ್ನವೇ ನಾಲ್ವರು ಆಟಗಾರರಿಗೆ ರೋಹಿತ್ ಖಡಕ್ ಸೂಚನೆ
ಟೀಂ ಇಂಡಿಯಾ
ಪೃಥ್ವಿಶಂಕರ
|

Updated on: Feb 19, 2025 | 8:09 PM

Share

ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ನಾಳೆಯಿಂದ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಜನವರಿ 20 ರ ಗುರುವಾರದಂದು ನಡೆಯುವ ಈ ಟೂರ್ನಿಯ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಪಂದ್ಯಾವಳಿಯ ಸಿದ್ಧತೆಗಳು ಮತ್ತು ಮಹತ್ವದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಇದೇ ವೇಳೆ ತಂಡದ 4 ಆಟಗಾರರ ಬಗ್ಗೆ ಮಾತನಾಡಿದ ರೋಹಿತ್ ಈ ನಾಲ್ವರು ಆಟಗಾರರು ಉತ್ತಮ ಪ್ರದರ್ಶನ ನೀಡಬೇಕು ಎಂದು ಹೇಳಿದರು.

ನಾಲ್ವರು ಆಟಗಾರರಿಗೆ ರೋಹಿತ್ ಸಂದೇಶ

ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಒಂದು ದಿನ ಮೊದಲು ನಾಯಕ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಮಾತನಾಡಿದ ರೋಹಿತ್, ‘ಟೀಂ ಇಂಡಿಯಾ ಈ ಪಂದ್ಯಾವಳಿಯನ್ನು ಇತರೆ ಸರಣಿಯಂತೆಯೇ ಆಡುತ್ತದೆ ಏಕೆಂದರೆ ಇದು ಎಲ್ಲರಿಗೂ ಸಂಪೂರ್ಣ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದರು. ಇದೇ ವೇಳೆ ತಂಡದ ಬ್ಯಾಟಿಂಗ್ ವಿಭಾಗದ ಬಗ್ಗೆ ವಿಶೇಷವಾಗಿ ಮಾತನಾಡಿದ ರೋಹಿತ್, ತಂಡದ ಅಗ್ರ ನಾಲ್ವರು ಆಟಗಾರರು ದೊಡ್ಡ ಸ್ಕೋರ್ ಗಳಿಸಬೇಕು ಎಂದರು. ಅಂದರೆ ನಾಯಕ ರೋಹಿತ್ ಅವರು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಉಪನಾಯಕ ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ತಮ್ಮ ಬಗ್ಗೆ ಉಲ್ಲೇಖಿಸಿದರು.

ಈ ನಾಲ್ವರು ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದರಲ್ಲಿ ಶುಭ್​ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಮೂರು ಪಂದ್ಯಗಳಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿ ಹೆಚ್ಚು ರನ್ ಗಳಿಸಿದರೆ, ನಾಯಕ ರೋಹಿತ್ ಶರ್ಮಾ 2 ಪಂದ್ಯಗಳಲ್ಲಿ ವಿಫಲರಾದರೆ ಒಂದು ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದರು. ಒಂದು ಪಂದ್ಯದಲ್ಲಿ ವಿಫಲರಾಗಿದ್ದ ವಿರಾಟ್, ಮುಂದಿನ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದರು. ಹೀಗಾಗಿ ಈ ಐಸಿಸಿ ಟೂರ್ನಿಯಲ್ಲೂ ಟೀಂ ಇಂಡಿಯಾದ ಈ ನಾಲ್ವರು ಉತ್ತಮ ಪ್ರದರ್ಶನ ನೀಡಿದರೆ ತಂಡಕ್ಕೆ ಗೆಲುವು ಕಷ್ಟವಲ್ಲ.

ಸ್ಪಿನ್ನರ್‌ಗಳ ಬಗ್ಗೆ ರೋಹಿತ್ ಹೇಳಿದ್ದೇನು?

ಇದೇ ವೇಳೆ ಟೀಂ ಇಂಡಿಯಾದಲ್ಲಿ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಸೇರಿದಂತೆ ಐವರು ಸ್ಪಿನ್ನರ್‌ಗಳನ್ನು ಆಡಿಸುತ್ತಿರುವುದರ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಬೇರೆಯದೇ ದೃಷ್ಟಿಕೋನದಿಂದ ಉತ್ತರಿಸಿದ ರೋಹಿತ್, ‘ನಮ್ಮಲ್ಲಿ ಇಬ್ಬರು ಸ್ಪಿನ್ನರ್‌ಗಳಿದ್ದಾರೆ, ಉಳಿದ 3 ಮಂದಿ ಆಲ್‌ರೌಂಡರ್‌ಗಳು. ಈ ಮೂವರೂ ನಮ್ಮ ಬ್ಯಾಟಿಂಗ್‌ ವಿಭಾಗಕ್ಕೆ ಮತ್ತಷ್ಟು ಬಲ ತುಂಬುತ್ತಾರೆ. ಇದು ನಮ್ಮ ಶಕ್ತಿ ಮತ್ತು ನಾವು ಅದರ ಮೇಲೆ ಕೇಂದ್ರೀಕರಿಸಿದ್ದೇವೆ ಎಂದರು.

ಇನ್ನು ಈ ಪಂದ್ಯಾವಳಿಯ ಮಹತ್ವದ ಬಗ್ಗೆ ಮಾತನಾಡಿದ ರೋಹಿತ್, ‘ಎಂಟು ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿದೆ. ಪ್ರತಿಯೊಂದು ಐಸಿಸಿ ಟ್ರೋಫಿಯೂ ನಮಗೆ ಮುಖ್ಯ. ಟ್ರೋಫಿ ಗೆಲ್ಲಲು ನಾವು ಅನೇಕ ಕೆಲಸಗಳನ್ನು ಸರಿಯಾಗಿ ಮಾಡಬೇಕು ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ